ರಾಯಬಾಗ 09: ಮಹಿಳೆಯರು ಒಂದು ಕುಟುಂಬದ ಆಧಾರ ಸ್ತಂಭವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬೆಳೆಯಲು ಪ್ರತಿಯೊಬ್ಬರೂ ಅವಕಾಶವನ್ನು ಕಲ್ಪಿಸಬೇಕೆಂದು ಶಿಕ್ಷಣ ಪ್ರಸಾರಕ ಮಂಡಳದ ಕಾರ್ಯದರ್ಶಿ ಎಸ್.ಎಸ್.ಸಿಂಗಾಡಿ ಹೇಳಿದರು.ರಾಯಬಾಗ ಗ್ರಾಮೀಣ ವ್ಯಾಪ್ತಿಯ ದತ್ತು ಗ್ರಾಮ ಶಾಹುಪಾರ್ಕನ ವಿದ್ಯಾರ್ಥಿಗಳ ಉಚಿತ ವಸತಿ ನಿಲಯದ ಸಭಾಂಗಣದಲ್ಲಿ ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಗುರುವಾರ ನಡೆದ ಮಹಿಳಾ ಸಬಲೀಕರಣ ಕುರಿತು ನಡೆದ ಸಂವಾದವನ್ನು ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದಿದ್ದು ಎಲ್ಲಿ ಮಹಿಳೆಯನ್ನು ಪೂಜ್ಯ ಭಾವದಿಂದ ಕಾಣುತ್ತಾರೋ ಅಲ್ಲಿ ಸುಖ ಮತ್ತು ನೆಮ್ಮದಿ ನೆಲೆಸಿರುತ್ತದೆ ಎಂದರು. ಇನ್ನು ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಎರಡು ದಿನಗಳ ಹಿಂದೆ ಪಾಕಿಸ್ತಾನದ ಮೇಲೆ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ವಿವರಗಳನ್ನು ಮಾಧ್ಯಮಗಳಿಗೆ ತಿಳಿಸಿದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಈ ಇಬ್ಬರು ಮಹಿಳಾ ಅಧಿಕಾರಿಗಳಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಶಿಕ್ಷಣ ಪ್ರಸಾರಕ ಮಂಡಳದ ನಿರ್ದೇಶಕಿ ಭಾಗ್ಯಶ್ರೀಅಕ್ಕಾ ಪಾಟೀಲ ಅವರು ವಹಿಸಿಕೊಂಡಿದ್ದರು. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್.ಎಸ್. ಕುರಬೇಟಿ, ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮದ ಅಧಿಕಾರಿ ಪ್ರೊ.ಪಿ.ಆರ್ ಸವದತ್ತಿ, ಉಪನ್ಯಾಸಕರಾದ ಎಸ್.ಎಮ್. ಲೈನದಾರ, ಆಯ್.ಆರ್ ಪತ್ತಾರ, ಎಮ್.ಆರ್ ಕಠಾರಿ, ರಾಮು ಕಾಕಡೆ, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ತ್ರಿವೇಣಿ ಮೊಪಗಾರ ನಿರೂಪಿಸಿ, ವಿನೋದ ಧುಮಾಳೆ ಸ್ವಾಗತಿಸಿ, ರಿಹಾನಾ ನಧಾಪ ವಂದಿಸಿದರು.