ಕಾರವಾರ, ಮೇ.24 : ಮಳೆಗಾಲದ ಅವಧಿಯಲ್ಲಿ ಕ್ರದಾ ಜಲಾಶಯ ವ್ಯಾಪ್ತಿಯಲ್ಲಿ ವಾಸಿಸುವ ಸಾರ್ವಜನಿಕರ ಮತ್ತು ಗ್ರಾಮಸ್ಥರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಅಧಿಕಾರಿಗಳಿಗೆ ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಸೂಚನೆ ನೀಡಿದರು.
ಅವರು ಶನಿವಾರ ಕದ್ರಾದ ಅಂಬೇಡ್ಕರ್ ಸಭಾ ಭವನದಲ್ಲಿ, ಕದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವ ಕುರಿತು ನಡೆದ ಕೆಪಿಸಿಎಲ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಳೆಗಾಲದ ಅವಧಿಯಲ್ಲಿ ಕದ್ರಾ ಜಲಾಶಯದಿಂಂದ ನೀರನ್ನು ಹೊರಬಿಡುವ ಸಂದರ್ಭದಲ್ಲಿ ಈ ಭಾಗದ ಜನರಿಗೆ ಅಗತ್ಯ ಮುನ್ಸುಚನೆಯನ್ನು ನೀಡಬೇಕು, ತುರ್ತು ಸಂದರ್ಭದಲ್ಲಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ವಾಹನಗಳು, ಆಂಬುಲೆನ್ಸ್ ಗಳನ್ನು ಸಿದ್ದವಾಗಿಟ್ಟುಕೊಂಡಿರಬೇಕು, ಪ್ರವಾಹ ಸಂದರ್ಭದಲ್ಲಿ ದೋಣಿಗಳ ಮೂಲಕ ಸ್ಥಳಾಂತರಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿರಬೇಕು. ಪ್ರಸ್ತುತ ದಾಂಡೇಲಿಯಲ್ಲಿ ರಿವರ್ ರಾ್ಯಪ್ಟಿಂಗ್ ಸ್ಥಗಿತವಾಗಿರುವ ಹಿನ್ನಲೆ, ರಿವರ್ ರಾ್ಯಪ್ಟಿಂಗ್ ಮಾಡುವವರ ಜೊತೆ ಚರ್ಚಿಸಿ ಅಲ್ಲಿನ ಕೆಲವು ಬೋಟ್ಗಳನ್ನು ಕದ್ರಾದಲ್ಲಿ ಇಡಲು ವ್ಯವಸ್ಥೆ ಮಾಡುವಂತೆ ಹಾಗೂ ಅವುಗಳನ್ನು ಇಡಲು ಸೂಕ್ತ ಸ್ಥಳವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕದ್ರಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ ಹಾಗೂ ಗೋವಾ ರಾಜ್ಯದ ಸಾಕಳಿ ನದಿಯ ನೀರು ಜಲಾಶಕ್ಕೆ ಬರುವುದರಿಂದ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣವನ್ನು ಜಿಲ್ಲಾಡಳಿತ ಸೂಚಿಸಿರುವ ನಿರ್ಧಿಷ್ಟ ಗರಿಷ್ಠ ಮಟ್ಟ ತಲುಪಿದಾಗ ಸ್ವಲ್ಪ ಸ್ವಲ್ಪವಾಗಿ ಬಿಡುಗಡೆಗೊಳಿಸಬೇಕು, ಒಂದೇ ಬಾರಿ ಗರಿಷ್ಠ ನೀರು ಬಿಡುಗಡೆ ಮಾಡಿ ಪ್ರವಾಹ ಪರಿಸ್ಥಿತಿ ಉಂಟು ಮಾಡಬಾರದು. ಈ ಜಲಾಶಯ ನಿರ್ಮಾಣಗೊಂಡು 30 ವರ್ಷಗಳಾಗಿದ್ದು, ಇದುವರೆಗೂ ಒಮ್ಮೆ ಕೂಡಾ ಜಲಾಶಯದಲ್ಲಿನ ಹೂಳು ತೆಗೆದಿಲ್ಲವಾಗಿದ್ದು, ಜಲಾಶಯದಲ್ಲಿ ಶೇಖರವಾಗಿರುವ ನಿಖರವಾದ ನೀರಿನ ಪ್ರಮಾಣ ತಿಳಿಯುತ್ತಿಲ್ಲ ಆದ್ದರಿಂದ ಈ ಬಗ್ಗೆ ತಜ್ಞರಿಂದ ವರದಿ ಪಡೆಯುವಂತೆ ಮತ್ತು ನೀರಿನ ಒಳ ಹರಿವಿನ ಕುರಿತು ಅಧ್ಯಯನ ವರದಿ ಪಡೆಯುವಂತೆೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಭಾಗದಲ್ಲಿ ವಾಸಿಸುತ್ತಿರುವ ಕಾರ್ಮಿಕರಿಗೆ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡುವಂತೆ ಸೂಚಿಸಿದ ಅವರು, ಕೆಪಿಸಿಎಲ್ ಕಾಲೋನಿ ಮೂಲಕ ಸ್ಥಳೀಯರಿಗೆ ಸಂಚರಿಸಲು ಸಂಪರ್ಕಿಸುವ ದಾರಿ ನಿರ್ಮಾಣಕ್ಕೆ ತಡೆಯೊಡ್ಡುತ್ತಿರುವ ಕುರಿತು ಆಕ್ಷೇಪಿಸಿದ ಸತೀಶ್ ಸೈಲ್, ಸ್ಥಳೀಯರಿಗೆ ಸಂಚರಿಸಲು ರಸ್ತೆ ನಿರ್ಮಾಣ ಮಾಡಲು ತೊಂದರೆ ನೀಡದಂತೆ ಕೆಪಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದ ಅವರು, ರಸ್ತೆ ಕಾಮಗಾರಿಯನ್ನು ಪುನಃ ಪ್ರಾರಂಭಿಸುವಂತೆ ಮತ್ತು ಕೆಪಿಸಿಎಲ್ ನಿಂದ ಇಲ್ಲಿನ ಸಾರ್ವಜನಿಕರಿಗೆ ಅನಗತ್ಯ ಸಮಸ್ಯೆಗಳು ಉಂಟಾಗದಂತೆ ಎಚ್ಚರವಹಿಸಿ, ಸಾರ್ವಜನಿಕರಿಗೆ ಅಗತ್ಯವಿರುವ ನೆರವು ನೀಡುವಂತೆ ನಿರ್ದೇಶನ ನೀಡಿದರು.
ಇಲ್ಲಿನ ಸಾರ್ವಜನಿಕರ ಆರೋಗ್ಯದ ಬಗ್ಗೆ ನಿಗಾ ವಹಿಸಿ, ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ ಅವರು ಇಲ್ಲಿನ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ಶುದ್ದ ಕುಡಿಯುವ ನೀರು ಒದಗಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಉಪ ವಿಭಾಗಾಧಿಕಾರಿ ಕನಿಷ್ಕ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ರಾಜೇಂದ್ರ ರಾಣೆ, ಮಲ್ಲಾಪುರ ಗ್ರಾ.ಪಂ. ಅಧ್ಯಕ್ಷ ಉದಯ್ ಬಾಂದೇಕರ್, ಕದ್ರಾ ಗ್ರಾ.ಪಂ. ಅಧ್ಯಕ್ಷೆ ಹನುಮವ್ವ, ತಹಸೀಲ್ದಾರ್ ನಿಶ್ಚಲ್ ನರೋನ್ಹಾ, ಕದ್ರಾ ಜಲಾಶಯ, ಕೈಗಾ, ಕೆ.ಪಿ.ಸಿಎಲ್ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.