ವಿಜಯಪುರ: ಬಸವ ತತ್ವಗಳು ಜಗತ್ತಿಗೆ ದಾರಿದೀಪ: ಡಾ.ರಂಜಾನ್

ಲೋಕದರ್ಶನ ವರದಿ

ವಿಜಯಪುರ 09: ಮಹಾ ಮಾನವತಾವಾದಿ ಬಸವಣ್ಣನವರ ಚಿಂತನೆಗಳ ಕುರಿತು ಇಂದು ವಿಶ್ವದಾದ್ಯಂತ ಚಚರ್ೆಗಳು ನಡೆಯುತ್ತಿದ್ದು ಸಮಕಾಲೀನ ಜಗತ್ತಿಗೆ ಬಸವ ತತ್ವಗಳು ದಾರಿದೀಪವಾಗಿವೆ ಎಂದು ಖ್ಯಾತ ಸಾಹಿತಿ ಮತ್ತು ಚಿಂತಕ ಡಾ.ರಂಜಾನ್  ದರ್ಗಾ  ಅಭಿಪ್ರಾಯಪಟ್ಟರು. 

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿಶ್ವಗುರು ಮಾನವತಾವಾದಿ ಬಸವ ಜಯಂತಿ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ "ಇಪ್ಪತ್ತೊಂದನೆಯ ಶತಮಾನಕ್ಕೆ ಬಸವತತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಬಸವಣ್ಣನವರು ಅರಿವೇ ಗುರು ಎಂದು ಜಗತ್ತಿಗೆ ಸಾರಿದವರು. ಜನರ ಬದುಕು ಮುಖ್ಯವೇ ಹೊರತು ನಿಯಮಗಳಲ್ಲ. ಆದ್ದರಿಂದಲೇ ಕಂದಾಚಾರ, ಮೂಡನಂಭಿಕ, ಡಂಭಾಚಾರದ ಕ್ರಿಯಾವಿಧಿಗಳನ್ನು ಬಸವಣ್ಣನವರು ನಿರಾಕರಿಸಿ ಸರಳ ಧರ್ಮವನ್ನು ಜನರಿಗೆ ನೀಡಿದರು. ಜಾತಿಯಿಂದ ಮೇಲು ಕೀಳು ಎಂಬುವುದನ್ನು ವಿಂಗಡಿಸಬೇಡಿ ಎಂದು ಬಸವಣ್ಣನವರು ಬೋಧಿಸಿದ್ದಾರೆ ಎಂದು ಅವರು ಹೇಳಿದರು.

ಕಾಯಕವೇ ಕೈಲಾಸ ಎಂಬುವುದು ಬಸವಣ್ಣನವರ ತತ್ವವಾಗಿದೆ. ದುಡಿದು ತಿನ್ನುವ ಪ್ರವೃತ್ತಿ ಇಂದು ಕಡಿಮೆಯಾಗಿದೆ. ಎಂದು ಅವರುವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕೆಲವು ಹಿತಾಸಕ್ತಿಗಳು ವೇದಗಳಂತಹ ಅಪರೂಪದ ಜ್ಞಾನ ಸಂಪತ್ತನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದುಕೊಂಡು, ಸಾಮಾನ್ಯರಿಗೆ ಆ ಜ್ಞಾನವನ್ನು ತಲುಪಿಸದ ಕಾರಣ ವಚನಗಳಂತಹ ಹೊಸ ಜ್ಞಾನ ಸಂಪತ್ತು ಉದಯಿಸಲು ಕಾರಣವಾಯಿತು ಎಂದು ಡಾ.ದರ್ಗಾ  ವಿಶ್ಲೇಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಪತಿ ಪ್ರೊ. ಸಬಿಹಾ ಮಾತನಾಡಿ, ಬಸವಣ್ಣನವರು ಪ್ರತಿಪಾದಿಸಿದ ಸಾಮಾಜಿಕ ಸಮಾನತೆ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಪ್ರತಿಯೊಬ್ಬರು ಬಸವಣ್ಣನವರು ಪ್ರತಿಪಾದಿಸಿದ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಸಮಾನತೆಯ ಕನಸು ನನಸು ಮಾಡಬೇಕಿದೆ ಎಂದರು. 

ಈ ಸಂದರ್ಭದಲ್ಲಿ ಮಹಿಳಾ ವಿವಿಯ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೆತರ ಸಿಬ್ಬಂದಿ ವರ್ಗದವರು, ಸಂಶೋಧನೆ ಮತ್ತು ಸ್ನಾತಕೋತ್ತರವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿನಿಯರು  ವಚನ ಗಾಯನ ಪ್ರಸ್ತುತಪಡಿಸಿದರು. ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಂ ನಾಗರಾಜ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಕ್ಷ್ಮೀ ಅಂಗಡಿ ವಂದಿಸಿದರು. ಜ್ಯೋತಿ ಮೇಟಿ ನಿರೂಪಿಸಿದರು.