11ರಿಂದ ಪೀರ ಮಾಸಾಬಿ ದರ್ಗಾದ ಸಂದಲ್ ಹಾಗೂ ಉರುಸ

ಲೋಕದರ್ಶನ ವರದಿ

ಹುಕ್ಕೇರಿ 07: ಹೂವಿನಕೇರಿ ಹುಕ್ಕೇರಿಯ ಹಿಂದು ಮುಸ್ಲಿಮ ಬಾಂಧವರ ಆರಾದ್ಯದೇವತೆ ಪೀರ ಮಾಸಾಬಿಯ ಉರುಸ ಪ್ರತಿ ವರ್ಷದಂತೆ ಈ ವರ್ಷ ದಿನಾಂಕ 11 ಹಾಗೂ 12 ನವ್ಹಂಬರ ರಂದು ಅದ್ಧೂರಿಯಾಗಿ ಜರುಗಲಿದೆ. ತನ್ನಿಮಿತ್ತ ಈ ಲೇಖನ..!

             ಹುಕ್ಕೇರಿ ಸರ್ವ ಧರ್ಮಗಳ ಸಮನ್ವಯದ ಬೀಡು.  ಜಾತಿ, ಮತ, ಪಂಥಗಳೆನ್ನದೆ ಸರ್ವ ಧರ್ಮಿಯರು ಒಗ್ಗಟ್ಟಾಗಿ ಹಬ್ಬ ಹರಿ ದಿನಗಳನ್ನು ಆಚರಿಸುತ್ತಿರುವದು ಇಲ್ಲಿಯ ವಿಶೇಷತೆ. ಇಲ್ಲಿ ಕೋಮು ಗಲಭೆಗಳಿಲ್ಲ. ನಗರದಲ್ಲಿ ಪ್ರತಿ ಶತ 45 ರಷ್ಟು ಮುಸ್ಲಿಂ ಸಮೂದಾಯವಿದ್ದರೂ ಇಲ್ಲಿಯ ಪರಸ್ಪರ ಬಾಂಧವ್ಯ ಇತರ ಸಮಾಜಗಳಿಗೆ ಬೆರಳು ಕಚ್ಚುವಂತಿದೆ. ನಗರದ ಹಿಂದು ಸಮಾಜದ ಶನಿ ಮಂದಿರ, ಗಣೇಶ ಮಂದಿರ, ಹನುಮಾನ ಮಂದಿರ, ಮಹಾದೇವ ಮಂದಿರ, ಸಾಯಿ ಮಂದಿರ, ರಾಮಲಿಂಗೇಶ್ವರ ಮಂದಿರ, ಮಹಾಲಕ್ಷ್ಮೀ ಮಂದಿರ ಹಾಗೂ ಮುಸ್ಲಿಂ ಸಮಾಜದ ಪೀರ ಮಾಸಾಬಿ, ಗಂಜುಲ ಬಹಾರ, ಕಾಲಿ ಮಶೀದ, ಜನಾನಾ ಮಶೀದ, ಪೀರಪನ್ನಾ, ಕದಮೆರಸೂಲ, ಈದ್ಗಾ ಹಾಗೂ ಇನ್ನಿತರ ಮಶೀದಿಗಳು  ಇಲ್ಲಿಯ ಹಿಂದೂ-ಮುಸ್ಲಿಮ ಭಾವೈಕ್ಯತೆಗೆ ಸಾಕ್ಷಿಯಾಗಿವೆ. 

            ಆದಿಲಶಾಹಿ ಕಾಲದಲ್ಲಿ ನಿರ್ಮಿಸಲಾದ 12 ತಿಂಗಳು ಶುದ್ಧ ನೀರಿನಿಂದ ಚಿಮ್ಮುತ್ತಿದ್ದ ಕಾರಂಜಿಗಳು, ಕದಮೆ ರಸೂಲ ಬಳಿಯ ಬಿಸಿ ನೀರಿನ ಕಾರಂಜಿ, ತ್ರಿವಳಿ ಗುಮ್ಮಜಗಳು ಇಂದಿಗೂ ತಮ್ಮ ಗತ ವೈಭವವನ್ನು ಸಾರುತ್ತಿವೆ. ಆದಿಲಶಾಹಿ ಕಾಲದಲ್ಲಿ ನಗರದ ಪರಿಸರದಲ್ಲಿ ವಿವಿಧ ಹೂಗಳ ಉದ್ಯಾನವನಗಳಿಂದ ಹೂಗಳ ಸುವಾಸನೆ ಹರಡುತ್ತಿತ್ತು ಅದಕ್ಕಾಗಿ ನಗರಕ್ಕೆ ಹೂವಿನಕೇರಿ ಹುಕ್ಕೇರಿಯೆಂದು ಹೆಸರು ಬಂದಿರುವದಾಗಿ ಇತಿಹಾಸ ಪುಟಗಳಿಂದ ತಿಳಿದು ಬರುತ್ತದೆ. ಆದರೆ ಇಂದು ಅದು ಇತಿಹಾಸ ಮಾತ್ರವಾಗಿದೆ. ಇಂದಿನ ಆಧುನಿಕ ಹಾಗೂ ವಿಜ್ಞಾನ ಯುಗದಲ್ಲಿಯೂ ಕೂಡ ಜನರಲ್ಲಿ ದೇವರಿಗಿಂತ ಮೂಢ ನಂಬಿಕೆಗಳಲ್ಲಿ ಹೆಚ್ಚು ನಂಬಿಕೆಯಿಟ್ಟು ಮಾಟಗಾರರು ಹಾಗೂ ಮಾಂತ್ರಿಕರಿಂದ ಮೋಸ ಹೋಗಿ ನಂತರ ಪಶ್ಚಾತಾಪ ಪಡುತ್ತಿರುವ ಅನೇಕ ಉದಾಹರಣೆಗಳಿವೆ.

           ನಗರದ ಹೃದಯ ಸ್ಥಾನದಲ್ಲಿರುವ ಪೀರ ಮಹಾಸಾಬಿ ದರ್ಗಾ  ನಿರ್ಮಾಣಗೊಂಡಿದೆ. ಮಧ್ಯದಲ್ಲಿ ಮಾಸಾಬಿ ಸಮಾಧಿ, ಎದುರು ಸದಾ ಉರಿಯುತ್ತಿರುವ ನಂದಾ ದೀಪ, ಬದಿಯಲ್ಲಿ ವಿಶಾಲವಾದ ಬೇವಿನ ಮರ, ಸಮಾಧಿ ಸುತ್ತಲೂ ಸ್ಟೇನಲೆಸ್ ಸ್ಟೀಲ್ ಗ್ರಿಲ್ಸ್, ಕೆಳಗೆ ಮಾರ್ಬಲ್ ಫರಸಿ, ಮುಖ್ಯ ದ್ವಾರದ ಎಡ ಬದಿಗೆ ಶಿಲಾ ಶಾಸನ, ಗೋಡೆಯ ಎರಡು ಬದಿಗೆ ವಿಶಾಲವಾದ ಗೋಪುರಗಳು, ಹೊರ ಬದಿಗೆ ವಿವಿಧ ವರ್ಣಗಳ ಮಾರ್ಬಲ್ ಟಾಯಿಲ್ಸ್ಗಳು ದರ್ಗಾಕ್ಕೆ ಹೊಸ ಮೆರಗು ತಂದಿವೆ. ಮುಖ್ಯ ದ್ವಾರದ ಮೇಲೆ ಪೂರ್ವ ಕಾಲದಲ್ಲಿ ನಾಯಿಕ ಪರಿವಾರದವರು ನಗಾರಿ ಖಾನೆಯನ್ನು ನಿರ್ಮಿಸಿದ್ದಾರೆ. ಬೆಳಗಿನ ಜಾವ ನಗಾರಿ ಬಾರಿಸಲಾಗುತ್ತಿತ್ತು ನಗಾರಿ ಬಾರಿಸಿದ ನಂತರ ಜನ ಎಚ್ಚತ್ತು ತಮ್ಮ ಕೆಲಸಗಳಿಗೆ ಆಣಿಯಾಗುತ್ತಿದ್ದರು ಆದರೆ ಇಂದು ಅದು ಮರೀಚಿಕೆಯಾಗಿದೆ.

         ವಿಜಾಪೂರ ಆದಿಲಶಾಹಿ ಕಾಲದಲ್ಲಿ ಮಹಾಸಾಬಿ ದರ್ಗಾ  ನಿರ್ಮಾಣಗೊಂಡಿರುವದಾಗಿ ಹಿರಿಯರಿಂದ ತಿಳಿದು ಬರುತ್ತಿದೆ ಆದರೆ ಇದು ಯಾವಾಗ ಯಾರು ನಿರ್ಮಿಸಿದರು ಎಂಬುದು ಖಚಿತವಾಗಿ ತಿಳಿದು ಬಂದಿಲ್ಲ. ಎದುರು ಕಾರಂಜಿಯಿದೆ. ಜನ ಅಲ್ಲಿ ಕೈಕಾಲು, ಮುಖ ತೊಳೆದುಕೊಂಡು ಮಹಾಸಾಬಿಯ ದರ್ಶನ ಪಡೆಯುತ್ತಾರೆ. ದರ್ಗಾದ ಎದುರಿಗಿನ ವೃತ್ತಕ್ಕೆ ಪೀರ ಮಹಾಸಾಬಿ ವೃತ್ತವೆಂದು ಪುರಸಭೆ ನಾಮಕರಣ ಮಾಡಿದೆ. ಗುರುವಾರ ಹಾಗೂ ಹಬ್ಬ ಹರಿದಿನಗಳಲ್ಲಿ ಮಹಾಸಾಬಿಗೆ ಹಿಂದು ಮುಸ್ಲಿಮರು  ಊದು, ಸಕ್ಕರೆ, ಶರಬತ ಮುಂತಾದವುಗಳ ನೈವದ್ಯ ಅರ್ಪಿಸುತ್ತಾರೆ. ಕೆಲವರು ಸಮಾಧಿಗೆ ಹೂವಿನ ಚಾದರ ಹಾಗೂ ಗಲೀಫ ಏರಿಸುತ್ತಾರೆ.

         ಸೋಮವಾರ ನವ್ಹಂಬರ 11  ರಂದು ಮಾಸಾಬಿ ಸಮಾಧಿಗೆ ಗಂಧ ಏರಿಸಲಾಗುವದು. ಮಂಗಳವಾರ ಬೆಳಗಿನ ಜಾವ ಚಿಕ್ಕೋಡಿ ತಾಲೂಕಿನ ನನದಿ ಸಾಹುಕಾರರಿಂದ ಪ್ರಥಮವಾಗಿ ಗಲೀಫ ನಂತರ ನಗರದ ಅಡಿಕೆ ಪರಿವಾರ ಹಾಗೂ ಪೋಲಿಸ ಇಲಾಖೆಯಿಂದ   ಗಲೀಫ ಏರಿಸಿದ ನಂತರ ಮಧ್ಯಾನ್ಹ ಮಹಾಪ್ರಸಾದೊಂದಿಗೆ ಉರುಸ ಮುಕ್ತಾಯವಾಗುವದು. ದರ್ಗಾದ ಪೂಜೆಯ ಹಕ್ಕು ಸಮೀಪದ ಗಜಬರವಾಡಿ ಮುಜಾವರ ಸಮೂದಾಯಕ್ಕಿದೆ. ದರ್ಗಾದ ಸ್ಛಚ್ಛತೆ, ಬಣ್ಣ ಬಳಿಯುವದು, ದಿನಾಲು ಕಸಗೂಡಿಸುವದು, ಗುರುವಾರದಂದು ವಿಶೇಷ ಪೂಜೆ ಹಾಗೂ ಇನ್ನಿತರ ಕಾರ್ಯಕ್ರಮಗಳು ನಿರಂತರವಾಗಿ ಸುಗಮವಾಗಿ ನಡೆಯಲು ಪೂರ್ವಜರು ಮುಜಾವರ ಸಮೂದಾಯದವರಿಗೆ ಭೂಮಿಗಳನ್ನು ಉಂಬಳಿಯಾಗಿ ನೀಡಿದ್ದಾರೆ. ಅವರು ಇಂದಿಗೂ ದರ್ಗಾದ ಸಂಪೂರ್ಣ ವ್ಯವಸ್ಥೆ ಹಾಗೂ ಜವಾಬ್ದಾರಿಯನ್ನು ಕಾಯ್ದುಕೊಂಡು ಬಂದಿದ್ದಾರೆ. ಇತ್ತೀಚೆಗೆ ನೂತನವಾಗಿ ನಗರಖಾನಾದ ಮೇಲೆ ಸುಂದರವಾದ ಆಕರ್ಷಕ ಗೋಪೂರ ನಿರ್ಮಿಸಲಾಗಿದೆ.