ಲೋಕದರ್ಶನ ವರದಿ
ಸುಪೋಷಿತ್ ಅಭಿಯಾನ: ಕಿನ್ನಾಳದಲ್ಲಿ ಬೀದಿ ನಾಟಕ ಪ್ರದರ್ಶನ
ಕೊಪ್ಪಳ 25: ಕೇಂದ್ರ ಸರಕಾರ ಜಾರಿಗೆ ತಂದಿರುವ ಸುಪೋಷಿತ್ ಅಭಿಯಾನ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನವನ್ನು ಕೇಂದ್ರ ಸಂವಹನ ಇಲಾಖೆ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಪ್ಪಳ ಇವರ ಆಶ್ರಯದಲ್ಲಿ ಕುಷ್ಟಗಿಯ ಜನ ಜಾಗೃತಿ ಕಲಾ ರಂಗ ಸಂಸ್ಥೆ ರಿ ಇವರಿಂದ ಕಿನ್ನಾಳ ಗ್ರಾಮದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಮಹಿಳಾ ಮೇಲ್ವಿಚಾರಕಿಯರಾದ ಲಕ್ಷ್ಮಿ ದೇವಿ ರೆಡ್ಡಿ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಭಾರತ ಸರ್ಕಾರದ ಪ್ರಧಾನ ಮಂತ್ರಿಯವರು ಘೋಷಣೆ ಮಾಡಿದ ಸುಪೋಷಿತ್ ಗ್ರಾಮ ಪಂಚಾಯತ್ ಅಭಿಯಾನ ಯೋಜನೆಯು ಮುಖ್ಯವಾಗಿ ಆ ಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿಯರು ಮಕ್ಕಳು ಬಾಣಂತಿಯರು ಅವರ ಆರೋಗ್ಯ ಸುಧಾರಣೆಗಾಗಿ ಜಾರಿಗೆ ತಂದಿರುವ ಮಹತ್ವವಾದ ಯೋಜನೆ ಆಗಿದೆ ಎಲ್ಲರೂ ಮಾಹಿತಿ ತಿಳಿದು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ ಹುದ್ದಾರ್, ಅಂಗನವಾಡಿ ಕಾರ್ಯಕರ್ತೆಯರಾದ ಸಂತೋಷಿ ಮಾತಾ, ರೇಣುಕಾ ಜಾಲಿಹಾಳ್, ಭಾರತಿ ವಾಲ್ಮೀಕಿ, ಗೀತಾ, ಲಕ್ಷ್ಮಿ, ರೇಣುಕಾ ಬಂಡಿ ಇತರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜಾಗೃತಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶರಣಪ್ಪ ವಡಿಗೇರಿ ಅವರ ನೇತೃತ್ವದಲ್ಲಿ ಯೋಜನೆಯ ಕುರಿತು ವಿವಿಧ ಸನ್ನಿವೇಶಗಳು, ಜಾಗೃತಿ ಗೀತೆಗಳು ಮೂಲಕ ಪ್ರದರ್ಶನ ನೀಡಿದ ಬೀದಿ ನಾಟಕವು ಜನಮನ ರಂಜನೆಯೊಂದಿಗೆ ಅರಿವು ಮೂಡಿಸಿ ಪ್ರದರ್ಶನ ನೀಡಿದರು. ಕೊನೆಯಲ್ಲಿ ಗೀತಾ ಹಾದಿಮನಿ ಅವರು ಸರ್ವರಿಗೂ ವಂದಿಸಿದರು.