ಹಾವೇರಿ 07: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಂದ ವಂಚನೆ ವಿರೋಧಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ. ಕೂಡಲೇ ಸೌಲಭ್ಯ ವಿತರಣೆಗೆ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಕಾರ್ಯಕರ್ತರ ಮನವಿ
ಹಾವೇರಿ 07: ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಹತ್ತಿರದ, ಯಲ್ಲಾಪುರ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ನಂ3, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಂದ ವಂಚನೆ ವಿರೋಧಿಸಿ, ಕೂಡಲೇ ಸೌಲಭ್ಯ ವಿತರಣೆ ಮಾಡಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಸತಿ ನಿಲಯದ ಎದುರು ಪ್ರತಿಭಟನೆ ನಡೆಸಿ, ಹಾಸ್ಟೆಲ್ ಘಟಕದ ಕಾರ್ಯಕರ್ತರು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪ್ರಶಾಂತ ವರಗಪ್ಪನವರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಸತಿ ನಿಲಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ನೂರಾರು ವಿದ್ಯಾರ್ಥಿಗಳು ದೂರದ ಊರಿನಿಂದ ಬಂದು ವಸತಿ ನಿಲಯದಲ್ಲಿ ಆಶ್ರಯ ಪಡೆದ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ, ದುರಂತವೆಂದರೆ ದೇಶ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಕಳೆದರು ವಿದ್ಯಾರ್ಥಿಗಳು ತಮ್ಮ ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯಗೊಂಡಿದೆ. ಕೆಲವು ವಸತಿ ನಿಲಯದಲ್ಲಿ ಸ್ವಚ್ಛತೆ ಸಮಸ್ಯೆ ವಿಪರೀತವಾಗಿದ್ದು, ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಎದುರಾಗಿದೆ. ಶಿಕ್ಷಣದ ಕನಸು ಹೊತ್ತು ಬಂದ ವಿದ್ಯಾರ್ಥಿಗಳು ಗುಣಮಟ್ಟದ ಆಹಾರ ಸಿಗದೆ ಕಾಲೇಜಿಗೆ ತೆರಳುವ ವಾತಾವರಣ ನಿರ್ಮಾಣ ಮಾಡಲಾಗಿದೆ.ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿರುವ ಯಲ್ಲಾಪುರ ನಂ3 ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪುಸ್ತಕ ದೊರೆತಿಲ್ಲ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಮೂಲಭೂತ ವಸ್ತುಗಳನ್ನು ಒದಗಿಸುವ ಜೊತೆಗೆ ಶುಚಿ ಸಂಭ್ರಮ ಕಿಟ್ ವಿತರಣೆಯಲ್ಲಿ ಹಗರಣ ನಡೆದಿದೆ ಎಂಬ ಅನುಮಾನ ಮೂಡುತ್ತಿದೆ. 166 ರೂಪಾಯಿ ವೆಚ್ಚದಲ್ಲಿ ನೀಡಬೇಕಾದ ಶುಚಿ ಸಂಭ್ರಮ ಕಿಟ್ ಕಡತ ಮಾಡಿರುವುದು ಸರಿಯಲ್ಲ. ಇಲ್ಲಿಯವರೆಗೆ ನೀಡುತ್ತಿದ್ದ ಕಿಟ್ ಅನ್ನು ಮುಂದುವರೆಸಬೇಕು ಅನುದಾನದ ನೆಪ ಹೇಳಿ ಕಡಿತ ಮಾಡುವುದು ನಿಲ್ಲಸಬೇಕು. ಯಾವುದೇ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಿಲ್ಲವೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಕೂಡಲೇ ಹಾಸ್ಟೆಲ್‌ನಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಿ, ವಿದ್ಯಾರ್ಥಿಗಳ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಇಲಾಖೆ ಕಟ್ಟುನಿಟ್ಟಾದ ಕ್ರಮತೆಗೆದುಕೊಳ್ಳಬೇಕು, ಕಿಟ್ ವಿತರಣೆ ತಾರತಮ್ಯ ಪರಿಹರಿಸಬೇಕು. ಆಯಾ ತಿಂಗಳ ಕಿಟ್ ಅನ್ನು ಅದೇ ತಿಂಗಳಲ್ಲೇ ವಿತರಣೆ ಮಾಡಬೇಕು ಯಾವುದೇ ಹಾಸ್ಟೆಲ್ ಗಳಲ್ಲಿ ಬಾಕಿ ಇಟ್ಟುಕೊಳ್ಳಲು ಅವಕಾಶ ನೀಡಬಾರದು.
ಕಿಟ್ ವಿತರಣೆಯಲ್ಲಿ ಲಕ್ಷಾಂತರ ರೂಪಾಯಿ ಹಗರಣವಾಗಿದೆ ಎಂಬ ಅನುಮಾನ ಮೂಡುತ್ತಿದೆ ಸಂಬಂಧಿಸಿದ ಅಧಿಕಾರಿಗಳು ದೂರ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಬೇಕು ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಧರಣೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಸ್‌ಎಫ್‌ಐ ಮುಖಂಡ ರೇವಣ್ಣಸಿದ್ದೇಶ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅನೇಕ ಬಾರಿ ವಸತಿ ನಿಲಯದ ಮೇಲ್ವಿಚಾರಕರ ಗಮನಕ್ಕೆ ತರಲಾಗಿದೆ ಆದರೂ ಯಾವುದೇ ರೀತಿಯಲ್ಲೂ ಸ್ಪಂದಿಸಿದ ಕಾರಣ ದಿನೆ ದಿನೆ ಸಮಸ್ಯೆಗಳು ಉದ್ಭವಿಸುತ್ತವೆ. ರುಚಿಕರ ಆಹಾರ ವಿತರಣೆಗೆ, ಸ್ವಚ್ಛತೆಗೆ, ಮಳೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.ಹಾಸ್ಟೆಲ್ ಘಟಕ ಅಧ್ಯಕ್ಷ ದಯಾನಂದ ಮಾತನಾಡಿ, ವಸತಿ ನಿಲಯಗಳಲ್ಲಿ ಯಾವುದೇ ಕ್ರೀಡಾ ಸಾಮಗ್ರಿಗಳು ಇಲ್ಲ, ಸರಿಯಾಗಿ ಕಿಟ್ ವಿತರಣೆ ಮಾಡಿಲ್ಲ, ಜಿಲ್ಲೆಗೆ ಉಪ ಲೋಕಾಯುಕ್ತರು ಆಗಮಿಸಿದಾಗ ಸ್ವಚ್ಚತೆ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಂಡು ಈಗ ಮತ್ತೆ ಅವ್ಯವಸ್ಥೆ ಯಿಂದ ಕೂಡಿದೆ ಕೂಡಲೇ ಸರಿಪಡಿಸಿ ಎಂದರು.