ಪತ್ರಿಕಾರಂಗದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕು: ಸಂಪಳ್ಳಿ

Skills must be practiced to succeed in journalism: Sampalli

ವಿಜಯಪುರ 06: ಪತ್ರಿಕಾರಂಗದಲ್ಲಿ ಯಶಸ್ಸು ಸಾಧಿಸಲು ಕೇವಲ ಪದವಿಯೇ ಸಾಲದು, ಅದರ ಜೊತೆಗೆ ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕು ಎಂದು ವಿಜಯಪುರದ ಪ್ರಜಾವಾಣಿ ಪತ್ರಿಕೆಯ ಹಿರಿಯ ಜಿಲ್ಲಾ ವರದಿಗಾರ ಬಸವರಾಜ ಸಂಪಳ್ಳಿ ಹೇಳಿದರು. 

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಸೋಮವಾರ ಆಯೋಜಿಸಿದ್ದ 'ಆರಂಭ 2025' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಹೊಸ ತಂತ್ರಜ್ಞಾನ, ಸಾಮಾಜಿಕ ಮಾಧ್ಯಮದ ಬಳಕೆ, ಮತ್ತು ಹೊಸ ಆವಿಷ್ಕಾರಗಳೊಂದಿಗೆ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಬೇಕು. ನಿರಂತರ ಅಧ್ಯಯನ, ಹೊಸತನವನ್ನು ಅಳವಡಿಸಿಕೊಳ್ಳುವ ಮನೋಭಾವ, ಮತ್ತು ಕಠಿಣ ಪರಿಶ್ರಮದಿಂದ ಈ ರಂಗದಲ್ಲಿ ಯಶಸ್ಸು ಪಡೆಯುವುದು ಸಂಪೂರ್ಣ ಸಾಧ್ಯ. ಪತ್ರಿಕೋದ್ಯಮ ಒಂದು ಸಮೃದ್ಧ ಹಾಗೂ ಪ್ರಭಾವಶಾಲಿ ಕ್ಷೇತ್ರವಾಗಿದ್ದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಭಾಷಾ ಪ್ರಾವೀಣ್ಯತೆಯು ಅತ್ಯಂತ ಅಗತ್ಯ. ಕೇವಲ ದಿನಪತ್ರಿಕೆಗಳಲ್ಲಿ ಸುದ್ಧಿ ಓದುವುದಲ್ಲದೇ ಇದರ ಜೊತೆಗೆ ಸಂಪಾದಕೀಯ, ಅಂಕಣ, ಸಾಹಿತ್ಯದ ಅಧ್ಯಯನ ನಡೆಸುವುದರಿಂದ ಭಾಷಾ ಸಾಮರ್ಥ್ಯವನ್ನು ವೃದ್ಧಿ ಮಾಡಿಕೊಳ್ಳಬಹುದು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ ಓಂಕಾರ ಕಾಕಡೆ ಮಾತನಾಡಿ, ರಾಜ್ಯದಲ್ಲೇ ಅತ್ಯಂತ ಮುಂಚೂಣಿಯಲ್ಲಿರುವ ಮಾಧ್ಯಮ ಅಧ್ಯಯನ ವಿಭಾಗ ಎಂದರೆ ಅದು ನಮ್ಮ ಮಾಧ್ಯಮ ಅರ್ಧಯಯನ ವಿಭಾಗ. ನಿರಂತರ ಹೊಸತನ್ನು ಕಲಿಯಲು ಮತ್ತು ಎಲ್ಲ ಕೌಶಲಗಳನ್ನು ತಮ್ಮದಾಗಿಸಲು ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಈ ರಂಗದಲ್ಲಿ ಎಲ್ಲ ಕೌಶಲ್ಯಗಳನ್ನು ರೂಢಿಸಿಕೊಂಡು, ನೈತಿಕತೆ, ಶಿಸ್ತು, ಮತ್ತು ಕ್ರಿಯಾಶೀಲತೆಯನ್ನು ಹೊಂದಬೇಕು. ನಿರಂತರ ಅಭ್ಯಾಸ, ಹೊಸ ತಂತ್ರಜ್ಞಾನಗಳ ಅರಿವು, ಮತ್ತು ಸಮರ್ಥ ನಿರ್ವಹಣೆಯ ಮೂಲಕ ಯಶಸ್ಸು ಕಾಣಬೇಕು ಎಂದರು. 

ಇದೇ ಸಂದರ್ಭದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ತಹಮೀನಾ ಕೋಲಾರ ಮತ್ತು ಸಂದೀಪ್ ನಾಯಕ ಮಾತನಾಡಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಸಂಶೋಧನಾ ವಿದ್ಯಾರ್ಥಿನಿಯರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಸುನಂದ ಪಟ್ಟಣಶೆಟ್ಟಿ ಸ್ವಾಗತಿಸಿದರು ಶಿಲ್ಪಾ ಪವಾರ ಅತಿಥಿಗಳನ್ನು ಪರಿಚಯಿಸಿದರು ಅಸ್ಮಾ ಪಾಲ್ಟನ ನಿರೂಪಿಸಿದರು ರತ್ನಾಂಜಲಿ ವಾಲಿಕಾರ ವಂದಿಸಿದರು.