ಲೋಕದರ್ಶನ ವರದಿ
ಬೈಲಹೊಂಗಲ 28: ಪರಮಾತ್ಮನ ದರ್ಶನವಾಗಬೇಕಾದರೆ ವೇದಾಂತ ಪರಿಷತ್ಗಳಲ್ಲಿ ಸಾಧು ಶರಣರ, ಸಂತರ ಅಮೃತವಾಣಿಯನ್ನು ಆಲಿಸುವದರಿಂದ ಮನುಷ್ಯನ ಮನಸ್ಸು ಹಗುರವಾಗುತ್ತದೆ ಎಂದು ಹುಬ್ಬಳ್ಳಿ, ಬಿಜಾಪೂರ ಶಾಂತಾಶ್ರಮ ಷಣ್ಮೂಖರೂಢ ಮಠದ ಅಭಿನವ ಶಿವಪುತ್ರ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಸುಕ್ಷೇತ್ರ ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ 80 ನೇ ಜಯಂತ್ಯೋತ್ಸವ (ಸಹಸ್ರ ಚಂದ್ರ ದರ್ಶನ ಮಹೋತ್ಸವ) 50 ನೇ ವರ್ಷದ ಪೀಠಾರೋಹಣ ಹಾಗೂ 50 ನೇ ಅಖಿಲ ಭಾರತ ವೇದಾಂತ ಪರಿಷತ್ತಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ಎರಡನೇ ದಿನದ ಏಷ ಸರ್ವೇಷು ಭೂತೇಷು ಗೂಢಾತ್ಮಾನ ಪ್ರಕಾಶ್ಯತೆ ವಿಷಯ ಕುರಿತು ಮಾತನಾಡಿ, ಮಹಾ ತಪಸ್ವಿಗಳು, ಕೃಪೆ ಜ್ಞಾನ ಬಲದಿಂದ ಡಾ.ಶಿವಾನಂದ ಸ್ವಾಮೀಜಿಗಳು ತಮ್ಮ ಶಾಂತಗುಣ ಸಹನಶೀಲತೆ, ಅಚಲ ನಿಲುವಿನಿಂದ ಮನುಕುಲದ ಉದ್ಧಾರ ಹೆಬ್ಬಯಕೆಯಿಂದ ನಿರಂತರ ಅನ್ನದಾನ ಜ್ಞಾನ, ದಾನಗಳಿಂದ ಸರ್ವಧರ್ಮ ಸಮನ್ವದಯದ ಹರಿಕಾರರಾಗಿ ಈ ಪುಟ್ಟ ಇಂಚಲ ಗ್ರಾಮದಲ್ಲಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ವೈದ್ಯಕೀಯ ಕೃಷಿ ರಂಗದಲ್ಲಿ ಸಾಕಷ್ಟು ಸಾಧನೆ ಗೈದಿದ್ದಾರೆ ಎಂದರು. ಬುದ್ನಿ ಸಿದ್ಧಾರೂಢಠದ ಪ್ರಭಾನಂದ ಸ್ವಾಮೀಜಿ ಮಾತನಾಡಿ, ಭಗವಂತನ ವ್ಯಾಪ್ತಿ ಪಾತಾಳ ಭೂಮಿ ಆಕಾಶಕ್ಕಿಂತಲೂ ಮಿಗಿಲಾದ್ದು ಅದು ವಸ್ತು ರೂಪವಲ್ಲ ಅವಯವಗಳನ್ನು ಹೊಂದಿಲ. ನಿರಾಕಾರ ಸ್ವರೂಪವನ್ನು ಹೊಂದಿದ ಭಗವಂತನ ವಾಸ ನಮ್ಮಲ್ಲಿಯೂ ಇದೆ. ನಾನೇ ಅವನೆಂಬ ಪ್ರಜ್ಞೆ ನಮ್ಮೊಳಗೆ ಮೂಡಲು ಅಂತರ್ ದೃಷ್ಟಿ ಜಾಗೃತರಾಗಬೇಕು. ನಮ್ಮ ಒಳಗಿನ ಕಣ್ಣುಗಳನ್ನು ತೆರೆಯಿಸಲು ನಮಗೆ ಗುರುವಿನ ಅವಶ್ಯಕತೆ ಎಂದರು.
ಸಾನಿಧ್ಯ ವಹಿಸಿ ಬೀದರ ಚಿದಂಬರ ಆಶ್ರಮ ಸಿದ್ದಾರೂಢ ಮಠದ ಶಿವಕುಮಾರೇಶ್ವರ ಸ್ವಾಮೀಜಿ ಮಾತನಾಡಿ, ಮನಸ್ಸೆಂಬ ಕನ್ನಡಿಯ ಮೇಲೆ ವಿಷಯಾದಿಗಳೆಂಬ ಧೂಳು ಬಿದ್ದು ಏದುರಿಗಿನ ನಮ್ಮ ಮುಖವೇ ಕನ್ನಡಿಯಲ್ಲಿ ಕಾಣದಾಗಿದೆ. ವಿಷಯಾದಿಗಳೆಂಬ ಧೂಳನ್ನು ವರೆಸುವ ಪ್ರಜ್ಞೆ ನಮಗೆ ಬರಬೇಕು ಆ ಪ್ರಜ್ಞೆ ಗುರುವಿನ ಉಪದೇಶದಿಂದ ಮಾತ್ರ ಪ್ರಾಪ್ತವಾಗುತ್ತದೆ ಹೀಗೆ ಸತತ ಪ್ರಯತ್ನದಿಂದ ಮುಮುಕ್ಷಗಳಾಗಲು ಸಾಧ್ಯವಾಗುತ್ತದೆ. ನಾವು ಮುಮುಕ್ಷಗಳಾದ ನಂತರ ಮೋಕ್ಷವಾಗುವುದು ಕ್ಷಣ ಮಾತ್ರದಲ್ಲಿ ಮಾತ್ರ ಎಂದರು. ಆಂದ್ರಪ್ರದೇಶ ಏರ್ಪಾಡು ವ್ಯಾಸಾಶ್ರಮ ಪೀಠದ ಪರಿಪೂರ್ಣಾನಂದ ಸ್ವಾಮೀಜಿ ಮಾತನಾಡಿ, ನಿತ್ಯ ಸತ್ಯನಾದ ಶಾಶ್ವತನಾದ ಪರಮಾತ್ಮನ ದರ್ಶನವು ನಮಗೆ ಆಗಬೇಕಾದರೆ ಅವನ ಅನುಸಂಧಾನ ಪಡೆಯಬೇಕಾದರೆ ಗುರುವಿನ ಆಶ್ರಯ ಬೇಕು ಎಂದರು. ಕಾಶಿ ರಾಜರಾಜೇಶ್ವರಿ ಮಠದ ಆಚಾರ್ಯ ದಿವ್ಯಚೈತನ್ಯಜೀ ಮಹಾರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ವವ್ಯಾಪ್ತಿಯಾದ ಭಗವಂತನು ಪ್ರತಿಯೊಬ್ಬರಲ್ಲಿಯೂ ನೆಲೆ ಉರಿದ್ದಾನೆ. ಅವನ ಇರುವಿಕೆಯ ಅರಿವು ನಮಗೆ ಆಗಬೇಕಾದರೆ ಹುಡುಕುವ ಪ್ರಯತ್ನ ಮಾಡಬೇಕು ಎಂದರು.
ಸುಕ್ಷೇತ್ರ ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಪರಮಾತ್ಮನು ಬಹಳ ಹತ್ತಿವಿದ್ದರೂ ದೂರವಾಗಿರುತ್ತಾನೆ ಎಂದು ಶೃತಿ ಹೇಳುತ್ತದೆ. ಅಸಂಸ್ಕೃತ ಬುದ್ದಿ ಉಳ್ಳವರಿಗೆ ನೂರು ಜನ್ಮ ಎತ್ತಿದರೂ ಹತ್ತಿರವಾಗದಷ್ಟು ದೂರವಾಗಿದ್ದಾನೆ. ನಮ್ಮ ಮನಸ್ಸು ಬುದ್ದಿ ಪರಿಶುದ್ದವಾಗಿಲ್ಲದಿದ್ದರೆ ನಿತ್ಯ ಸತ್ಯನಾದ ಭಗವಂತನ ಪ್ರಾಪ್ತಿ ನಮಗೆ ಆಗುವದಿಲ್ಲ ಮತ್ತು ನಿತ್ಯ ಆನಂದ ಅನುಭವ ದೊರೆಯುವದಿಲ್ಲ.
ಪ್ರತಿಯೊಬ್ಬರೂ ಪರಿಶುದ್ದ ಮನಸ್ಸು ಉಳ್ಳವರಾಗಿ ಸತ್ಸಂಗಗಳಲ್ಲಿ ಪಾಲ್ಗೋಂಡು ಗುರುವಿನ ಕೃಪಾ ಆಶೀವರ್ಾದಕ್ಕೆ ಪಾತ್ರರಾಗಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕೆಂದರು. ವೇದಿಕೆ ಮೇಲೆ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಸುಬ್ರಮಣ್ಯ ಸ್ವಾಮೀಜಿ, ಪರಮಾತ್ಮಾನಂದ ಸ್ವಾಮೀಜಿ, ಪ್ರತಿಭಾನಂದಗಿರಿ ಮಾತಾಜಿ, ಜ್ಯೋತಿರ್ಮಯಾನಂದ ಮಾತಾಜಿ, ಚನ್ನಮಲ್ಲ ಶಿವಾಚಾರ್ಯರು, ಪರಮರಾಮಾರೂಢ ಸ್ವಾಮೀಜಿ, ಸಹಜಾನಂದ ಸ್ವಾಮೀಜಿ, ಪ್ರಭಾನಂದ ಸ್ವಾಮೀಜಿ, ನಿಗರ್ುಣಾಂದ ಸ್ವಾಮಿಜಿ, ಮಾತೋಶ್ರೀ ಅಸುಂಡಿ ನೀಲಮ್ಮನವರು, ಮಾತೋಶ್ರೀ ಅಕ್ಕಮಹಾದೇವಿ, ದಯಾನಂದ ಸರಸ್ವತಿ ಸ್ವಾಮೀಜಿ, ಸಹಜಾನಂದ ಸ್ವಾಮೀಜಿ, ಅದೃಶ್ಯಾನಂದ ಸ್ವಾಮಿಜಿ, ವಾಸುದೇವ ಸ್ವಾಮಿಜಿ, ಶಿವಯ್ಯ ಸ್ವಾಮಿಜಿ, ರೇವಯ್ಯಸ್ವಾಮಿ, ಮಾತೋಶ್ರೀ ಅನಸೂಯಾದೇವಿ, ಮಾತೋಶ್ರೀ ಅಕ್ಕಮಹಾದೇವಿ ಇದ್ದರು. ಗಣ್ಯ ಮಾನ್ಯರಿಗೆ ಶ್ರೀಗಳು ಸತ್ಕರಿಸಿದರು. ಸಾವಿರಾರು ಸದ್ಭಕ್ತರು ಪಾಲ್ಗೊಂಡಿದ್ದರು.