ವೀರಯೋಧ ವಿಜಯಾನಂದ ಮನೆಗೆ ಬಿಎಸ್ಎಫ್ ಹಿರಿಯ ಅಧಿಕಾರಿಗಳ ಭೇಟಿ

ಛತ್ತೀಸಗಡ ಬಿಎಸ್ಎಫ್ 121 ಬೆಟಾಲಿಯನ್ ಕಚೇರಿ ಆವರಣದಲ್ಲಿ ಹುತಾತ್ಮ ಯೋಧರ ಪ್ರತಿಮೆ

ಕಾರವಾರ: ಕಳೆದ ಜುಲೈನಲ್ಲಿ ಛತ್ತೀಸಗಡ ಬಸ್ತರನಲ್ಲಿ ನೆಲೆ ಬಾಂಬ್ ಸ್ಫೋಟದಲ್ಲಿ ವೀರಮರಣ ಅಪ್ಪಿದ್ದ ಕಾರವಾರದ ಯೋಧ ವಿಜಯಾನಂದ ನಾಯ್ಕ ಅವರ ಮನೆಗೆ ಬಿಎಸ್ಎಫ್ನ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಬಿಎಸ್ಎಫ್ ಯೋಧರು ಸಂಗ್ರಹಿಸಿದ್ದ 2 ಲಕ್ಷ ರೂ.ಪರಿಹಾರದ ಚೆಕ್ ಹಾಗೂ ಗೃಹ ಸಚಿವ ರಾಜನಾಥ ಸಿಂಗ್ ನೀಡಿದ್ದ ಪ್ರಮಾಣಪತ್ರ, ಮೆಡಲ್ನ್ನು ವಿಜಯಾನಂದ ತಂದೆ ತಾಯಿಗೆ ಹಸ್ತಾಂತರಿಸಿದರು.

                ಸೋಮವಾರ ಕಾರವಾರದಲ್ಲಿನ ವಿಜಯಾನಂದ ಅವರ ಮನೆಗೆ ಆಗಮಿಸಿದ ಅವರು ಛತೀಸಗಡದಲ್ಲಿನ ಬಿಎಸ್ಎಫ್ 121 ಬೆಟಾಲಿಯನ್ ಕಚೇರಿ ಆವರಣದಲ್ಲಿ ಹುತಾತ್ಮರಾದ ವೀರಯೋಧ ವಿಜಯಾನಂದ ಸುರೇಶ್ ನಾಯ್ಕ ಹಾಗೂ ಖಾನಾಪುರದ ಸಂತೋಷ ಎಲ್.ಗುರವ ಅವರ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಲಾಗಿದೆ. ಪ್ರತಿಮೆಗಳ ಸ್ಥಾಪನೆಯ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ವಿಜಯಾನಂದ ತಂದೆ ಸುರೇಶ್ ವಿ.ನಾಯ್ಕ ಹಾಗೂ ತಾಯಿ ವಿದ್ಯಾ ಅವರನ್ನು ಆಹ್ವಾನಿಸಿದರು.

                ಇದೇ ತಿಂಗಳಾಂತ್ಯಕ್ಕೆ ವೀರಯೋಧರ ಪ್ರತಿಮೆ ಸ್ಥಾಪನೆಯ ಸಮಾರಂಭ ಛತ್ತೀಸಗಡದಲ್ಲಿ ಜರುಗಲಿದೆಬಿಎಸ್ಎಫ್ 121 ಬೆಟಾಲಿಯನ್ ಯೋಧರು ಸಂಗ್ರಹಿಸಿದ್ದ 2 ಲಕ್ಷ ರೂ.ಪರಿಹಾರದ ಚೆಕ್ನ್ನು ಸಹ ಇದೇ ವೇಳೆ ವಿಜಯಾನಂದ ಕುಟುಂಬಕ್ಕೆ ನೀಡಲಾಯಿತು.

                ಖಾನಾಪುರದ ಸಂತೋಷ ಎಲ್.ನಾಯ್ಕ ಅವರ ಕುಟುಂಬದವರನ್ನು ಸಹ ಆಹ್ವಾನಿಸಿ ಅವರಿಗೆ ಸಹ 2 ಲಕ್ಷ ರೂ. ಮೊತ್ತದ ಚೆಕ್ ನೀಡಿರುವುದಾಗಿ ಬಿಎಸ್ಎಫ್ ಹಿರಿಯ ಅಧಿಕಾರಿಗಳು ತಿಳಿಸಿದರು. ವಿಜಯಾನಂದ ನಾಯ್ಕ ಅವರ ಸಮವಸ್ತ್ರ ಹಾಗೂ ಮೆಡಲ್ಗಳನ್ನು ಅವರ ಕುಟುಂಬಕ್ಕೆ ನೀಡಲಾಗಿದೆ.

                ಅವರ ಕುಟುಂಬಕ್ಕೆ ದೊರೆಯಬೇಕಾದ ಪರಿಹಾರದ ನಿಧಿ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ಅವರು ವಿವರಿಸಿದರು.