ಸಂಸ್ಕಾರದಿಂದ ಶಿಲೆಯೂ ಕೂಡ ಪೂಜಿಸಲ್ಪಡುವ ಮೂರ್ತಿಯಾಗಬಲ್ಲದು- ಹೊನ್ನಾಳಿ ಶ್ರೀಗಳು
ರಾಣೇಬೆನ್ನೂರ 25: ಹೊಲದಲ್ಲಿ ಬೆಳೆಯುವ ಭತ್ತವು ಸೂಕ್ತ ಸಂಸ್ಕಾರ ಸಿಕ್ಕು ಅಕ್ಕಿಯಾಗಬಲ್ಲದು. ಸಂಸ್ಕಾರ ಪಡೆದುಕೊಂಡ ಅನ್ನ ಪ್ರಸಾದವಾಗುತ್ತದೆ. ಹಾಗೆಯೇ ಸಂಸ್ಕಾರ ಪಡೆದ ಮನುಜ ಸಮಾಜಕ್ಕೆ ಬೆಳಕಾಗಬಲ್ಲನು. ಬರೀ ಮಕ್ಕಳಿಗೆ ಮಾತ್ರವಲ್ಲದೆ ಪಾಲಕರಿಗೂ ಕೂಡ ಇಂತಹ ಧಾರ್ಮಿಕ ಸಂಸ್ಕಾರ ನೀಡುವ ಶಿಬಿರದ ಇಂದಿನ ಅಗತ್ಯ ಮತ್ತು ಅವಶ್ಯ ಇದೆ. ಎಂದು ಹೊನ್ನಾಳಿ ಹಿರೇಕಲ್ ಮಠದ ಡಾ, ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.
ಅವರು ಇಲ್ಲಿನ ಚೆನ್ನೇಶ್ವರ ಮಠದ ಚೆನ್ನ ಮಲ್ಲಿಕಾರ್ಜುನ ಸಂಸ್ಕೃತಿ ಪ್ರಸಾರ ಪರಿಷತ್ತು ಆಯೋಜಿಸಿದ್ದ, 19ನೇ ವೇದಾದ್ಯಾಯನ ಮತ್ತು ಧಾರ್ಮಿಕ ಪೂಜಾ ವಿಧಿ ವಿಧಾನ ತರಬೇತಿ ಕಾರ್ಯಗಾರದ ಸಮಾರೋಪದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಧರ್ಮದರ್ಶನ ನಿತ್ಯದ ಪರಿಪಾಠವಾಗಬೇಕು ಅದು ಮಕ್ಕಳಲ್ಲಿ ಬೆಳೆದು ಬರಬೇಕು ಇದರಿಂದ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರ ನಿತ್ಯ ನಿರಂತರವಾಗಿರಲು ಸಹಕಾರಿಯಾಗಲಿದೆ ಎಂದ ಶ್ರೀಗಳು ಗುರು ಮುಖೇನ ಪಡೆದ ಸಂಸ್ಕಾರವನ್ನು ನಿತ್ಯ ವೃತ್ತಿಯಾಗಿ, ದೇಶದ ಶಾಂತಿ ಮತ್ತು ನೆಮ್ಮದಿ ಜೊತೆಗೆ ಲೋಕ ಕಲ್ಯಾಣವಾಗಲಿದೆ ಎಂದು ಹೇಳಿದರು.
ನಿತ್ಯವು ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಜಂಗಮ ವಟುಗಳ ಶಿಬಿರದಲ್ಲಿ ಗುರು ಮಂತ್ರ ಉಪದೇಶದೊಂದಿಗೆ ಶಿವ ದೀಕ್ಷೆಯನ್ನು ನೀಡಲಾಯಿತು.. ಶಿವ ದೀಕ್ಷಾ ಕಾರ್ಯಕ್ರಮದ ನೇತೃತ್ವವನ್ನು ಶಿವರಾಜ ಶಾಸ್ತ್ರಿಗಳು, ಎಂ ಕೆ ಹಾಲಸಿದ್ದಯ್ಯ ಶಾಸ್ತ್ರಿಗಳು, ವೀರೇಶ ಶಾಸ್ತ್ರಿಗಳು ಗೌರಿಶಂಕರ ನೆಗಳೂರು ಮಠ ಶಾಸ್ತ್ರಿಗಳು ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ಕಾರ್ಯದರ್ಶಿ ಅಮೃತ ಗೌಡ ಹಿರೇಮಠ, ಪ್ರಾಯೋಜಕರಾದ ಜಯಶ್ರೀ, ನಿವೃತ್ತ ಉಪನ್ಯಾಸಕ ಗಂಗಾಧರ, ವಿರೂಪಾಕ್ಷಪ್ಪ ಕೋರಿ, ತೆರಿಗೆ ಸಲಹೆಗಾರ ಶಿವಪ್ಪ ಗುರಿಕಾರ, ತಾ. ಕ. ಸಾ. ಪ. ಗೌರವ ಕಾರ್ಯದರ್ಶಿ ಜಗದೀಶ ಮಳಿಮಠ ವರ್ತಕ ಬಿದ್ದಾಡೆಪ್ಪ ಚಕ್ರಸಾಲಿ, ವಿ.ವಿ. ಗಾಯಿತ್ರಮ್ಮ ಕುರುವತ್ತಿ, ಹರಪನಹಳ್ಳಿ, ಆರ್. ಬಿ. ಪಾಟೀಲ್, ಸೋಮಶೇಖರ ಹಿರೇಮಠ, ವಿದ್ಯಾವತಿ ಮಳಿಮಠ, ಶಿಕ್ಷಕಿ ಕಸ್ತೂರಮ್ಮ ಪಾಟೀಲ್, ಮುತ್ತಣ್ಣ ಪಾಟೀಲ, ರಾಜು,ವಿಜಯ ದೇವಗಿರಿಮಠ, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಬಿರದ ಸೇವಾಕರ್ತರಿಗೆ ಶ್ರೀಗಳು ಗುರು ರಕ್ಷೆ ನೀಡಿ ಗೌರವಿಸಿದರು.