ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳಿ: ಡಾ ಆಜೂರ

Take advantage of NREGA scheme: Dr. Azura

ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳಿ: ಡಾ ಆಜೂರ 

ಇಂಡಿ 01: ಎಪ್ರಿಲ್ 1ರಿಂದ ನರೇಗಾ ಕೂಲಿ ದರ ರೂ.370 ಕ್ಕೆ ಹೆಚ್ಚಳ ಮಾಡಲಾಗಿದ್ದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರೀ ಯೋಜನೆಯಡಿ ಕೂಲಿ ಕೆಲಸ ನೀಡುವ ಬಗ್ಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಅಭಿಯಾನ ಮಾಡಲಾಗುತ್ತಿದೆ ಎಂದು ವಿಜಯಪೂರ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ವಿಜಯಕುಮಾರ ಆಜೂರ ತಿಳಿಸಿದ್ದಾರೆ. 

ಬೇಸಿಗೆ ಸಂದರ್ಭದಲ್ಲಿ ಜನರು ಊರು ಬಿಟ್ಟು ಕೆಲಸ ಆರಸಿ ಬೆಂಗಳೂರು, ಮುಂಬಯಿ ಮತ್ತು ಪುಣೆ ಹಾಗೂ ಹೈದರಾಬಾದ್ ಸೇರಿದಂತೆ ಮಹಾನಗರಗಳಿಗೆ ಗುಳೆ ಹೋಗಬಾರದು ಎಂಬ ಆಲೋಚನೆಯಿಂದ ಬೇಸಿಗೆ ಅವಧಿಯಲ್ಲಿ ನರೇಗಾ ಕೂಲಿಕಾರರಿಗೆ ನಿರಂತರ ಉದ್ಯೋಗ ಒದಗಿಸಲು ದುಡಿಯೋಣ ಬಾ. ಅಭಿಯಾನದಲ್ಲಿ ಜನರಿಗೆ ಯೋಜನೆ ಬಗ್ಗೆ ಜಾಗೃತಿ ಮೂಡಿಸಿ, ಆಸಕ್ತರಿಗೆ ಕೆಲಸಕ್ಕಾಗಿ ನಮೂನೆ 6ರಲ್ಲಿ ಬೇಡಿಕೆಯ ಅರ್ಜಿ ಸಲ್ಲಿಸಲು ತಿಳಿಸುವುದು, ಅವರಿಗೆ ಉದ್ಯೋಗ ನೀಡುವ ಬಹುಮುಖ್ಯ ಯೋಜನೆಯ ಕಾರ್ಯವಾಗಿದೆ. ನರೇಗಾ ಕೂಲಿಕಾರರಿಗೆ ಸಮುದಾಯ ಆಧಾರಿತ ಕಾಮಗಾರಿಗಳಲ್ಲಿ ಕೆಲಸ ನೀಡಲಾಗುವುದು, ಕಾಯಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರ ಬೇಡಿಕೆ ಸಂಗ್ರಹಿಸುವುದು, ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿಹೊಂಡ, ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಮಾವು, ಚಿಕ್ಕು, ನಿಂಬೆ, ನುಗ್ಗೆ ಇತರೆ ಬೆಳೆಗಳನ್ನು ಬೆಳೆಯಲು ನರೇಗಾದಡಿ ಪ್ರೋತ್ಸಾಹ ಧನ ನೀಡುತ್ತಿದೆ. ಇಲ್ಲಿಯೂ ಕೆಲಸ ಮಾಡಿ ಕೂಲಿ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. 2025 ರ ಏಪ್ರಿಲ್ 1ರಿಂದ ಕೇಂದ್ರ ಸರ್ಕಾರ ನರೇಗಾ ಕೂಲಿ ಮೊತ್ತವನ್ನು 349 ರಿಂದ 370 ರೂ. ಗೆ ಹೆಚ್ಚಳ ಮಾಡಿದೆ. ಈ ಬಗ್ಗೆ ಕೂಲಿಕಾರರಿಗೆ ಅರಿವು ಮೂಡಿಸಿ ಯೋಜನೆಯತ್ತ ಕರೆತಂದು ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ನೀಡುವ ಕಾರ್ಯಯೋಜನೆಯನ್ನು ಹಾಕಿಕೊಂಡಿದ್ದೆವೆ. ಇಂಡಿ ತಾಲೂಕಾದ್ಯಂತ ಕಳೆದ ಏಪ್ರಿಲ್‌ನಿಂದ 2025 ಮಾರ್ಚ ವರೆಗೆ 9 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಿನಿಂದ ಜೂನ ತಿಂಗಳವರೆಗೆ ಕೂಲಿಕಾರರಿಗೆ ಹೆಚ್ಚು ಉದ್ಯೋಗ ನೀಡಬೇಕು ಎಂಬ ಉದ್ದೇಶದಿಂದ 1 ಲಕ್ಷ ಮಾನವ ದಿನಗಳನ್ನು ಸೃಜಿಸುವ ಉದ್ದೇಶ ಹೊಂದಲಾಗಿದೆ. ಉದ್ಯೋಗ ಚೀಟಿ ಹೊಂದಿದವರು 100 ದಿನ ಕೂಲಿ ಕೆಲಸ ಪಡೆಯಬಹುದಾಗಿದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ದಿನಕ್ಕೆ 370 ಸಮಾನ ಕೂಲಿ ನೀಡಲಾಗುತ್ತದೆ. ನರೇಗಾದಲ್ಲಿ ಕೂಲಿ ಕೆಲಸಕ್ಕೆ ಬಂದ ಕೂಲಿ ಕಾರ್ಮಿಕರ 6 ತಿಂಗಳಿನಿಂದ 3 ವರ್ಷದ ಒಳಗಿನ ಮಕ್ಕಳ ಆರೈಕೆಗೆ ಕೂಸಿನ ಮನೆಯನ್ನು ಸಹ ತೆರೆಯಲಾಗಿದ್ದು, ಮಕ್ಕಳ ಆರೈಕೆಯನ್ನು ಮಾಡಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಇಂಡಿ ತಾಲೂಕು ಮಾನವ ದಿನಗಳನ್ನು ಸೃಜಿಸುವಲ್ಲಿ ಮೊದಲ ಸ್ಥಾನದಲ್ಲಿದೆ. ತಾಲೂಕಿನ ಗುರಿ ತಲುಪಿದ್ದಾರೆ. ನರೇಗಾ ಯೋಜನೆಯಡಿಯಲ್ಲಿ ಬಹಳಷ್ಟು ಗ್ರಾಪಂಗಳು ಉತ್ತಮ ಕಾಮಗಾರಿಗಳನ್ನು ಕೈಗೊಂಡು ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಬೇಸಿಗೆಯಲ್ಲಿ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ಎಲ್ಲ ಗ್ರಾಪಂ ಪಿಡಿಒಗಳಿಗೆ ನಿರ್ದೇಶನ ನೀಡಲಾಗಿದ್ದು, ಕೂಲಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಸೂಚಿಸಲಾಗಿದೆ ಎಂದು ಡಾ.ವಿಜಯಕುಮಾರ ಆಜೂರ ಹೇಳಿದರು.