ವೈಕಲ್ಯ ಮೀರಿ ಸಾಧನೆಗೆ ಒತ್ತು ನೀಡಿದಾಗ ಯಶಸ್ಸು ಪ್ರಾಪ್ತಿ: ಸಂತೋಷ ಕಾಮಗೌಡ

Success is achieved when emphasis is placed on achievement beyond disability: Santhosh Kamagowda

ವೈಕಲ್ಯ ಮೀರಿ ಸಾಧನೆಗೆ ಒತ್ತು ನೀಡಿದಾಗ ಯಶಸ್ಸು ಪ್ರಾಪ್ತಿ: ಸಂತೋಷ ಕಾಮಗೌಡ 

  ಬೆಳಗಾವಿ 23: ಅಂಗವೈಕಲ್ಯ ಎನ್ನುವುದು ದೇಹದ ಸ್ಥಿತಿ ಎನ್ನುವುದಕ್ಕಿಂತ ಅದು ಮಾನಸಿಕ ದೌರ್ಬಲ್ಯವಾಗಿರುವುದು. ಹಾಗಾಗೀ ಮನದಲ್ಲಿ ಛಲ ಮತ್ತು ಆತ್ಮವಿಶ್ವಾಸದೊಂದಿಗೆ ಮುನ್ನುಗಿದರೆ ಜೀವನದಲ್ಲಿ ಯಶಸ್ಸು ಹೊಂದಬಹುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡ ಹೇಳಿದರು. 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಗುರುವಾರ ಆರ್‌ಸಿಯು ದಿವ್ಯಾಂಗರ ಕೋಶ, ಕಾಲೇಜು ಅಭಿವೃದ್ಧಿ ಪರಿಷತ್ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ಸಹಯೋಗದಲ್ಲಿ ಜರುಗಿದ ಫ್ಯಾಕಲ್ಟಿ ಕೆಪ್ಯಾಸಿಟಿ ಬಿಲ್ಡಿಂಗ್ ವರ್ಕಶಾಪ್ ಆನ್ ಡಿಸೆಬಲ್ ಆ್ಯಂಡ್ ಇನಕ್ಲೂಸಿವ್ ಎಜ್ಯುಕೇಶನ್  ವಿಷಯದ ಕುರಿತಾದ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.  

ದೇಹದ ಕೆಲ ನೂನ್ಯತೆ ಮತ್ತು ವೈಕಲ್ಯವನ್ನು ಚಿಕಿತ್ಸೆ ಮತ್ತು ಉಪಚಾರದ ಮೂಲಕ ಹೋಗಲಾಡಿಸಲು ಸಾಧ್ಯವಿದೆ. ಅದೆ ರೀತಿ ಕೆಲ ವೈಕಲ್ಯವನ್ನು ಕೃತಕ ಅಂಗ ಜೋಡಣೆ ಮೂಲಕ ಕೂಡಾ ಎದುರಾಗುವ ಕಷ್ಟಗಳನ್ನು ದೈನಂದಿನ ಬದುಕಿನಲ್ಲಿ ಕಡಿಮೆಗೊಳಿಸಬಹುದು. ಆದರೆ ಮನದಲ್ಲಿರುವ ವೈಕಲ್ಯವನ್ನು ಹೋಗಲಾಡಿಸಲು ಬಾಹ್ಯ ಚಿಕಿತ್ಸೆಗಿಂತ ಆ ವ್ಯಕ್ತಿ  ಸ್ವಯಂ ಸಜ್ಜಾಗಿ ಅಂತರಂಗದ ಮಾನಸಿಕ ಸೈರ್ಯದ ಚಿಕಿತ್ಸೆಗೆ ಒಳಗಾಗ ಬೇಕಾಗುತ್ತದೆ. ಆಗ ಮಾತ್ರ ಅಂಗವೈಕಲ್ಯದಿಂದ ಆ ವ್ಯಕ್ತಿ ಮುಕ್ತನಾಗಿ, ಹೊಸ ಯಶಸ್ಸಿಗೆ ಆತ ತನ್ನನ್ನು ಅಣಿಗೊಳಿಸಲು ಸಾಧ್ಯವಾಗುತ್ತದೆ ಎಂದರು.  

ದಿವ್ಯಾಂಗ ಚೇತನರಿಗೆ ಕರುಣೆ ತೋರುವುದು ಮತ್ತು ಪಾಪ ಎನ್ನುವುದು ದಿವ್ಯಾಂಗದವರು ಉಳಿದವರಿಂದ ನೀರೀಕ್ಷಿಸುವುದಿಲ್ಲ. ವಿಶೇಷ ಚೇತನರು ಕೂಡಾ ಅತ್ಯಂತ ಸಮರ್ಥವಾಗಿ ದಕ್ಷತೆಯಿಂದ ಉಳಿವರೆಲ್ಲರಂತೆ ಕಾರ್ಯನಿರ್ವಹಿಸಲು ಸಾಮರ್ಥ್ಯ ಹೊಂದಿದ್ದಾರೆ. ದಿವ್ಯಾಂಗ ಚೇತನರಿಗೆ ಅವಕಾಶ ಒದಗಿಸಿಕೊಡಬೇಕಾದ ಹೊಣೆಗಾರಿಕೆ ಎಲ್ಲರದ್ದಾಗಿದೆ. ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಚೇತನರಿಗಾಗಿ ಅನೇಕ ಸೂಕ್ತ ಸವಲತ್ತು ಮತ್ತು ಅವಕಾಶಗಳನ್ನು ನೀಡಿವೆ ಎಂದು ತಿಳಿಸಿದರು.  

ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಡಾ. ಮಹಾಂತೇಶ ಕಿವಡಸಣ್ಣವರ ಮಾತನಾಡಿ, ಒಂದು ಕಾಲದಲ್ಲಿ ಅಂಗವೈಕಲ್ಯರಿಗೆ ಶಿಕ್ಷಣ ಪಡೆಯುವುದು ಕೂಡಾ ಕಷ್ಟವಾಗಿತ್ತು. ನಮಗೆ ಶಾಲಾ ಕಾಲೇಜುಗಳಲ್ಲಿ ಪ್ರವೇಶ ದೊರೆಯುತ್ತಿರಲಿಲ್ಲ. ಆದರೆ ಇಂದು ಅನೇಕ ಎನ್‌ಜಿಒಗಳ ಹೋರಾಟದ ಫಲವಾಗಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಮಾತ್ರವಲ್ಲದೆ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಕೂಡಾ ದೊರೆಯುತ್ತಿವೆ ಎಂದರು.  

ಸಮರ್ಥಂ ಸಂಸ್ಥೆ ವತಿಯಿಂದ ದಿವ್ಯಾಂಗ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ. ಪಿಯುಸಿಯಿಂದ ಹಿಡಿದ ಪಿಎಚ್‌.ಡಿ ವ್ಯಾಸಂಗ ಮಾಡುವ ಅನೇಕ ದಿವ್ಯಾಂಗರಿಗೆ ವಸತಿ ಸಹಿತ ಸೌಲಭ್ಯ ಕಲ್ಪಿಸಿ ಶಿಷ್ಯವೇತನದೊಂದಿಗೆ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಸಮರ್ಥಂ ಟ್ರಸ್ಟ್‌ ಅವರದ್ದಾಗಿದೆ. ಸ್ಪರ್ಧಾತ್ಪಕ ಪರೀಕ್ಷೆಗಳ ತರಬೇತಿ ಕೂಡಾ ನೀಡುವ ಮೂಲಕ ನಾಗರಿಕ ಆಡಳಿತ ಹುದ್ದೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಯೋಜನೆ ರೂಪಿಸಲಾಗಿದೆ ಎಂದರು.  

ಅಂಧರಿಗೆ ಮತ್ತು ಅಂಗವಿಕಲರಿಗೆ ಉದ್ಯೋಗ ಎಂದರೆ, ಸಂಗೀತ ಮತ್ತು ಎಸ್‌ಟಿಡಿ ಬೂತ್ ಈ ಎರಡು ಕೆಲಸಗಳು ಎಂದು ವಾಡಿಕೆಯಾಗಿತ್ತು. ಆದರೆ ಈ ಎರಡು ಕೆಲಸದ ಹೊರತಾಗಿ ಉಳಿದೆಲ್ಲ ಕ್ಷೇತ್ರದಲ್ಲಿ ಕೂಡಾ ದಿವ್ಯಾಂಗ ಚೇತನರು ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಸಮರ್ಥನಂ ಟ್ರಸ್ಟ್‌ ಸಂಸ್ಥೆ ನಿರ್ಮಿಸಿ, ದಿವ್ಯಾಂಗರಿಗೆ ಅವಶ್ಯವಿರುವ ಎಲ್ಲ ಬಗೆಯ ತರಬೇತಿ ಮತ್ತು ಉದ್ಯೋಗಗಳನ್ನು ನೀಡಲಾಗುತ್ತಿದೆ. ಅನೇಕ ದಿವ್ಯಾಂಗರು ಸ್ವಂತ ಉದ್ಯೋಗ ಪ್ರಾರಂಭಿಸಿ ಹಲವಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಅಂಧರ ಕ್ರಿಕೆಟ್ ತಂಡವು 4 ಬಾರಿ ವಿಶ್ವಕಪ್ ಗೆಲ್ಲುವ ಮೂಲಕ ಅನೇಕರಿಗೆ ಪ್ರೇರಣೆ ನೀಡಿದೆ ಎಂದರು.  

ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ ಕದಂ ಮಾತನಾಡಿ, ಅಂಗವಿಕಲರು ಮಾಡಿದ ಸಾಧನೆ ಗಮನಿಸಿದಾಗ ಕೆಲ ಬಾರಿ ಅವರನ್ನು ಅಸಮರ್ಥರು ಅಥವಾ ದಿವ್ಯಾಂಗರು ಎಂದು ಹೇಳುವುದು ಕಷ್ಟವಾಗುತ್ತದೆ. ಕೆಲ ಬಾರಿ ಎಲ್ಲ ಸಾಮರ್ಥ್ಯ ಹೊಂದಿದ್ದರು, ಕೀಳರಮೆ ಕಾರಣದಿಂದ ಸದಾ ನೂನ್ಯತೆಗಳನ್ನು ಜಪ ಮಾಡುವವರನ್ನು ಸಮಾಜದಲ್ಲಿ ಕಾಣುತ್ತೇವೆ. ಆದ್ದರಿಂದ ನಮ್ಮಲ್ಲಿರುವ ಕೊರತೆಯನ್ನು ಬದಿಗೊತ್ತಿ, ಮನದ ಇಚ್ಚಾಶಕ್ತಿ ಹೆಚ್ಚಿಸಿಕೊಂಡು ಎಲ್ಲರೂ ಸಾಧನೆಗೆ ಮುಂದಾಗಬೇಕು ಎಂದು ಹುರಿದುಂಬಿಸಿದರು.  

ಆರ್‌ಸಿಯು ವಿವಿಯ ವಿವಿಧ ಪದವಿ ಕಾಲೇಜುಗಳ ಪ್ರಾಚಾರ್ಯರು, ಪ್ರತಿನಿಧಿಗಳು, ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.   

ಗ್ಯಾನಪ್ಪ ಮಾದರ ಪ್ರಾರ್ಥಿಸಿದರು. ಕಾಲೇಜು ಅಭಿವೃದ್ಧಿ ಪರಿಷತ್ ನಿರ್ದೇಶಕ ಪ್ರೊ. ಅಶೋಕ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮರ್ಥ ಅಂಗವಿಕಲ ಸಂಸ್ಥೆಯ ಶಾಖಾಧಿಕಾರಿ ಅರುಣಕುಮಾರ ಎಂ.ಜಿ ಪರಿಚಯಿಸಿದರು. ಹಸನಭಾಷಾ ತೆಗ್ಗಿನಮನಿ ನಿರೂಪಿಸಿದರು. ದಿವ್ಯಾಂಗ ಕೋಶದ ನಿರ್ದೇಶಕಿ ಡಾ. ಸುಷ್ಮಾ. ಆರ್ ವಂದಿಸಿದರು.