ಟಿಪ್ಪು ಸುಲ್ತಾನ ಅಪ್ರತಿಮ ದೇಶ ಭಕ್ತ: ಪೂಜಾರ

ರಾಯಬಾಗ: ಹಜರತ್ ಟಿಪ್ಪು ಸುಲ್ತಾನ ಒಬ್ಬ ಅಪ್ರತಿಮ ದೇಶ ಭಕ್ತನಾಗಿದ್ದು, ಭಾರತ ದೇಶದಿಂದ ಬ್ರಿಟಿಷರನ್ನು ಹೊರಹಾಕಲು ಸಾಕಷ್ಟು ಪ್ರಯತ್ನಪಟ್ಟು ಅವರಜೊತೆ ಯುದ್ಧ ಮಾಡಿ ವೀರಮರಣಪ್ಪಿದನು ಎಂದು ಗ್ರೇಡ್-2 ತಹಶೀಲ್ದಾರ ಬಸಪ್ಪ ಪೂಜಾರ ಹೇಳಿದರು. 

ಶನಿವಾರ ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ಅನೇಕ ಸುಧಾರಣೆ ತಂದಿದ್ದನು. ಮೈಸೂರು ರಾಜ್ಯಕ್ಕೆ ರೇಷ್ಮೆಯನ್ನು ಹಾಗೂ ರಾಕೆಟ್ ತಂತ್ರಜ್ಞಾನವನ್ನು ವಿಶ್ವಕ್ಕೆ ಪರಿಚಯಿಸಿದ ಕೀತರ್ಿ ಟಿಪ್ಪು ಸುಲ್ತಾನನಿಗೆ ಸಲ್ಲುತ್ತದೆ ಎಂದರು. 

ನ್ಯಾಯವಾದಿ ತೌಫೀಕ್ ಮೊಮಿನ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯನವರು ಟಿಪ್ಪು ಜಯಂತಿಯನ್ನು ಸರಕಾರದಿಂದ ಆಚರಿಸುವದಕ್ಕಿಂತ ಮುಂಚೆ ಯಾವುದೇ ವಿವಾದ ಇಲ್ಲವಾಗಿತ್ತು. ಆದರೆ ಸರಕಾರ ಟಿಪ್ಪು ಜಯಂತಿ ಆಚರಿಸಲು ಪ್ರಾರಂಭಿಸಿದ ಬಳಿಕ ಕೆಲವೊಂದು ವ್ಯಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ವಿವಾದ ಹುಟ್ಟು ಹಾಕುತ್ತಿರುವುದು ಅತ್ಯಂತ ಖೇದಕರವಾಗಿದೆ. ಟಿಪ್ಪು ಜಯಂತಿ ಆಚರಿಸುವುದು ಬೇಡ ಅಂದರೆ, ಉಳಿದ ಮಹಾನ ನಾಯಕರ ಜಯಂತಿ ಆಚರಿಸುವುದನ್ನು ಕೂಡ ನಿಷೇಧಿಸಿ, ಕೇವಲ ಸ್ವತಂತ್ರ ದಿನ, ಗಣರಾಜ್ಯೋತ್ಸವ ದಿನ ಹಾಗೂ ಗಾಂಧಿ ಜಯಂತಿಯನ್ನು ಮಾತ್ರ ಆಚರಿಸಲಿಯೆಂದು ಒತ್ತಾಯಿಸಿದರು. 

ತಹಶೀಲ್ದಾರ ಡಿ.ಎಸ್.ಜಮಾದಾರ, ತಾ.ಪಂ.ಇಒ ಡಿ.ಎಮ್.ಜಕ್ಕಪ್ಪಗೋಳ, ತಾಲೂಕು ಅಧಿಕಾರಿಗಳಾದ ಆರ್.ಎಫ್.ಹಂದಿಗುಂದ, ಎಮ್.ಎಸ್.ಮನ್ನಿಕೇರಿ, ಮುಖಂಡರಾದ ಅಜಂ ಮುಲ್ಲಾ, ಫಯಾಜ್ ಕನವಡೆ, ಅದಂ ಪಠಾಣ, ಅಬ್ದುಲ್ ಕನವಡೆ ಸೇರಿದಂತೆ ಮುಂತಾದವರು ಇದ್ದರು.