ಇರಾಕ್ ನಲ್ಲಿ ಮತ್ತೆ ಅಶಾಂತಿ: ಸಾವಿನ ಸಂಖ್ಯೆ 30ಕ್ಕೆ ಏರಿಕೆ, 2,300 ಕ್ಕೂ ಹೆಚ್ಚು ಮಂದಿಗೆ ಗಾಯ

 ಮಾಸ್ಕೋ, ಅ 26:   ಇರಾಕ್ನಲ್ಲಿ ಶುಕ್ರವಾರ ಮತ್ತೆ ಆರಂಭವಾದ ಹಿಂಸಾತ್ಮಕ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 30 ಕ್ಕೆ ಏರಿದ್ದು, 2,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ.   ಶುಕ್ರವಾರ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದು, 377 ಮಂದಿ ಗಾಯಗೊಂಡಿದ್ದಾರೆ. ಹಿಂಸಾತ್ಮಕ ಘರ್ಷಣೆಗಳಲ್ಲಿ 72 ಭದ್ರತಾ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಇರಾಕ್ ಆಂತರಿಕ ಸಚಿವಾಲಯವನ್ನು ಉಲ್ಲೇಖಿಸಿ ಶುಕ್ರವಾರ ಮಾಧ್ಯಮಗಳು ವರದಿ ಮಾಡಿವೆ.   'ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಮೃತಪಟ್ಟ ಪ್ರತಿಭಟನಾಕಾರರ ಸಂಖ್ಯೆ 30ಕ್ಕೆ ಏರಿದೆ. ಇದರಲ್ಲಿ ಬಾಗ್ದಾದ್ನಲ್ಲಿ ಎಂಟು ಜನರು, ಮೇಸನ್ [ಪ್ರಾಂತ್ಯ] ದಲ್ಲಿ ಒಂಬತ್ತು , ಧಿ ಖಾರ್ [ಪ್ರಾಂತ್ಯ] ದಲ್ಲಿ ಒಂಬತ್ತು , ಬಸ್ರಾದಲ್ಲಿ ಮೂವರು ಹಾಗೂ ಅಲ್ ಮುತನ್ನಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ' ಎಂದು ಆಯೋಗ ಶುಕ್ರವಾರ ತಡವಾಗಿ ಫೇಸ್ಬುಕ್ನಲ್ಲಿ ಬರೆದಿದೆ.  ಅಶಾಂತಿಯಲ್ಲಿ ಗಾಯಗೊಂಡವರ ಸಂಖ್ಯೆ 2,312 ಕ್ಕೆ ಏರಿದ್ದು, ಇವರಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಅಧಿಕಾರಿಗಳು ಸೇರಿದ್ದಾರೆ.   ಬಾಗ್ದಾದ್ನಲ್ಲಿ 1,493 ಜನರು, ಧೀ ಕ್ವಾರ್ನಲ್ಲಿ 90, ವಾಸಿತ್ ಪ್ರಾಂತ್ಯದಲ್ಲಿ 10 , ಅಲ್ ಮುತನ್ನಾ ಪ್ರಾಂತ್ಯದಲ್ಲಿ 151 , ಬಸ್ರಾ ಪ್ರಾಂತ್ಯದಲ್ಲಿ 301 , ಅಲ್ ದಿವಾನಿಯಾ ಪ್ರಾಂತ್ಯದಲ್ಲಿ 112 ಮೆಸನ್ ಪ್ರಾಂತ್ಯದಲ್ಲಿ 105, ಕಾರ್ಬ್ಲಾ ಪ್ರಾಂತ್ಯದಲ್ಲಿ 50 ಜನರು ಗಾಯಗೊಂಡಿದ್ದಾರೆ.    ಇದಲ್ಲದೆ, ಅಲ್ ದಿವಾನಿಯಾ, ಮೇಸನ್, ವಾಸಿತ್, ಧಿ ವಾರ್, ಬಾಸ್ರಾ ಮತ್ತು ಬ್ಯಾಬಿಲೋನ್ ಪ್ರಾಂತ್ಯಗಳಲ್ಲಿ 50 ಸರ್ಕಾರಿ ಕಟ್ಟಡಗಳು ಮತ್ತು ಕಚೇರಿಗಳು ಹಾನಿಗೊಂಡಿವೆ.  ಪ್ರತಿಭಟನೆಗಳು ಅಕ್ಟೋಬರ್ 1 ರಂದು ಆರಂಭವಾಗಿದ್ದವು. ತಿಂಗಳ ಮಧ್ಯ ಭಾಗದಲ್ಲಿ ತೀರ್ಥಯಾತ್ರೆಗಾಗಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗಿತ್ತು. ಮೊದಲ ಪ್ರತಿಭಟನೆಯ ವೇಳೆ 149 ಜನರು ಸಾವನ್ನಪ್ಪಿದ್ದು, ಸುಮಾರು 3,500 ಜನರು ಗಾಯಗೊಂಡಿದ್ದರು.  ಆರ್ಥಿಕ ಸುಧಾರಣೆಗಳ ಜಾರಿ ಹಾಗೂ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನಾಕಾರರು ಪ್ರತಿಭಟಿಸಿ ಹಿಂಸಾಚಾರಕ್ಕಿಳಿದಿದ್ದಾರೆ.