ಎಸ್.ಪಿ.ಎಮ್ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ
ರಾಯಬಾಗ 15 : ಇಂದಿನ ಯುವಕರು ಯೋಗ, ಧ್ಯಾನ ಮತ್ತು ದೈಹಿಕ ಪರಿಶ್ರಮದಿಂದ ಒಳ್ಳೆಯ ಆರೋಗ್ಯ ಹೊಂದಬೇಕೆಂದು ಹಾರೂಗೇರಿ ಎಸ್.ಪಿ.ಎಮ್ ಕಲಾ, ವಿಜ್ವಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ಕೆ.ಬಿ.ಸ್ವಾತಿ ಹೇಳಿದರು.
ಗುರುವಾರ ಪಟ್ಟಣದ ಎಸ್.ಪಿ.ಎಮ್ದ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ, ಎಂ.ಕಾಂ ಮತ್ತು ಎಂ.ಎ.(ರಾಜ್ಯಶಾಸ್ತ್ರ) ಸ್ನಾತಕೋತ್ತರ ವಿಭಾಗ ಹಾಗೂ ದೈಹಿಕ ಶಿಕ್ಷಣ (ಬಿ.ಪಿ.ಎಡ್. ಮತ್ತು ಎಂ.ಪಿ.ಎಡ್) ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏಕಾಗ್ರತೆ, ನಿಸ್ವಾರ್ಥ ಸೇವೆ, ಶಿಸ್ತು, ಸ್ವಯಂಗೌರವ, ಸಮಯ ಪಾಲನೆ, ಜ್ಞಾನಾರ್ಜನೆ, ಗುರಿ ಮತ್ತು ಕಠಿಣ ಪರಿಶ್ರಮ ಇವುಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯವೆಂದರು. ನಿಸ್ವಾರ್ಥ ಸೇವೆಯ ಅಭಾಜಿಯವರು ಕಟ್ಟಿದ ಈ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕನ್ನು ಮೂಡಿಸಿ, ಸಾವಿರಾರೂ ಶಿಕ್ಷಕರಿಗೆ ಅನ್ನವನ್ನು ನೀಡಿದೆ ಎಂದರು.
ಸಂಸ್ಥೆ ನಿರ್ದೇಶಕಿ ಭಾಗ್ಯಶ್ರೀ ಪಾಟೀಲ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ಎಸ್.ಎಸ್.ಸಿಂಗಾಡಿ, ಪ್ರಾಚಾರ್ಯರಾದ ಎಸ್.ಎಸ್.ಕುರಬೇಟಿ, ಡಾ.ಆರ್.ಕೆ.ಪಾಟೀಲ, ಐ.ಎಸ್.ಗೋಕಾಕ ಹಾಗೂ ಉಪನ್ಯಾಸಕರಾದ ಪಿ.ಕೆ.ಶೆಟ್ಟಿ, ಎಸ್.ಬಿ.ಮರಲಿಂಗಣ್ಣವರ, ವಿದ್ಯಾರ್ಥಿ ಪ್ರತಿನಿಧಿಗಳಾದ ಕಾಂತು ಕೂಗೆ, ವರ್ಷಾಎಸ್ ಮತ್ತು ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಕಾಲೇಜಿನ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.