ಗದಗ 09 : ದೈಹಿಕ ನ್ಯೂನ್ಯತೆ ಇರುವವರನ್ನು ತುಚ್ಛವಾಗಿ ಕಾಣುವುದೇ ಹೆಚ್ಚು. ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಹಲವರ ಊಹೆ. ಆದರೆ ತಾವು ಕೂಡ ದುಡಿದು ಸ್ವಾವಲಂಬಿಗಳಾಗಬಹುದು ಎನ್ನುವುದಕ್ಕೆ ಈ ವಿಶೇಷ ಚೇತನ ದಂಪತಿಗಳು ಸಾಕ್ಷಿಯಾಗಿದ್ದಾರೆ.
ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನರೇಗಾದಡಿ ಮೂರು ವಾರಗಳಿಂದ ಬದು ನಿರ್ಮಾಣ ಕೆಲಸ ನೀಡಲಾಗಿದೆ. ಗ್ರಾಮದ ಅಂಗವಿಕಲ ದಂಪತಿಗಳಾದ ಹುಲಗೆಪ್ಪ ಸುಬ್ಬಪ್ಪ ಚಲವಾದಿ ಮತ್ತು ಶಾಂತವ್ವ ಹುಲಗೆಪ್ಪ ಚಲವಾದಿ ಅವರು ಮೂರು ನಾಲ್ಕು ವರ್ಷಗಳಿಂದ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹುಲಗೆಪ್ಪ ಅವರಿಗೆ ಒಂದು ಕಣ್ಣು ಸರಿಯಾಗಿ ಕಾಣುವುದಿಲ್ಲ. ಅವರ ಪತ್ನಿ ಶಾಂತವ್ವ ಅವರದು ಒಂದು ಕೈ ಅಶಕ್ತವಾಗಿದೆ. ಹೀಗಿದ್ದರೂ ದುಡಿಯುವ ಉತ್ಸಾಹ ದಂಪತಿಗಳಲ್ಲಿ ಕಡಿಮೆಯಾಗಿಲ್ಲ. ದಂಪತಿಗೆ ಮೂವರು ಮಕ್ಕಳು ಅವರಲ್ಲಿ ಇಬ್ಬರು ಹೆಣ್ಣು ಮಕ್ಕಳು ಅವರಿಗೆ ಮದುವೆಯಾಗಿದೆ. ಓರ್ವ ಮಗನಿಂದು ಅವನು ಸಹ ನಿತ್ಯ ದುಡಿಮೆಗೆ ಗಾರೆ ಕೆಲಸ ಮಾಡುತ್ತಾರೆ. ತುಂಬು ಕುಟುಂಬದಲ್ಲಿ ವಾಸವಾಗಿರುವ ದಂಪತಿಗಳಿಗೆ ಯಾವುದೇ ಜಮೀನು ಆಸ್ತಿ ಇಲ್ಲ. ಊರಿನಲ್ಲಿ ವಾಸಿಸಲು ಸ್ವತಃ ಮನೆ ಅಷ್ಟೆ ಇದೆ. ಮನೆಯ ಖರ್ಚು ವೆಚ್ಚಕ್ಕೆ ಅಲ್ಪ ಸಹಾಯವಾಗಲಿ ಎಂಬ ಉದ್ದೇಶದಿಂದ ಉದ್ಯೋಗ ಖಾತ್ರಿಯಲ್ಲಿ ಪ್ರಸಕ್ತ ವರ್ಷ ಮೂರು ವಾರಗಳಿಂದ ಕೆಲಸ ಮಾಡುತ್ತಿದ್ದಾರೆ.
ಉದ್ಯೋಗ ಖಾತ್ರಿಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಕೆಲಸ ಒದಗಿಸುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.ಉದ್ಯೋಗ ಖಾತ್ರಿ ಕೆಲಸದಲ್ಲಿ ದೈಹಿಕ ನ್ಯೂನ್ಯತೆ ಎದುರಿಸುತ್ತಿರುವ ಅಂಧರು, ಕೈ ಇಲ್ಲದವರು, ಮೂಗರು, ಕಿವುಡರು ಹೀಗೆ ಕಷ್ಟದ ಬದುಕು ಸವೆಸುತ್ತಿರುವ ವಿಕಲಚೇತನರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ನರೇಗಾದಡಿ ಕೆಲಸ ಮಾಡುತ್ತಿದ್ದಾರೆ. ತಿಂಗಳ ಮಾಸಾಶನದಲ್ಲೇ ಮಾತ್ರ ಜೀವನ ನಡೆಸುತ್ತಿದ್ದ ಇವರಿಗೆ ಈಗ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ.ಇವರಲ್ಲದೆ ಇದೇ ರೀತಿ ಹಲವು ಮಂದಿಗೆ ಆಯಾ ಗ್ರಾಮಸ್ಥರು, ಪಂಚಾಯತಿಯವರು ಆಸಕ್ತಿ ವಹಿಸಿ ಕೆಲಸ ಒದಗಿಸುತ್ತೀರುವುದು ವಿಕಲಚೇತನರ ಸಂತಸ ಜೀವನಕ್ಕೆ ಅನಕೂಲವಾಗಿದೆ.ನಾನು ವಿಕಲಾಂಗನಾಗಿ ಹುಟ್ಟಿದ್ದೇ ತಪ್ಪಾಯ್ತಾ? ಎಂಬ ಭಾವ ಮೂಡಿದವರಿಗೆ, ನರೇಗಾ ಯೋಜನೆ ಹೊಸ ಬದುಕಿನ ಭರವಸೆ, ಪ್ರೀತಿ ಜೊತೆಗೆ ಕಾಳಜಿ ನೀಡಿದೆ. ನರೇಗಾ ಯೋಜನೆಯೂ ನಮಗೆ ಕೆಲಸ ಹಾಗೂ ಹೆಚ್ಚಿನ ಕೂಲಿ ನೀಡುವುದರ ಜೊತೆಗೆ ನೆಮ್ಮದಿಯೂ ನೀಡುತ್ತಿದೆ’ ಎಂದು ಹುಲಗೆಪ್ಪ ಚಲವಾದಿ ಖುಷಿ ವ್ಯಕ್ತಪಡಿಸುತ್ತಾರೆ.
ಬೇಸಿಗೆ ಅವಧಿಯಲ್ಲಿ ದುಡಿಯೋಣ ಬಾ ಅಭಿಯಾನದಡಿ ನಿರಂತರ ನರೇಗಾ ಕೆಲಸ ನೀಡುತ್ತಿರುವುದರಿಂದ ವಿಕಲಚೇತನರಿಗೆ ಇದ್ದೂರಲ್ಲೇ ಕೆಲಸ ಸಿಗುತ್ತಿದೆ. ನರೇಗಾ ಕೂಲಿ ದಿನಕ್ಕೆ 370 ರೂ.ಗೆ ಹೆಚ್ಚಿಸಿದ್ದರಿಂದ ಅಂಗವಿಕಲರು ಖುಷಿಯಿಂದ ನರೇಗಾ ಕೆಲಸ ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
- ಮಲ್ಲಯ್ಯ ಕೊರವನವರ
ಕಾರ್ಯನಿರ್ವಾಹಕ ಅಧಿಕಾರಿಗಳುತಾಲೂಕು ಪಂಚಾಯತಿ ಗದಗ