ಸಿಂದಗಿ 29: ದೇಶ ಸಂಕಷ್ಟದಲ್ಲಿರುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆಡಿರುವ ಮಾತು ಆಘಾತ ತಂದಿದೆ. ಮತ ಸಿಕ್ಕಿದರೆ ಸಾಕು ಎಂಬ ಮನಸ್ಥಿತಿ ಅವರಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಹಾಗೂ ಖಂಡನೀಯ. ಈ ಕುರಿತು ಸಿಎಂ ಸಿದ್ದರಾಮಯ್ಯ ಜನರ ಬಳಿ ಕ್ಷಮೆಯಾಚಿಸಬೇಕು. ಅಲ್ಪಸಂಖ್ಯಾತರ ವಿಚಾರ ಬಂದಾಗ ಯಾವ ಮಟ್ಟಕ್ಕಿಳಿಯುತ್ತಾರೆ ಎಂಬ ಸತ್ಯ ಜನರಿಗೆ ಗೊತ್ತಿದೆ. ಆದರೆ, ದೇಶದ ವಿಚಾರ ಬಂದಾಗ, ಕಾಶ್ಮೀರದ ಭಯೋತ್ಪಾದಕರ ದಾಳಿ, ಹತ್ಯೆಗಳ ಘಟನೆಯನ್ನು ಪ್ರತಿಯೊಬ್ಬ ಸ್ವಾಭಿಮಾನಿ ಕೂಡ ಖಂಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಾಕಿಸ್ತಾನದ ಜೊತೆ ಯುದ್ಧ ಸಾರುವ ಅಗತ್ಯ ಇಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡನೀಯ. ಪಹಲ್ಗಾಮ್‌ನಲ್ಲಿ ನಡೆದ ಘಟನೆ ನಮ್ಮ ರಾಷ್ಟ್ರದ ಮೇಲೆ ನಡೆದ ಹೇಡಿತನ ದಾಳಿ. ಜವಾಬ್ದಾರಿಯುತ ಸ್ಥಾನದಲ್ಲಿ ಅದರಲ್ಲೂ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವವರನ್ನು ಶಿಕ್ಷಿಸುವುದು ಬೇಡ ನಮ್ಮ ಭದ್ರತೆಯನ್ನು ಬಲಪಡಿಸಿ ಎಂಬ ಈ ರೀತಿಯ ಹೇಳಿಕೆ ನೀಡಿರುವುದು ಅಕ್ಷಮ್ಯ. ಇಂತಹ ಹೇಳಿಕೆಗಳು ದಾಳಿಯಲ್ಲಿ ಹುತಾತ್ಮರಾದ ನಮ್ಮ ಭದ್ರತಾ ಸಿಬ್ಬಂದಿಯ ಶೌರ್ಯ ಮತ್ತು ಬಲಿದಾನ ಕಡೆಗಣಿಸಿದಂತಾಗುತ್ತದೆ. ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಇಂದು ಜಗತ್ತೇ ಖಂಡಿಸುತ್ತಿದೆ. ಅದರೆ ಕಾಂಗ್ರೆಸ್ಸಿನ ನಾಯಕರಿಗೆ ವಾಸ್ತವ ಸ್ಥಿತಿ ಅರಿಯದೆ ನಮ್ಮ ದೇಶದ ಬಗ್ಗೆ ಸಡಿಲ ಮಾತುಗಳನ್ನಾಡುವುದು ರೂಢಿಯಾಗಿಬಿಟ್ಟಿದೆ. ಉಗ್ರಗಾಮಿತ್ವದ ಕಡೆಗೆ ಕಾಂಗ್ರೆಸ್‌ನ ಮೃದು ಧೋರಣೆ ಭಾರತದ ಆಂತರಿಕ ಭದ್ರತೆಯನ್ನು ದುರ್ಬಲಗೊಳಿಸಿರುವುದು ಮಾತ್ರವಲ್ಲದೇ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಅಧಿಕಾರ ನೀಡಿದೆ. ಇಂತಹ ಹೇಳಿಕೆ ನೀಡುವ ಸಿದ್ದರಾಮಯ್ಯನವರಿಗೆ ಕರ್ನಾಟಕದಲ್ಲಿ ಪಾಕಿಸ್ತಾನದ ನಾಗರಿಕರ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಅಚ್ಚರಿಯ ಸಂಗತಿ.
ಅವಕಾಶವಾದಿ ಕಾಂಗ್ರೆಸ್ ಸಾರ್ವಜನಿಕ ಸಹಾನುಭೂತಿಯ ಪಾಲು ಪಡೆಯಲು ಹಾಗೂ ರಾಜಕೀಯ ಲಾಭಕ್ಕಾಗಿ ಕೀಳು ತಂತ್ರ ಅನುಸರಿಸುತ್ತಿರುವು ಅತ್ಯಂತ ಖಂಡನೀಯ ಮತ್ತು ಅಮಾನವೀಯ. ಅವರ ಇಂತಹ ನಡುವಳಿಕೆ ಮತ್ತು ಹೇಳಿಕೆ ಎಂದೂ ಸಹಿಸಬಾರದು ಜೊತೆಗೆ ಇದನ್ನು ಬಲವಾಗಿ ಖಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.