ಸರಗಳ್ಳರ ಬಂಧನ : ಚಿನ್ನಾಭರಣ ಸೇರಿ 13 ಲಕ್ಷ ರೂ. ಮೌಲ್ಯದ ವಸ್ತುಗಳು ವಶ

ಲೋಕದರ್ಶನ ವರದಿ

ವಿಜಯಪುರ 24 : ವಿಜಯಪುರ ನಗರದಲ್ಲಿ ನಡೆದ 10 ಸರಗಳ್ಳತನ ಪ್ರಕರಣಗಳಿಗೆ  ಸಂಬಂಧಿಸಿದಂತೆ ಐವರು ಆರೋಪಿತರನ್ನು ಶನಿವಾರ ಸಂಜೆ ಬಂಧಿಸಿರುವ ಪೊಲೀಸರು, ಬಂಧಿತರಿಂದ 309 ಗ್ರಾಂ ಬಂಗಾರದ ಆಭರಣಗಳು, ನಾಲ್ಕು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 13,46,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. .

ನಗರದ ನವಭಾಗ ನಿವಾಸಿ ತೌಸೀಪ್ ಖಾಜಾಸಾಬ ಬಾಗವಾನ (21), ಹಕೀಂಚೌಕ್ ನಿವಾಸಿ ಅಜಮಾನ್ ಇಮ್ತಿಯಾಜ್ ಖುರೇಷಿ (22), ಪುಲಕೇಶಿ ನಗರ ನಿವಾಸಿ ಮೊಹ್ಮದ್ಖಾಲೀದ್ ಮೊಹ್ಮದಶಫೀಕ್ ಇನಾಮದಾರ (24), ರಜಪೂತ ಗಲ್ಲಿ ನಿವಾಸಿ ಅಮೀತ್ ರಾಮನಗೌಡ ಜಂಬಗಿ (21), ಇಂದಿರಾನಗರ ಕೆಎಚ್ಬಿ ಕಾಲನಿ ನಿವಾಸಿ ಮೊಹ್ಮದ್ ಆರೋಫ್ ಶೇಖ ಅಮೀರ್ ಯರನಾಳ (21) ಎಂಬವರೇ ಬಂಧಿತ ಆರೋಪಿತರು.

ರವಿವಾರ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಅವರು, ಸರಗಳ್ಳತನ ಪ್ರಕರಣಗಳ ತಪಾಸಣೆ ಕುರಿತು ಹೆಚ್ಚುವರಿ ಪೊಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಹಾಗೂ ಪೊಲೀಸ್ ಉಪಾಧೀಕ್ಷಕ ಡಿ.ಅಶೋಕ ಅವರ ನೇತೃತ್ವದಲ್ಲಿ ಎರಡು ತನಿಖಾ ತಂಡಗಳನ್ನು ರಚನೆ ಮಾಡಲಾಗಿತ್ತು. ಒಂದು ತನಿಖಾ ತಂಡವು ಶನಿವಾರ ಸಂಜೆ ಇಬ್ಬರು ಸರಗಳ್ಳರನ್ನು ನಗರದ ನವಭಾಗ ರಸ್ತೆಯ ಗಂಗನಹಳ್ಳಿ ತೋಟದ ಹತ್ತಿರ ಹಾಗೂ ಅದೇ ದಿನ ಇನ್ನೊಂದು ತನಿಖಾ ತಂಡವು ಮೂವರು ಸರಗಳರನ್ನು ಇಂದಿರಾನಗರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿವೆ ಎಂದು ತಿಳಿಸಿದರು.

ನವಭಾಗ ರಸ್ತೆಯ ಗಂಗನಹಳ್ಳಿ ತೋಟದ ಹತ್ತಿರ ಸಂಶಯಾಸ್ಪದವಾಗಿ ಮೋಟಾರ ಸೈಕಲ್ ಮೇಲೆ ತಿರುಗಾಡುತ್ತಿದ್ದ ಆರೋಪಿತರಾದ ತೌಸೀಫ್ ಹಾಗೂ ಅಜಮಾನ ಎಂಬವರನ್ನು ವಶಕ್ಕೆ ಪಡೆದು ವಿಚರಣೆಗೊಳಪಡಿಸಿದಾಗ ಸರಗಳ್ಳತನ ಪ್ರಕರಣಗಳ ಬಗ್ಗೆ ಪತ್ತೆಯಾಗಿದೆ. ಬಂಧಿತ ಇಬ್ಬರೂ ಆರೋಪಿತರು ಕೂಡಿ ವಿಜಯಪುರ ಶಹರದ ಗಾಂಧೀಚೌಕ್ ಪೊಲಿಶ್ ಠಾಣೆ ವ್ಯಾಪ್ತಿಯಲ್ಲಿ  ನಡೆದ ಮೂರು ಸರಗಳ್ಳತನ ಪ್ರಕರಣಗಳಲ್ಲಿ ಹಾಗೂ ಆದರ್ಶನಗರ ಪೊಲಿಶ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರಿಂದ ನಾಲ್ಕು ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 99 ಗ್ರಾಂ ಬಂಗಾರದ ಆಭರಣಗಳು, ಕೃತ್ಯಕ್ಕೆ ಬಳಸಿದ ಒಂದು ಸ್ಪ್ಲೆಂಟರ್ ಮೊಟಾರ್ ಸೈಕಲ್ ಸೇರಿದಂತೆ ಒಟ್ಟು 3.46 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ನಿಕ್ಕಂ ವಿವರಿಸಿದರು.

ಇದೇ ರೀತಿ ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣಗಳಲ್ಲಿಯ ಆರೋಪಿತರ ತಪಾಸಣೆ ಕೈಗೊಂಡಿದ್ದ ಪೊಲೀಸರು ಇಂದಿರಾ ನಗರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೋಟಾರ ಸೈಕಲ್ ಮೇಲೆ ತಿರುಗಾಡುವಾಗ ಆರೋಪಿತರಾದ ಮಹ್ಮದ ಖಾಲೀದ್, ಅಮೀತ್ ಹಾಗೂ ಮಹ್ಮದ ಆರೀಫ್ ಎಂಬವರನ್ನು ವಶಕ್ಕೆ ಪಡೆದು ವಿಚರಿಸಿದಾಗ ಮೂವರು ಆರೋಪಿತರು ಜಲನಗರ, ಎಪಿಎಂಸಿ, ಆದರ್ಶನಗರ, ಗಾಂಧೀಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಸರಗಳ್ಳತನ ಪ್ರಕರಣದಲ್ಲಿ ಹಾಗೂ ಗೋಳಗುಮ್ಮಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಈ ಮೂವರು ಆರೋಪಿಗಳಿಂದ ಆರು ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 210 ಗ್ರಾಂ ಬಂಗಾರದ ಆಭರಣ, ಕೃತ್ಯಕ್ಕೆ ಬಳಸಿದ 3 ಮೋಟಾರ್ ಸೈಕಲ್ ಸೇರಿದಂತೆ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಸರಗಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಎಎಸ್ಪಿ ನೇಮಗೌಡ ಹಾಗೂ ಡಿವೈಎಸ್ಪಿ ಅಶೋಕ ಅವರ ನೇತೃತ್ವದಲ್ಲಿ ರಚನೆ ಮಾಡಲಾಗಿರುವ ಪೊಲೀಸ್ ಅಧಿಕಾರಿಗಳ ತಂಡದ ಕಾರ್ಯವನ್ನು ಎಸ್ಪಿ ನಿಕ್ಕಂ ಶ್ಲ್ಯಾಘಿಸಿದರು.

ಈ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿಗಳಾದ ರವೀಂದ್ರ ನಾಯ್ಕೋಡಿ, ಸುನೀಲ ಕಾಂಬಳೆ, ಟಿ.ಬಿ. ನೀಲಗಾರ, ಸಂಜಯಕುಮಾರ ಕಲ್ಲೂರ, ವಿನೋದ ದೊಡಮನಿ, ಆರೀಪ್ ಮುಶಾಪುರಿ, ಸತೀಶ ಕಣಮೇಶ್ವರ, ಸಿಬ್ಬಂದಿಗಳಾದ ಬಿ.ಕೆ. ಗುಡಿಮನಿ, ಎಚ್.ಎಚ್. ಜಮಾದಾರ, ಎನ್.ಕೆ. ಮುಲ್ಲಾ, ಎಚ್.ಎಚ್. ಮುಲ್ಲಾ, ಆರ್.ಎ. ಪತ್ತಾರ, ಎಂ.ಆರ್. ಮಾಳಗೊಂಡ ಆರ್.ಎಸ್. ಪೂಜಾರಿ, ಎಸ್.ವಿ. ಜೋಗಿನ, ವಿ.ಎನ್. ಶಹಾಪೂರ, ಬಿ.ಎಂ. ಪವಾರ, ಎಸ್.ಎಸ್. ಮಾಳೇಗಾಂವ, ಪುಂಡಲೀಕ ಬಿರಾದಾರ, ಶಿವು ಅಳ್ಳಿಗಿಡದ, ಸಿದ್ದು ದಾನಪ್ಪಗೋಳ, ಬಿ.ಎಂ. ಶೇಖ, ಸಂಜಯ ಬಡಚಿ ಅವರ ಕಾರ್ಯವನ್ನು ಎಸ್.ಪಿ. ಶ್ಲಾಘಿಸಿ ಬಹುಮಾನ ಘೋಷಿಸಿದರು.