ಪಂ.ಪುಟ್ಟರಾಜರು 20ನೇ ಶತಮಾನದ ಅದ್ಭುತ ಸೃಷ್ಟಿ: ರಾಜಯೋಗಿಂದ್ರ ಶ್ರೀಗಳು

ಲೋಕದರ್ಶನ ವರದಿ

ಗದಗ 09: ಲಿಂ.ಪಂ. ಪುಟ್ಟರಾಜ ಗವಾಯಿಗಳವರು 20ನೇ ಶತಮಾನದ ಅದ್ಭುತ ಸೃಷ್ಟಿಯಾಗಿದ್ದಾರೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಪೂಜ್ಯಶ್ರೀ ಗುರುಸಿದ್ದ ರಾಜಯೋಗಿಂದ್ರ  ಮಹಾಸ್ವಾಮಿಗಳು ಹೇಳಿದರು. 

ಅವರು ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಭಾನುವಾರ ಗಾನಯೋಗಿ ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಅವರಿಂದ ಪೂಜ್ಯಶ್ರೀ ಶಿವಯೋಗಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 9ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಜರುಗಿದ ಪ್ರಶಸ್ತಿ ಪ್ರದಾನ, ಸನ್ಮಾನ ಹಾಗೂ ಅಹೋರಾತ್ರಿ ಸಂಗೀತ ಸ್ವರ ನಮನ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿ, ಕಣ್ಣಿದ್ದವರು ಮಾಡದ ಸಾಧನೆಯನ್ನು  ಅಂಧರಾದ ಪಂ.ಪುಟ್ಟರಾಜ ಗವಾಯಿಗಳವರು ಮಾಡಿದ್ದಾರೆ. ಭಗವಂತನು ಅವರನ್ನು ವಿಶೇಷವಾಗಿ ಸೃಷ್ಟಿ ಮಾಡಿ ಅವರ ಸಾಧನೆಗೆ ಎಲ್ಲರೂ ಮಾರು ಹೋಗುವಂತೆ ಮಾಡಿದ್ದಾರೆ. ಮಹಾನ ಸಂತರು ಬರೆದ 8 ಹಿಂದಿ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಹಿರಿಮೆ ಅವರದು. ಯಾವುದೇ ಬಾಷೆಯನ್ನು ಕಲಿಯಬಹುದು ಆದರೆ, ಬಾಷೆಯೊಳಗಿನ ಅಂತರಂಗ, ಕಲೆ ಹಾಗೂ ಸೌಂದರ್ಯವನ್ನು ಅರಿಯುವುದು ಕಷ್ಟ ಅಂತಹ ಸಾಧನೆಯನ್ನು ಪಂ.ಪುಟ್ಟರಾಜ ಗವಾಯಿಗಳವರು ಮಾಡಿದ್ದಾರೆ. ಕಬ್ಬಿಣದ ಕಡಲೆಯಾಗಿದ್ದ ಬಸವ ಪುರಾಣವನ್ನು ಹಿಂದಿ ಬಾಷೆಗೆ ಅನುವಾದ ಮಾಡಿದ ಏಕೈಕ ಕನ್ನಡ ವಿದ್ವಾಂಸರು ಪಂ.ಪುಟ್ಟರಾಜರು ಆಗಿದ್ದಾರೆ. ಸಂಸ್ಕೃತ ಬಾಷೆಯನ್ನು ಕಲೆಯುವುದು ಬಹಳ ಕಷ್ಟದ ಕೆಲಸ ಆದರೆ, ಸಂಸ್ಕೃತ 4 ಸಾವಿರ ವ್ಯಾಕರಣ ಸೂತ್ರಗಳನ್ನು  ಕಂಠಪಾಠ ಮಾಡಿ ಹೇಳಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಅವರಿಗೆ ಮಾದ್ಯಮದವರಿಂದ ರಾಷ್ಟ್ರಮಟ್ಟದಲ್ಲಿ ಪ್ರಚಾರ ಸಿಗದೇ ಇರುವುದು ವಿಷಾದದ ಸಂಗತಿಯಾಗಿದೆ ಎಂದು ಹೇಳಿದರು.    

ವೇದಿಕೆ ಮೇಲೆ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು,  ಅಡ್ನೂರ ಬೃಹನ್ಮಠದ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು, ನಿಚ್ಚಣಿಕೆ ಮಡಿವಾಳೇಶ್ವರ ಮಠದ ಪಂಚಾಕ್ಷರ ಶ್ರೀಗಳು, ವಿರೇಶ್ವರ ಪುಣ್ಯಾಶ್ರಮದ  ಕಲ್ಲಯ್ಯಜ್ಜನವರು, ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ  ಸಮ್ಮುಖ ವಹಿಸಿದ್ದರು. ಕೊಪ್ಪಳ ಜಂಗಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಯ್ಯ ನವಲಿಹಿರೇಮಠ,  ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಅಧ್ಯಕ್ಷ ಎಂ.ಜಿ.ಗುರುಸಿದ್ದೇಶ್ವರ ಶಾಸ್ತ್ರಿಗಳು ಅಧ್ಯಕ್ಷತೆ ವಹಿಸಿದ್ದರು.  ಚಿಕ್ಕಹಂದಿಗೋಳದ ಎಸ್.ಜಿ.ಹಿರೇಗೌಡರ,  ಉದ್ಯಮಿ ರಾಜು ಗುಡಿಮನಿ, ರೋನಿಹಾಳದ ಮಲ್ಲು ದೇಸಾಯಿ ಬೀಳಗಿ ಉಪಸ್ಥಿತರಿದ್ದರು. 

ಲಿಂ. ರಾಜಶೇಖರಯ್ಯನವರು ಹಾಗೂ ಲಿಂ. ಮಾತೋಶ್ರೀ ನೀಲಾಂಬಿಕಾ ನವಲಿಹಿರೇಮಠ ಅವರ ಸ್ಮರಣಾರ್ಥ ಕೊಡಮಾಡುವ "ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ"ಯನ್ನು ಶಿರಾಳಕೊಪ್ಪದ ಪಂ. ರೇವಣಪ್ಪ ಕುಂಕುಮಗಾರ ಹಾಗೂ ಧಾರವಾಡದ ವಿಧೂಷಿ ರೇಣುಕಾ ರಘುನಾಥ ನಾಕೋಡ  ಅವರಿಗೆ ನೀಡಿ ಗೌರವಿಸಲಾಯಿತು. ಕೋಡಿಕೊಪ್ಪದ ಪಂ.ರುದ್ರರಾಧ್ಯ ಶಾಸ್ತ್ರಿಗಳು ಚೌಕಿಮಠ, ಪಂ. ಬಸವಣ್ಣಯ್ಯಶಾಸ್ತ್ರಿಗಳು ಹಿರೇಮಠ ಬಸವನಕಟ್ಟಿ, ತಾವರಗೇರಿಯ ಪಂ.ಶಿವರಾಜಶಾಸ್ತ್ರಿ ಅವರಿಗೆ ಕಥಾ ಕೀರ್ತನ ಕಂಠೀರವ ಪ್ರಶಸ್ತಿ,  ಸಿ.ಎಸ್.ಹಿರೇಮಠ, ಮಹೇಶಗೌಡ್ರ ತಲೆಗೌಡ್ರ, ರುದ್ರಗೌಡ್ರ ರಬ್ಬನಗೌಡ್ರ, ಶ್ರೇಷ್ಟ ವರ್ತಕ ಪ್ರಶಸ್ತಿ  ಪಡೆದ ಶರಣು ಗದಗ  ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ ಹಾಗೂ  ಪಂಚಾಕ್ಷರಿ ಮಾಸ್ತರ ಅಣ್ಣಿಗೇರಿ ಅವರಿಗೆ ಸ್ವರ ಋಷಿ ಪ್ರಶಸ್ತಿ ನೀಡಲಾಯಿತು.  ಬಳಗಾನೂರಿನ ಶರಭಯ್ಯಶಾಸ್ತ್ರಿಗಳ ರಚಿಸಿದ ಶ್ರೀಗುರು ಪುಟ್ಟರಾಜ ವಿರಚಿತ "ಶ್ರೀಗುರುವಚನ ಪ್ರಭೆ" ಗ್ರಂಥವನ್ನು ಶ್ರೀಗಳ ಹಸ್ತದಿಂದ ಲೋಕಾರ್ಪಣೆಗೊಂಡಿತು. ಶಿವಲಿಂಗಶಾಸ್ತ್ರಿ ಸಿದ್ದಾಪೂರ ಅವರು ಕಾರ್ಯಕ್ರಮ ನಿರೂಪಿಸಿದರು. 

ನಂತರ ಜರುಗಿದ ಸಂಗೀತ ಸ್ವರ ನಮನ ಕಾರ್ಯಕ್ರಮದಲ್ಲಿ  ಮೈಸೂರಿನ ವಿದ್ವಾನ್ ಹರೀಶ ಪಾಂಡವ ಹಾಗೂ ತಂಡದವರಿಂದ ಸ್ಯಾಕ್ಸೋಪೋನ್ ವಾದನ, ಶಿರಾಳಕೊಪ್ಪದ ಪಂ.ರೇವಣಪ್ಪ ಕುಂಕುಮಗಾರ ಅವರಿಂದ ವಾಯೋಲಿನ್ ವಾದನ, ಧಾರವಾಡದ ವಿಧೋಷಿ ರೇಣುಕಾ ನಾಕೋಡ ಅವರಿಂದ ಗಾಯನ,  ಧಾರವಾಡ ಪಂ. ರಘುನಾಥ ನಾಕೋಡ ಅವರಿಂದ ತಬಲಾವಾದನ, ವಿರೇಶ್ವರ ಪುಣ್ಯಾಶ್ರಮದ ಶಿಷ್ಯರಿಂದ, ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರಿ  ಗವಾಯಿಗಳವರ ಸಂಗೀತ ಪಾಠಶಾಲೆಯ ವಿದ್ಯಾಥರ್ಿಗಳಿಂದ, ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿ ಗಳಿಂದ  ಹಾಗೂ ಪಂ.ಪಂಚಾಕ್ಷರಿ ಗವಾಯಿಗಳವರ ಅಂಧರ ವಸತಿಯುತ ಸಂಗೀತ ಶಾಲೆಯ ಸಿಬ್ಬಂದಿ ವರ್ಗದವರಿಂದ ಅಹೋರಾತ್ರಿ ಸ್ವರ ನಮನ ಕಾರ್ಯಕ್ರಮ ಜರುಗಿತು.