ಅಕ್ರಮ ಮಣ್ಣು ಮಾರಾಟದ ಅನುಮತಿ ವಿರೋಧಿಸಿ ಪ್ರತಿಭಟನೆ

Protest against permission for illegal soil sale

ಕೊಪ್ಪಳ 07: ತಾಲೂಕಿನ ಕುಣಿಕೇರಿ ಗ್ರಾಮದ ದೊಡ್ಡ ಕೆರೆಯ ಮಣ್ಣನ್ನ ಅಕ್ರಮ ಮಾರಾಟ ಮಾಡಲು  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅನುಮತಿಸಿರೋದನ್ನು ವಿರೋಧಿಸಿ ಹಮ್ಮಿಕೊಂಡಿರುವ ಸತ್ಯಾಗ್ರಹ ಧರಣಿಗೆ ಸೋಮವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ವಿಪ ಸದಸ್ಯೆ ಹೇಮಲತಾ ನಾಯಕ ಬೆಂಬಲ ವ್ಯಕ್ತಪಡಿಸಿದರು.  

ಕೃಷಿಯೆತರ  ಚಟುವಟಿಕೆಗಳೊಂದಿಗೆ ಕೆರೆಯ ಮಣ್ಣನ್ನು ಬಳಸುವಂತಿಲ್ಲ ಎಂಬ ಕಾನೂನಿದ್ದರೂ ಕಾನೂನು ಉಲ್ಲಂಘನೆ ಮಾಡಿ ಫಲವತ್ತಾದ ಕೆರೆಯ ಮಣ್ಣು ಸಾಗಾಣಿಕೆಗೆ ಅನುಮತಿ ನೀಡಿದ ಗ್ರಾಮ ಪಂಚಾಯಿತಿ ಮತ್ತು  ಗಣಿ ಮತ್ತು ಭೂವಿಜ್ಞಾನ ಇಲಾಖೆಯವರ ವಿರುದ್ಧವಾಗಿ  ಹಮ್ಮಿಕೊಂಡ ಹೋರಾಟದಲ್ಲಿ ಮೂವರು ನಾಯಕರು ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು. 

ಅಲ್ಲದೆ, ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲೂಕ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಕರೆಸಿ ಗ್ರಾಮ ಪಂಚಾಯಿತಿಯ ಸದಸ್ಯರೆಲ್ಲ ಸೇರಿಸಿ, ಪಂಚಾಯತಿಯ ಸಭಾಂಗಣದಲ್ಲಿ  ತುರ್ತು ಸಭೆ ಆಯೋಜಿಸಿ, ಸೋಮವಾರವೇ  ಪಂಚಾಯಿತಿಯಿಂದ ಠರಾವು ಪಾಸ್ ಮಾಡಿ ಅಕ್ರಮ ಮಣ್ಣು ಮಾರಾಟ ತಡೆಗಟ್ಟಲು ನಿರ್ಧಾರವನ್ನು ಮಾಡಲಾಯಿತು.ಈ ಧರಣಿಯ  ಹೋರಾಟಗಾರರ ಬೆಂಬಲದೊಂದಿಗೆ ಪಾಲ್ಗೊಂಡಿದ್ದ ಎಲ್ಲಾ ನಾಯಕರು ಕುಣಿಕೇರಿ ಮತ್ತು ಕುಣಿಕೇರಿ ತಾಂಡ ಗ್ರಾಮದ ಎಲ್ಲಾ ನಾಗರಿಕರ ಪರವಾಗಿ ನಿರ್ಣಯವನ್ನು ಕೈಗೊಳ್ಳಲಾಯಿತು.  

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಜೆಡಿಎಸ್ ಮುಖಂಡರಾದ ಸಿ.ವಿ. ಚಂದ್ರಶೇಖರ್, ಗ್ರಾಮ ಪಂಚಾಯತಿ ಸದಸ್ಯರಾದ ಹುಚ್ಚಪ್ಪ ಚೌದ್ರಿ, ಈರಮ್ಮ ಮಡಿವಾಳ, ರವಿ ಮೋಚಿ,  ಮಹದೇವಕ್ಕ ಹಲಗಿ, ಮುಖಂಡರಾದ  ಮೂರ್ತೆಪ್ಪ, ರಮೇಶ್ ಡಂಬ್ರಹಳ್ಳಿ, ಚನ್ನವೀರಯ್ಯ, ಮಲ್ಲೇಶಪ್ಪ ಸೋಂಪುರ, ರಾಮಣ್ಣ ಬೆಳವಿನಾಳ, ಮಂಜಮ್ಮ ಸಚಿಮಠ, ಗಿರಿಯಮ್ಮ ಗೌಡ್ರು, ಹನುಮಮ್ಮ ಕುರುಬರ, ರುದ್ರಮ್ಮ ಮೂಲಿಮನಿ,  ತಿಪ್ಪಣ್ಣ ಚೌದ್ರಿ, ಮಾದೇಗೌಡ, ಉದಯ ನಾಯಕ್, ಗವಿ ಅಲಗಿ, ಬಸವರಾಜ್ ಮಡಿವಾಳ, ರಮೇಶ್ ವಾಲಿಕಾರ್, ರಮೇಶ್ ಕನ್ಯಾಳ್, ಬಸವರಾಜ ಹಳ್ಳಿಕೇರಿ, ಗದಿಗೆಪ್ಪ ಚೌದ್ರಿ, ಗಿರಿಯಪ್ಪ ಸೇರಿ ಇನ್ನಿತರರು ಪಾಲ್ಗೊಂಡಿದ್ದರು.ಬಾಕ್ಸ್‌...ಮಹಿಳೆಯರ ಹೋರಾಟ ಮಾದರಿ: ಮಣ್ಣು ಅತಿಕ್ರಮಣ ಖಂಡಿಸಿ, ಕುಣಿಕೇರಿ ಗ್ರಾಮದ ಮಹಿಳೆಯರು ಒಗ್ಗಟಾಗಿ ಹಮ್ಮಿಕೊಂಡಿರುವ ಈ ಹೋರಾಟ ಉಳಿದ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಅಭಿಪ್ರಾಯ ಪಟ್ಟರು. 

ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದೊಂದು ಐತಿಹಾಸಿಕ ಹೋರಾಟ. ಆಳಿವ ವ್ಯವಸ್ಥೆ ತಪ್ಪು ಹೆಜ್ಜೆ ಇಟ್ಟಾಗ ಮಹಿಳೆಯರೆಲ್ಲ ಕೂಡಿ ಹೋರಾಟದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಅನ್ಯಾಯವಾದಾಗ ಎದೆಗುಂದದೆ ಈ ರೀತಿ ಮುಂದೆ ಪ್ರಶ್ನೆ ಮಾಡುವ ಧೈರ್ಯವನ್ನು ಮಹಿಳೆಯರು ರೂಢಿಸಿಕೊಳ್ಳಬೇಕು. ನಿಜಕ್ಕೂ ಕುಣಿಗೇರಿ ಗ್ರಾಮದ ಮಹಿಳೆಯರ ಈ ಹೋರಾಟ ಮೆಚ್ಚುವಂತಹದ್ದು ಎಂದು ಕ್ಯಾವಟರ್ ಅವರು ಬಣ್ಣಿಸಿದರು.