ಸುಳೇಭಾವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ

Statue of Chhatrapati Shivaji Maharaj unveiled in Sulebhavi

ಸುಳೇಭಾವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ  

ಬೆಳಗಾವಿ, 19 : ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮಹಾತ್ಮರ ಮೂರ್ತಿಗಳನ್ನು ಸ್ಥಾಪಿಸುವುದು ರಾಜಕೀಯ ಉದ್ದೇಶಕ್ಕಲ್ಲ, ಜನರನ್ನು ಖುಷಿಪಡಿಸಲೂ ಅಲ್ಲ. ಅವರ ಸಾಧನೆ ಹೋರಾಟ, ನಮ್ಮ ಮಕ್ಕಳಿಗೆ ಸ್ಫೂರ್ತಿಯಾಗಲಿ, ಈ ದೇಶದ ಸಂಸ್ಕೃತಿ ಉಳಿಯಲಿ ಎಂಬ ಕಾರಣಕ್ಕೆ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದೇನೆ ಎಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.  ಸುಳೇಭಾವಿ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸ್ವಂತ ಹಣದಿಂದ ಪ್ರತಿಷ್ಠಾಪಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿಯನ್ನು ಭಾನುವಾರ ಸಂಜೆ ಅನಾವರಣಗೊಳಿಸಿ ಅವರು ಮಾತನಾಡಿದರು.  

ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಸಿಗಲಿ ಎಂಬುದೇ ನಮ್ಮ ಉದ್ದೇಶ. ಛತ್ರಪತಿ ಶಿವಾಜಿ, ಕಿತ್ತೂರು ಚೆನ್ನಮ್ಮ, ಜಗಜ್ಯೋತಿ ಬಸವೇಶ್ವರ, ಡಾ.ಬಿ.ಆರ್‌.ಅಂಬೇಡ್ಕರ್ ಅವರಂತಹ ಮಹಾತ್ಮರ ಜೀವನ ಆದರ್ಶವನ್ನು ನಮ್ಮ ಮಕ್ಕಳು ಮೈಗೂಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆ ನಮ್ಮ ಮಕ್ಕಳಿಗೆ ಸ್ಫೂರ್ತಿ ತುಂಬಲಿ ಎನ್ನುವ ಕಾರಣಕ್ಕೆ ಅಂತವರ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.  

ನನ್ನ ಕ್ಷೇತ್ರದಲ್ಲಿ ಮೂರು ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡಿದ್ದೇನೆ. ಹಿಂಡಲಗಾ, ಹಿರೇಬಾಗೇವಾಡಿ, ಬೆನಕನಹಳ್ಳಿ ಗ್ರಾಮಗಳನ್ನು ಮೇಲ್ದರ್ಜೆಗೇರಿಸಿದ್ದು, ಪಟ್ಟಣ ಪಂಚಾಯಿತಿಗಳಾಗಿವೆ. ಪ್ರತಿ ವರ್ಷ 10ರಿಂದ 15 ಕೋಟಿ ರೂ. ವಿಶೇಷ ಅನುದಾನ ಬಂದು ಇಡೀ ಗ್ರಾಮವೇ ಅಭಿವೃದ್ಧಿ ಆಗಲಿದೆ. ಗ್ರಾಮಗಳ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು.ವೇದಮೂರ್ತಿ ಶ್ರೀಶೈಲ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ದೇವಣ್ಣ ಬಂಗೇನ್ನವರ, ಗ್ರಾಪಂ ಅಧ್ಯಕ್ಷೆ ಪಕೀರವ್ವ ಅಮರಾಪುರ, ನಿಲೇಶ ಚಂದಗಡಕರ, ಸುರೇಶ ಕಟಬುಗೋಳ, ಮಹೇಶ ಸುಗಣೆನ್ನವರ, ಸಂಭಾಜಿ ಯಮೋಜಿ, ವಿಠ್ಠಲ ಕಲಾದಗಿ, ಲಕ್ಷ್ಮಣ ಮಂಡು, ಶಿವಾಜಿ ಹುಂಕ್ರಿಪಾಟೀಲ, ಮಹೇಶ ಸುಗಣೆನ್ನವರ, ಜೀವನಪ್ಪ ಶಿಂಧೆ, ಅಶೋಕ ಯರಝರವಿ, ಯಮನಪ್ಪ ಕಲಾಬಾರ, ರುದ್ರ​‍್ಪ ಅಮರಾಪುರ ಸೇರಿದಂತೆ ಇತರರು ಇದ್ದರು. ಭೈರೋಬಾ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಮ್ಯಾಗೋಟಿ ಸ್ವಾಗತಿಸಿದರು. ಃಓಘಿಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಅಭಿವೃದ್ಧಿಯ ಜೊತೆಗೆ ಸಮಾಜಮುಖೀ ಕೆಲಸ: ಸತೀಶ್ ಜಾರಕಿಹೊಳಿ ಪ್ರಶಂಸೆ ಸುಳೇಬಾವಿ (ಬೆಳಗಾವಿ): ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಅಭಿವೃದ್ಧಿ ಜತೆಗೆ ಸಮಾಜಮುಖಿ ಕೆಲಸಗಳನ್ನೂ ಮಾಡುತ್ತಿದ್ದಾರೆ ಎಂದು ಲೋಕೋಪಯೋಜಿ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ ಜಾರಕಿಹೊಳಿ ಪ್ರಸಂಸಿಸಿದರು.  

ಸುಳೇಭಾವಿ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸ್ವಂತ ಹಣದಿಂದ ಪ್ರತಿಷ್ಠಾಪಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿಯನ್ನು ಭಾನುವಾರ ಸಂಜೆ ಅನಾವರಣಗೊಳಿಸಿ ಅವರು ಮಾತನಾಡಿದರು. ಬುದ್ಧ, ಬಸವಣ್ಣ, ಅಂಬೇಡ್ಕರ್ ನಮಗೆಲ್ಲರಿಗೂ ಆದರ್ಶ ಎಂದರು.  

ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿ ಮಹಾರಾಜರ ಸಮಾಧಿ ಇರುವ ಚನ್ನಗಿರಿ ತಾಲೂಕಿನ ಹೊದಗೆರೆ ಗ್ರಾಮದಲ್ಲಿ ಭವ್ಯ ಸ್ಮಾರಕ ಮಾಡಲು ಲೋಕೋಪಯೋಗಿ ಇಲಾಖೆಯಿಂದ 5 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು. ಸುಳೇಭಾವಿ ಗ್ರಾಮದಲ್ಲಿ ಯಾವುದೇ ಜಾತಿ, ಧರ್ಮದ ಭೇದ ಭಾವ ಇಲ್ಲದೇ ಇರುವುದು ಹೆಮ್ಮೆಯ ವಿಷಯ.  ಶಿವಾಜಿ ಮಹಾರಾಜರ ಹೋರಾಟ, ಆದರ್ಶ ನಮಗೆಲ್ಲರಿಗೂ ಪ್ರೇರಣೆ. ಇಂಥ ಕಾರ್ಯಕ್ರಮಗಳು ನಮಗೆ ದಾರೀದೀಪ ಆಗಬೇಕು.  ಸುಂದರವಾದ ಸ್ಮಾರಕ ನಿರ್ಮಾಣ ಮಾಡಿರುವುದು ಸಂತೋಷದ ವಿಷಯ. ಇಡೀ ಜಿಲ್ಲೆಯಲ್ಲೇ ಇಂತಹ ಸುಂದರ ಮೂರ್ತಿ ಬೇರೆಲ್ಲೂ ಇಲ್ಲ ಎಂದರು. ಲಕ್ಷ್ಮೀ ಹೆಬ್ಬಾಳಕರ್ ಮತ್ತು ಚನ್ನರಾಜ ಹಟ್ಟಿಹೊಳಿ ಅವರು ಸತೀಶ್ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು.