ರಾಜ್ಯ ಉಪಾಧ್ಯಕ್ಷರಿಂದ ಎಸ್ ಆರ್ ಪಾಟೀಲರಿಂದ ಪ್ರಗತಿ ಪರೀಶೀಲನಾ ಸಭೆಗ್ಯಾರಂಟಿ ಸೌಲಭ್ಯ ಒದಗಿಸುವಲ್ಲಿ ಗದಗ ಜಿಲ್ಲೆ ಸಾಧನೆ ಪ್ರಶಂಸನೀಯ
ಗದಗ 19: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಜಾರಿಗೊಳಿಸಿದ ಪಂಚಗ್ಯಾರಂಟಿ ಯೋಜನೆಗಳನ್ನು ಉತ್ತಮವಾಗಿ ಗದಗ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗಿದೆ. ಈ ಸಾಧನೆಗೆ ಗದಗ ಜಿಲ್ಲೆ ಪ್ರಶಂಸನೀಯ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಅವರು ಹೇಳಿದರು.
ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾದಿಕಾರದ ಕಚೇರಿಯಲ್ಲಿ ಸೋಮವಾರ ಜರುಗಿದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಂಚಗ್ಯಾರಂಟಿ ಅನುಷ್ಟಾನದಲ್ಲಿ ಗದಗ ಜಿಲ್ಲೆ ರಾಜ್ಯದಲ್ಲಿಯೇ ಉತ್ತಮ ಸಾಧನೆ ಮಾಡಿದೆ. ಅರ್ಹರಿಗೆ ಸರ್ಕಾರದ ಸೌಲಭ್ಯ ಒದಗಿಸುವಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದೆ. ಅದಕ್ಕಾಗಿ ಸಮಿತಿಯ ಜಿಲ್ಲಾ ಹಾಗೂ ತಾಲೂಕಾ ಅಧ್ಯಕ್ಷರು, ಸದಸ್ಯರುಗಳಿಗೆ ಅಭಿನಂದನೆಗಳು. ಅದೇ ತರಹ ಪಂಚಗ್ಯಾರಂಟಿ ಅನುಷ್ಟಾನದಲ್ಲಿ ಶ್ರಮಿಸಿದ ಇಲಾಖಾಧಿಕಾರಿಗಳ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳು ಆರ್ಥಿಕ ಸಬಲತೆಯೊಂದಿಗೆ ಸ್ತ್ರೀ ಸ್ವಾತಂತ್ರ್ಯ ನೀಡಿದೆ. ಮಹಿಳೆ ಸ್ವತಂತ್ರವಾಗಿ ಕುಟುಂಬ ನಿರ್ವಹಣೆ ಮಾಡುವ ಮೂಲಕ ಕುಟುಂಬವನ್ನು ಆರ್ಥಿಕವಾಗಿ ಪ್ರಬಲವಾಗಿಸಲು ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಅವುಗಳನ್ನು ಇನ್ನಷ್ಟು ಅರ್ಹರಿಗೆ ತಲುಪಿಸುವಲ್ಲಿ ಅಧಿಕಾರಿ ವರ್ಗ ಶ್ರಮಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ಮಾತನಾಡಿ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸರಿಯಾಗಿ ಸಾಗಿದೆ. ಯುವನಿಧಿ ಫಲಾನುಭವಿಗಳು ಉದ್ಯೋಗ ಮೇಳಕ್ಕೆ ಆಗಮಿಸುವ ಮೂಲಕ ಉದ್ಯೋಗ ಪಡೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಉದ್ಯೋಗಾದಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಸೂಚಿಸಿದರು. ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುವ ಅಕ್ಕಿಯು ಅಕ್ರಮ ಕಾಳ ಸಂತೆಯಲ್ಲಿ ಸಾಗಾಟ ಮಾಡುವುದನ್ನು ಅಧಿಕಾರಿ ವರ್ಗ ಸಂಪೂರ್ಣ ಹತೋಟೆಗೆ ತರಬೇಕು. ಆ ಮೂಲಕ ಅನ್ನಭಾಗ್ಯದ ಫಲಾನುಭವಿಗಳಿಗೆ ತಲುಪುವ ಮೂಲಕ ಹಸಿವು ಮುಕ್ತ ಕರ್ನಾಟಕ ಸಾಕಾರವಾಗಲಿ ಎಂದರು.
ಗ್ಯಾರಂಟಿ ಅನುಷ್ಟಾನ ಪ್ರಾದಿಕಾರದ ತಾಲೂಕಾಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಫಲಾನುಭವಿಗಳು ತಮ್ಮದೇ ರೀತಿಯ ಆರ್ಥಿಕ ಸಂಪನ್ಮೂಲ ಕಂಡುಕೊಂಡಿದ್ದಾರೆ. ಹಲವಾರು ಮಹಿಳೆಯರು ಸ್ವ ಉದ್ಯೋಗ ಕೈಗೊಂಡ ಸಾಕಷ್ಟು ಉದಾಹರಣೆಗಳು ಜಿಲ್ಲೆಯಲ್ಲಿವೆ ಎಂದರು.
ಸಮಿತಿ ಸದಸ್ಯ ಕೃಷ್ಣಗೌಡ ಎಚ್.ಪಾಟೀಲ ಮಾತನಾಡಿ ಕೆಲವು ಫಲಾನುಭವಿಗಳ ಗೃಹಲಕ್ಷ್ಮೀ ಮೊತ್ತವು ಬ್ಯಾಂಕ್ ಖಾತೆಗೆ ಜಮೆಯಾಗದೇ ಇರುವ ಪ್ರಕರಣಗಳು ಕಂಡುಬಂದಿವೆ. ಅಧಿಕಾರಿ ವರ್ಗ ಅವುಗಳನ್ನು ಪರೀಶೀಲಿಸಿ ಅರ್ಹರಿಗೆ ಗೃಹಲಕ್ಷ್ಮೀ ಮೊತ್ತ ಜಮೆ ಮಾಡಿಸುವಲ್ಲಿ ಗಮನ ಹರಿಸುವಂತೆ ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ವಿವರ: ಗೃಹಲಕ್ಷ್ಮೀ ಯೋಜನೆಯಡಿ ಶೇ 92.02 , ಅನ್ನಭಾಗ್ಯ ಯೋಜನೆಯಡಿ ಶೇ 97.96, ಗೃಹ ಜ್ಯೋತಿ ಯೋಜನೆಯಡಿ ಶೇ 95.51, ಯುವ ನಿಧಿ ಯೋಜನೆಯಡಿ ಶೇ 98 ಹಾಗೂ ಶಕ್ತಿ ಯೋಜನೆಯಡಿ ಶೇ 100 ರಷ್ಟು ಪ್ರಗತಿ ಸಾಧನೆಯಾಗಿದೆ ಎಂದು ವಿವರವಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರಾದ ನೀಲವ್ವ ಬೋಳನವರ್, ಸದಸ್ಯರುಗಳಾದ ಈಶಣ್ಣ ಹುಣಸೀಕಟ್ಟಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ದೇಸಾಯಿ, ಸಾವಿತ್ರ್ರಿ ಹೂಗಾರ ಸೇರಿದಂತೆ ಇತರೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.