ಮಾಂಜರಿ 09: ಬಿಸಿಲಿನ ತಾಪಮಾನಕ್ಕೆ ಜನ ದಣಿವು ಆರಿಸಿಕೊಳ್ಳಲು ಹೆಚ್ಚಾಗಿ ಕಬ್ಬಿನ ರಸ ಕುಡಿಯುತ್ತಿದ್ದು, ಕಬ್ಬಿಗೆ ಭಾರಿ ಬೇಡಿಕೆ ಬಂದಿದೆ. ಗ್ರಾಮೀಣ ಭಾಗದ ಯಕ್ಸಂಬಾ, ಮಾಂಜರಿ, ಅಂಕಲಿ, ಯಡೂರ, ಸದಲಗಾ, ಬೇಡಕಿಹಾಳ, ಬೋರಗಾಂವ ಹಾಗೂ ಮುಂತಾದ ಗ್ರಾಮಗಳಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಬಿಸಿಲಿನ ಝಳದಿಂದ ಜನರು ಬಸವಳಿಯುವಂತಾಗಿದೆ.
ಬೆಳಗಿನಿಂದಲೇ ಬಿಸಿಲಿನ ಕಾಟ ಶುರುವಾದರೆ, ಮಧ್ಯಾಹ್ನದ ಹೊತ್ತಿಗೆ ನೆಲವೂ ಕಾಯ್ದ ಬಾಣಲೆಯಂತಾಗುತ್ತದೆ. ಮಧ್ಯಾಹ್ನ ಮನೆಯಿಂದ ಹೋರೆಗೆ ಹೋಗುವುದೇ ಬೇಡ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಸುಡು ಬಿಸಿಲಿನಿಂದ ಉಂಟಾದ ಬಾಯಾರಿಕೆಯನ್ನು ನಿವಾರಿಸಿಕೊಳ್ಳಲು ಜನರು ಹಣ್ಣಿನ ರಸ ಮತ್ತು ತಂಪು ಪಾನೀಯಕ್ಕೆ ಮೊರೆಹೋಗುತ್ತಿದ್ದಾರೆ. ಸಂತೆಗೆ ಖರೀದಿಗಾಗಿ ಬಂದ ಜನ ಕೋಲ್ಡ್ರಿಕ್ಸ್ ಅಂಗಡಿಗೆ ಹೋಗಿ ನಿಂಬು ಸೋಡಾ, ಮೋಸಂಬಿ, ಕಿತ್ತಳೆ, ಕೋಕಮ್ ಜ್ಯೂಸ್ ಕುಡಿದು ಚೇತರಿಸಿಕೊಳ್ಳುತ್ತಿದ್ದಾರೆ. ಗಿಡದ ನೆರಳಿಗೆ ನಿಂತು ಕಬ್ಬಿನ ರಸಕುಡಿದು ಚೈತನ್ಯ ಪಡೆಯುತ್ತಿದ್ದಾರೆ.
ದಿನದಿಂದ ದಿನಕ್ಕೆ ತಾಪಮಾನವು ಎರುತ್ತಿದೆ. ಗಡಿ ಗ್ರಾಮಗಳಲ್ಲಿ ಇಂದು ಸರಾಸರಿ 33 ಡಿಗ್ರಿ ಸೆಲ್ಸಿಯಸ್ನಿಂದ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾತ್ರಿಯವರೆಗೂ ಬಿಸಿಲಿನ ಝಳ ಇರುವುದರಿಂದ ರಾತ್ರಿ ನಿದ್ದೆ ಮಾಡಲಾಗದೇ ಚಡಪಡಿಸುವಂತಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಕಳೆದ ಒಂದು ವಾರದಿಂದ ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ಗ್ರಾಮಗಳಲ್ಲಿ ತಂಪು ಪಾನೀಯಗಳಬೇಡಿಕೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಬಸ್ ನಿಲ್ದಾಣ ಪ್ರಮುಖ ಬೀದಿಗಳು ಸೇರಿದಂತೆ ಹಲವು ಕಡೆ ಅಂತರ್ ರಾಜ್ಯ ರಸ್ತೆ ಸೇರಿದಂತೆ ಇನ್ನುಳಿದ ಜಾಗಗಳಲ್ಲಿ ತಳ್ಳುವ ಗಾಡಿಗಳಲ್ಲಿ ರಸವಂತಿ ಅಂಗಡಿಗಳು ಕಾಣಿಸಿಕೊಳ್ಳತೋಡಗಿವೆ. ಮಾರು ಮಾರಿಗೆ ಇರುವ ಹಣ್ಣಿನ ಜ್ಯೂಸ್ ಅಂಗಡಿಗಳ ಮುಂದೆ ಜನಸಂದಣಿ ಕಂಡುಬರುತ್ತಿದೆ.
ಇಂದು ಕಬ್ಬಿನ ರಸ್ ಒಂದು ಗ್ಲಾಸಿಗೆ 15ರಿಂದ 20 ರೂ. ಮಾರಾಟವಾಗುತ್ತಿದೆ. ರಸವಂತಿ ಮಾಲೀಕ ಕಬ್ಬು ಖರೀದಿಸಬೇಕಾದರೆ ಇಂದು 5ರಿಂದ 7 ಸಾವಿರ ರೂ. ನೀಡಿ ಒಂದು ಟನ್ ಖರೀದಿಸುವ ಪ್ರಸಂಗ ಬಂದೋದಗಿದೆ.
ಸಾರ್ವಜನಿಕರ ಬೇಡಿಕೆ ಹೆಚ್ಚಾದಂತೆ ಕಬ್ಬಿನ ಬೆಲೆಯೂ ಹೆಚ್ಚಾಗಿದೆ. ಅದರಲ್ಲೂ ಬೇಸಿಗೆಯ ಧಗೆಯಿಂದ ಕಬ್ಬು ಒಣಗಿ ಹೋಗುತ್ತಿವೆ. ಏತನ್ಮಧ್ಯೆ ಒಳ್ಳೆಯ ಕಬ್ಬು ಹುಡಿಕ ಬೇಡಿದಷ್ಟು ದುಡ್ಡು ನೀಡಿ ಖರೀದಿಸುವ ಪ್ರಸಂಗ ಬಂದೋದಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಪ್ರತ್ಯೇಕ ಸಾಲಿನಲ್ಲಿ ಕಬ್ಬಿನ ದರ ದುಪ್ಪಟ್ಟಾಗಿದೆ. ಒಳ್ಳೆಯ ಕಬ್ಬನ್ನು ಟನ್ನಿಗೆ 5ರಿಂದ 7 ಸಾವಿರ ರೂ. ನೀಡಿ ಖರೀದಿಸುವ ಪ್ರಸಂಗ ಬಂದೊದಗಿದೆ.
" ಮಲ್ಲಪ್ಪಾ ಮಾಳಿ,
ರಸವಂತಿ ಗೃಹದ ಮಾಲೀಕ