ಮತ್ತೊಬ್ಬರ ಮನೆ ಹಾಳುಗೆಡವಿ ಸರ್ಕಾರ ರಚಿಸಿದ ಬಿಜೆಪಿ: ಶಿವರಾಜ ತಂಗಡಗಿ

ಕೊಪ್ಪಳ 29: ಮತ್ತೊಬ್ಬರ ಮನೆಯನ್ನು ಹಾಳುಗೆಡವಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಪಕ್ಕದ ಮನೆಯ ಮಗುವನ್ನು ತಮ್ಮದು ಎಂದು ಬಿಜೆಪಿ ನಾಯಕರು ನಾಮಕರಣ ಮಾಡಿದ್ದಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಲೇವಡಿ ಮಾಡಿದ್ದಾರೆ 

  ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಅತೃಪ್ರನ್ನು ನಡುನೀರಿನಲ್ಲಿ ಕೈಬಿಟ್ಟು, ತಮ್ಮ ಮಾನ ಮುಚ್ಚಿಕೊಳ್ಳುವುದಕ್ಕಾಗಿ ಈಗ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂಬೈಗೆ ಸಿದ್ದರಾಮಯ್ಯ ಅವರು ಯಾವ ಶಾಸಕರನ್ನೂ ಕಳುಹಿಸಿಲಿಲ್ಲ. ಅತೃಪ್ತ ಚಟುವಟಿಕೆಯಿಂದ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ. ಮುಂಬೈಗೆ ಹೋದ ಬಳಿಕ ಕೆಲವು ದಿನಗಳ ಹಿಂದೆ ಸದಸ್ಯತ್ವವನ್ನು ಅನರ್ಹಗೊಳಿಸಬೇಡಿ. ನಾವು ವಾಪಸು ಬರುತ್ತೇವೆ ಎಂದು ಅತೃಪ್ತರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದರು. ಅವರು ಕರೆ ಮಾಡಿದ್ದಾಗ ನಾನು ಸಹ ಸಿದ್ದರಾಮಯ್ಯ ಅವರ ಜೊತೆಯಲ್ಲಿಯೇ ಇದ್ದೆ ಎಂದು ತಂಗಡಗಿ ಸ್ಪಷ್ಟಪಡಿಸಿದರು. ತಮ್ಮ ರಾಜಕೀಯ ಆಟಕ್ಕೆ ಅತೃಪ್ತರನ್ನು ಬಳಸಿಕೊಂಡ ಬಿಜೆಪಿ, ಇದೀಗ ಅನರ್ಹರಾದ ಬಳಿಕ ಅವರನ್ನು ಬೀದಿಗೆ ತಂದು ನಿಲ್ಲಿಸಿದೆ. ನಂಬಿದವರಿಗೆ ಬಿಜೆಪಿ ದ್ರೋಹ ಎಸಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.