ಉಡುಪಿ, ಮಾ 26: -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾಗಲು ಉಡುಪಿಗೆ ಆಗಮಿಸಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಅವರೊಂದಿಗೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.
ನಂತರ, ಅವರು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ನಂತರ, ಅವರು ಇತ್ತೀಚೆಗೆ ನಾಪತ್ತೆಯಾದ 'ಸುವರ್ಣ ತ್ರಿಭುಜ' ದೋಣಿ ಮಾಲೀಕ ಚಂದ್ರಶೇಖರ್ ಕೊಟಾಯನ್ ಹಾಗೂ ಮೀನುಗಾರ ದಾಮೋದಾರ್ ಮನೆಗೆ ಭೇಟಿ ನೀಡಿ ಚಂದ್ರಶೇಖರ್ ಅವರ ಪತ್ನಿ ಶ್ಯಾಮಲಾ ಹಾಗೂ ದಾಮೋದರ್ ಅವರ ಪತ್ನಿ ಮೋಹಿನಿ ಅವರಿಗೆ ಸಾಂತ್ವನ ಹೇಳಿದರು.
ಡಿಸೆಂಬರ್ 13ರಂದು ಮಲ್ಪೆ ಬಳಿ ಮೀನು ಹಿಡಿಯಲು ಆಳದ ಸಮುದ್ರಕ್ಕೆ ತೆರಳಿದ್ದ 'ಸುವರ್ಣ ತ್ರಿಭುಜ ' ದೋಣಿ ಡಿಸೆಂಬರ್ 15ರಂದು ಮಧ್ಯರಾತ್ರಿ ನಾಪತ್ತೆಯಾಗಿದ್ದು, ಇಲ್ಲಿಯವರೆಗೆ ಪತ್ತೆಯಾಗಿಲ್ಲ.