ವಿಜಯಪುರ 13: ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಅರ್ಥೈಸಿಕೊಂಡು ವಿಷಯ ಜ್ಞಾನ ನೀಡುವದರೊಂದಿಗೆ ಸಂಸ್ಕಾರ-ಶಂಸ್ಕೃತಿ, ಜೀವನ-ಮೌಲ್ಯ ಮತ್ತು ನೈತಿಕತೆಯ ಗುಣಗಳನ್ನು ಒಡಮೂಡಿಸಬೇಕು. ಇಂದಿನ ಶಿಕ್ಷಣ ವ್ಯವಸ್ಥೆಯು ಸಾಕಷ್ಟು ಬದಲಾಗಿದೆ. ಶಿಕ್ಷಣವೆಂದರೆ ಕೇವಲ ಬೋಧನೆ-ಕಲಿಕೆಗೆ ಮಾತ್ರ ಸಿಮೀತವಾಗಿಲ್ಲ. ಅದು ವಿದ್ಯಾರ್ಥಿಗಳ ಜೀವನದ ಗುರಿಯನ್ನು ತಲುಪಲು ಹಾಗೂ ವಿದ್ಯಾರ್ಥಿಗಳು ಕಂಡ ಕನಸನ್ನು ನನಸಾಗಿಸಲು ಗುರು ಅವೆಲ್ಲವನ್ನು ಸಾಕಾರಗೊಳಿಸಲು ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸಬೇಕಾಗಿದೆ. ಶಿಕ್ಷಕ-ವಿದ್ಯಾರ್ಥಿಯ ಸಂಬಂಧ ಕೇವಲ ನಾಲ್ಕು ಗೋಡೆಗಳಿಗೆ ಸಿಮೀತವಾಗಬಾರದು. ಅದು ನಿರಂತರವಾಗಿ ಗುರು-ಶಿಷ್ಯರ ಅವಿನಾಭಾವ ಸಂಬಂಧ, ಅನ್ಯೋನ್ಯತೆ ಮತ್ತು ಪ್ರೀತಿ-ಗೌರವದ ಪ್ರತೀಕವಾಗಿರಬೇಕು. ಅಂದಾಗ ಮಾತ್ರ ಗುರುವಿನ ಸೇವೆ ಸಾರ್ಥಕ ಮತ್ತು ಪವಿತ್ರವಾಗಬಲ್ಲದು ಎಂದು ನಿವೃತ್ತ ಪ್ರಾಚಾರ್ಯ ಡಾ. ವಿ. ಗೋಪಾಲನ್ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಪ್ರತಿಷ್ಠಿತ ಎ.ಎಸ್.ಪಾಟೀಲ ಕಾಲೇಜ ಆಫ್ ಕಾಮರ್ಸ ನಲ್ಲಿ 2003-04 ನೇ ಸಾಲಿನಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಆಯೋಜಿಸಿದ್ದ “ಗುರುವಂದನಾ ಮತ್ತು ಪುನರ್ ಮಿಲನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, 21 ವರ್ಷಗಳಿಂದ ಹಿಂದೆ ನಮ್ಮಿಂದ ಪಾಠ ಕೇಳಿದ ಮಕ್ಕಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಅದೇಷ್ಟೋ ವಿದ್ಯಾರ್ಥಿಗಳು ಚಾರ್ಟರ್ಡ ಅಕೌಂಟಂಟ್, ವಕೀಲರು, ಅಡಿಟರ್, ಬ್ಯಾಂಕ್ ಆಫೀಸರ್, ವ್ಯವಹಾರಸ್ಥರು ಹಾಗೂ ಕೃಷಿಕರಾಗಿ ಕಾರ್ಯನಿರ್ವಹಿಸುತ್ತಿರುವುದು ತುಂಬಾ ಸಂತಸದ ಸಂಗತಿ. ಅದಕ್ಕಾಗಿ ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾಗಿ ಜನನಿ, ಜನ್ಮಭೂಮಿ ಹಾಗೂ ಶಿಕ್ಷಣ ನೀಡಿದ ಮಾತೃಸಮಸ್ಥೆಯನ್ನು ಎಂದಿಗೂ ಮರೆಯಬಾರದು. ಗುರು ಪರಂಪರೆಗೆ ಹೆಸರಾದ ನಮ್ಮ ದೇಶದಲ್ಲಿ ಇಂತಹ ಗುರುವಂದನಾ ಕಾರ್ಯಕ್ರಮಗಳು ಆಯೋಜಿಸಿ ಗುರುವಿನ ಸ್ಮರಣೆ ಮಾಡುವ ಸಂಸ್ಕೃತಿ ಅನನ್ಯವಾದುದು ಎಂದರು.
ಇದೇ ಸಂದರ್ಭದಲ್ಲಿ 2003-04 ನೇ ಸಾಲಿನಲ್ಲಿ ಗುರುಗಳಾಗಿ ಜ್ಞಾನ ಧಾರೆ ಎರೆದು ಭವಿಷ್ಯ ರೂಪಿಸಲು ಕಾರಣೀಕರ್ತರಾದ ಡಾ. ವಾಯ್. ಬಿ. ಪಟ್ಟಣಶೆಟ್ಟಿ, ಪ್ರೊ. ಎಂ.ಎಸ್.ಝಳಕಿ, ಪ್ರೊ. ಎಸ್.ಎಸ್.ಚೌಕಿಮಠ, ಪ್ರೊ. ಎಸ್.ಎಸ್.ಕೋರಿ, ಪ್ರೊ. ಎಸ್.ಜಿ.ತಾಳಿಕೋಟಿ, ಪ್ರೊ. ಎಸ್.ಎಸ್.ಸಜ್ಜನರ, ಪ್ರೊ. ಎಸ್.ಎಲ್.ಚನ್ನಾಳ, ಪ್ರೊ. ವ್ಹಿ.ಎಸ್.ಬಗಲಿ, ಪ್ರೊ. ಎಸ್.ಜಿ.ರೋಡಗಿ, ಪ್ರೊ. ಪಿ.ಎಂ.ಬಿರಾದಾರ ಹಾಗೂ ಪ್ರೊ. ಎಂ.ಎಸ್.ಖೊದ್ನಾಪುರ ಡಾ. ಎಂ.ಎಂ.ಮಿರ್ದೆ, ಪ್ರೊ. ಎಸ್.ಎಸ್.ನಾಗನೂರ, ಪ್ರೊ. ಎಸ್.ಡಿ.ಪಾಟೀಲ ಇನ್ನಿತರನ್ನು ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು.
ಗುರುಗಳನ್ನು ಹೂ-ಮಳೆಗರೆದು ಮತ್ತು ಪುಷ್ಪಗಳಿಂದ ನೀಡಿ ಸ್ವಾಗತಿಸಿದ ವಿದ್ಯಾರ್ಥಿಗಳು ಪ್ರತಿಯೊಬ್ಬ ಪ್ರಾಧ್ಯಾಪಕರ ಆತ್ಮೀಯವಾಗಿ ಗುರುವಂದನೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಸಮತಾ ಯರನಾಳ ಸ್ವಾಗತಿಸಿದರು. ಸಾವಿತ್ರಿ ಅನಂತಪೂರ ಹಾಗೂ ಸಂಗಡಿಗರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಗುರುವಿನ ಮಹತ್ವವನ್ನು ಸಾರುವ ಹಾಡನ್ನು ಹಾಡಿದರು. ಹಿಂದಿನ ವಿದ್ಯಾರ್ಥಿಗಳಾದ ಅಂದಿನ ವಿದ್ಯಾರ್ಥಿ ಇಂದಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವಿವೇಕಾನಂದ ಉಘಡೆ ಅವರು ಗುರುಗಳ ಬೋಧನೆಯ ಸಾರ, ಕಲಿಸಿದ ಪ್ರತಿಯೊಂದು ಜೀವನ ಪಾಠ, ಅನುಭವಿಸಿದ ಸಂತಸದ ದಿನಗಳ ಬಗ್ಗೆ ಅನಿಸಿಕೆಯಲ್ಲಿ ಹೇಳಿದರು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಮಂಜುನಾಥ ಹೊನ್ನಕಟ್ಟಿ, ಬಸವರಾಜ ಪಾಟೀಲ ಇನ್ನಿತರರು ಸಹ ಭಾಗವಹಿಸಿದ್ದರು.