ಆಫ್ಘನಿಸ್ತಾನ ಕುರಿತ ಹೊಸ ಮಾತುಕತೆ ಸಭೆಗೆ ಪಾಕಿಸ್ತಾನ, ಚೀನಾ, ರಷ್ಯಾ, ಅಮೆರಿಕ ಸಮ್ಮತಿ

ಮಾಸ್ಕೋ, ಅ 26:   ಆಫ್ಘನಿಸ್ತಾನ ಕುರಿತ ಹೊಸ ಮಾತುಕತೆಗೆ ಸಭೆ ಸೇರಲು ಪಾಕಿಸ್ತಾನ, ಚೀನಾ, ರಷ್ಯಾ ಮತ್ತು ಅಮೆರಿಕ ಶುಕ್ರವಾರ ಸಮ್ಮತಿಸಿವೆ ಎಂದು ಪಾಕಿಸ್ತಾನದ ಹೆಚ್ಚುವರಿ ವಿದೇಶಾಂಗ ಕಾರ್ಯದರ್ಶಿ ಮಹಮದ್ ಏಜಾಜ್ ಸಂದರ್ಶನವೊಂದರಲ್ಲಿ ಸ್ಪುಟ್ನಿಕ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.    ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಕುರಿತ ಮಾತುಕತೆ ಸಭೆಯನ್ನು ರಷ್ಯಾ ಆಯೋಜಿಸಲಿದೆ ಎಂದು ನಾಲ್ಕೂ ದೇಶಗಳ ರಾಯಭಾರಿಗಳು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.     'ಮುಂದಿನ ಸುತ್ತಿನಲ್ಲಿ ಫಲಪ್ರಧ ಮಾತುಕತೆ ನಡೆಯಬೇಕೆಂಬ ಇಚ್ಛೆಯೊಂದಿಗೆ ಸಭೆಯನ್ನು ಆಯೋಜಿಸಲಾಗುತ್ತಿದೆ. ಸ್ಥಳ ಮತ್ತು ದಿನಾಂಕವನ್ನು ಪರಸ್ಪರ ರಾಜತಾಂತ್ರಿಕ ಮಾತುಕತೆ ನಂತರ ನಿರ್ಧರಿಸಲಾಗುವುದು. ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಪಾಕಿಸ್ತಾನ, ರಷ್ಯಾ,ಚೀನಾ ಮತ್ತು ಅಮೆರಿಕ ಒಳಗೊಂಡ ವೇದಿಕೆ ತುಂಬಾ ಮುಖ್ಯವಾಗಿದೆ. ಶಾಂತಿ ಸ್ಥಾಪನೆಗೆ ಅಗತ್ಯವಿರುವ ಕ್ರಮಗಳ ಬಗ್ಗೆ ಸಭೆ ತೀರ್ಮಾನಿಸುವ ನಿರೀಕ್ಷೆ ಇದೆ ಎಂದು ಪಾಕಿಸ್ತಾನದ ನಿಯೋಗದ ನೇತೃತ್ವ ವಹಿಸಿರುವ ಹಿರಿಯ ರಾಜತಾಂತ್ರಿಕರು ಹೇಳಿದ್ದಾರೆ.    ಆಫ್ಘಾನಿಸ್ತಾನದಲ್ಲಿ ದಶಕಗಳು ಕಳೆದರೂ ಭಯೋತ್ಪಾದನೆ ಹಾವಳಿಯಿಂದ ಅಶಾಂತಿ ಮೂಡಿ, ಸಂಘರ್ಷಗಳಿಂದ ಅಮಾಯಕ ನಾಗರಿಕರು ಸೇರಿದಂತೆ ಭದ್ರತಾ ಪಡೆಗಳು ಬಲಿಯಾಗುತ್ತಿರುವುದು ಮುಂದುವರೆದಿರುವ ಹಿನ್ನೆಲೆಯಲ್ಲಿ ಹೊಸದಾಗಿ ಶಾಂತಿ ಮಾತುಕತೆಗಳ ಸಭೆ ಆಯೋಜಿಸಲಾಗಿದೆ.