ವಿಜಯಪುರ ಬಂದ್‌ಗೆ ಸಹಕರಿಸಿ, ಸಂಪೂರ್ಣ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ

Thanks to all who contributed to the Vijaypur bandh and made it a complete success

ವಿಜಯಪುರ 30: ದಲಿತ್ ಐಕಾನ್, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ ಶಾ ಅವರ ಹೇಳಿಕೆಯನ್ನು ಖಂಡಿಸಿ ವಿವಿಧ ದಲಿತ, ಪ್ರಗತಿಪರ ಸೇರಿದಂತೆ ಇನ್ನೀತರ ಸಂಘ, ಸಂಘಟನೆಗಳ ವಿಜಯಪುರ ಬಂದ್‌ಗೆ ಕರೆಗೆ ಓಗೊಟ್ಟು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿ, ಸಂಪೂರ್ಣ ಸಹಕರಿಸಿ, ಈ ಬಂದ್ ಯಶಸ್ವಿಗೊಳ್ಳುವಂತೆ ಮಾಡಿದ ಎಲ್ಲರಿಗೂ ಜಿಲ್ಲೆಯ ಅಂಬೇಡ್ಕರ್‌ವಾದಿಯೂ ಆಗಿರುವ ಸಮಾಜಸೇವಕ ಮಂಜುನಾಥ.ಎಸ್‌.ಕಟ್ಟಿಮನಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್‌.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಅಹಿಂದ, ದಲಿತ, ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಿದ ವಿಜಯಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ದರಿಂದ ಈ ವಿಜಯಪುರ ಬಂದ್‌ಗೆ ಕರೆಗೆ ಓಗೊಟ್ಟು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿ, ಸಂಪೂರ್ಣ ಸಹಕರಿಸಿ, ಬಂದ್ ಯಶಸ್ವಿಗೊಳ್ಳುವಂತೆ ಮಾಡಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದ್ದಾರೆ. 

ಡಾ.ಬಿ.ಆರ್‌. ಅಂಬೇಡ್ಕರ್ ಅವರ ಬಗ್ಗೆ ಅಸಭ್ಯ ಮತ್ತು ಕೀಳಾಗಿ ಮಾತನಾಡಿ ಡಾ.ಬಿ.ಆರ್‌. ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಇನ್ನಾದರೂ ಕೂಡಲೇ ಎಚ್ಚೆತ್ತುಕೊಂಡು ಸಾರ್ವಜನಿಕವಾಗಿ ಬಹಿರಂಗ ಕ್ಷಮೆಯಾಚಿಸಬೇಕು. ಅಲ್ಲದೇ ನೈತಿಕ ಹೊಣೆಹೊತ್ತು ತಕ್ಷಣವೇ ಅಮಿತ್ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ. 

ಮ(ನೋ)ನುವ್ಯಾದಿಯುಳ್ಳ ಜನರಿಗೆ ಸಿಂಹಸ್ವಪ್ನವಾಗಿ ಕಾಡಿದ ಡಾ.ಬಿ.ಆರ್ ಅಂಬೇಡ್ಕರ್ ಅವರು ಮಹಾಮಾನವತಾವಾದಿಯಾಗಿ, ಸಮಾನತೆಯ ಹರಿಕಾರನಾಗಿ, ಸಮಸಮಾಜದ ಕನಸುಗಾರನಾಗಿ ತಮ್ಮ ವಿಷನ್‌ಗಳ ಮೂಲಕ ಭಾರತದ ಇತಿಹಾಸದ ಪುಟಗಳಲ್ಲಿ ತಮ್ಮದೇ ಆದ ಎಂದಿಗೂ ಅಚ್ಚಳಿಯದಂತಹ ಛಾಪು ಮೂಡಿಸಿದ್ದಾರೆ. ಕೋಟ್ಯಾಂತರ ದಲಿತರು ಮತ್ತು ವಂಚಿತ ವರ್ಗದವರಿಗೆ ಅಂಬೇಡ್ಕರ್ ಎಂಬ ಹೆಸರು ಆತ್ಮ ಗೌರವದ ಸಂಕೇತವಾಗಿದೆ. ಆದ್ದರಿಂದಲೇ ಎಲ್ಲರೂ ಬಹಳ ಗೌರವ ಹಾಗೂ ಪ್ರೀತ್ಯಾಭಿಮಾನದಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಬಾಬಾಸಾಹೇಬ್ ಎಂದೇ ಕರೆಯುತ್ತಾರೆ. ಇಂತಹ ಮಹಾಮಾನವ ಹಾಗೂ ಮಹಾನಾಯಕ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವುದನ್ನು ಯಾರೂ ಎಂದಿಗೂ ಸಹಿಸುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.