ತ್ಯಾಜ್ಯ ವಿಲೇವಾರಿ ನಿರ್ಲಕ್ಷೆ, ಇಲ್ಲ ಆರೋಗ್ಯಕ್ಕೆ ಸುರಕ್ಷೆ

ಗುಳೇದಗುಡ್ಡ30: ನಗರ ನೈರ್ಮಲ್ಯಕ್ಕೆ ಪ್ರಶಸ್ತಿ ಪಡೆದರೂ ಪಟ್ಟಣದ ನೈರ್ಮಲ್ಯ ಮಾತ್ರ ಕನಸಿನ ಮಾತಾಗಿದೆ. ಪಟ್ಟಣದ  ಪ್ರಮುಖ ರಸ್ತೆಗಳು ಕಸದಿಂದ ಆವರಿಸಿ ರೋಗ ಹರಡುವ ಸ್ಥಳಗಳಾಗಿ ಪರಿಣಮಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುವಂತಾಗಿದೆ.

    ರೋಗ ಹರಡುವ ಸ್ಥಳಗಳು:  ಸೋಸಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಕಸದಿಂದ ಆವರಿಸಿದ ರಸ್ತೆಗಳ ಫೋಟೋಗಳನ್ನು  ಅಥವಾ  ಕಾಮೇಂಟ್ ಮಾಡಿದಾಗ ಮಾತ್ರ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಸ್ವಚ್ಚತೆಗೆ ಮುಂದಾಗುತ್ತಿದ್ದಾರೆ. ಇಲ್ಲದಿದ್ದರೆ ವಾರ ಕಳೆದರೂ ಆ ರಸ್ತೆ ಗಬ್ಬೆದ್ದು ನಾರುತ್ತದೆ. ಬಸವೇಶ್ವರ ನಗರದ ಸಾರ್ವಜನಿಕ ಸ್ಮಶಾನದ ಮುಂದಿನ ರಸ್ತೆ, ಚೌಬಝಾರದ ಹತ್ತಿರದ ಸಕರ್ಾರಿ ಶಾಲೆ ಹಿಂದುಗಡೆ ರಸ್ತೆ, ಪವಾರ ಕ್ರಾಸ್ ರಸ್ತೆ, ಬಾಗವಾನ ಪೇಟೆ ರಸ್ತೆ ಹೀಗೆ ಪಟ್ಟಣದ ಕೆಲ ಪ್ರಮುಖ ರಸ್ತೆಗಳು ಕಸದಿಂದ ಗಬ್ಬೆದ್ದು ನಾರುತ್ತಿವೆ. ಆದರೆ ಸ್ವಚ್ಚತೆ  ಮಾತ್ರ ಇಲ್ಲದಂತಾಗಿದೆ. ಸೊಳ್ಳೆಗಳು ಎಲ್ಲೆಂದರಲ್ಲಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಎಲ್ಲರನ್ನು ಕಾಡುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿತ್ತಾರೆ. 

    ಸಾರ್ವಜನಿಕರ ಆರೋಪ: ಪುರಸಭೆ ಮುಖ್ಯಾಧಿಕಾರಿ ಒಂದು ಬಾರಿಯೂ ಪಟ್ಟಣದಲ್ಲಿ ಬೆಳಗಿನ ಜಾವ ಸಂಚಾರ ಮಾಡಿಲ್ಲ. ಯಾವ ಯಾವ ರಸ್ತೆಗಳು ಗಬ್ಬೆದ್ದು ನಾರುತ್ತಿವೆ ಎಂದು ಕಣ್ಣಾರೆ ಕಂಡಿಲ್ಲ. ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಬಂದು ಸಾಯಂಕಾಲ ಮನೆಗೆ ಹೋಗುವ ಮುಖ್ಯಾಧಿಕಾರಿಗಳಿಂದ ಪಟ್ಟಣದ ನೈರ್ಮಲ್ಯ ಕನಸಿನ ಮಾತೆಂದು  ಸಾರ್ವಜನಿಕರು ಹೇಳುತ್ತಿದ್ದಾರೆ. ಕುಡಿಯುವ ನೀರು ಬಿಟ್ಟಾಗ ಪಟ್ಟಣದ ಪ್ರಮುಖ ರಸ್ತೆಗಳು ನೀರಿಂದ ಆವರಿಸಿದರೂ ಈ ನೀರು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಮಾಡಿ ಅಂಥವರಿಗೆ ದಂಡ ಹಾಕುತ್ತಿಲ್ಲ. ಭಯವಿಲ್ಲದೇ ಜನ ಪಟ್ಟಣದ ನೈರ್ಮಲ್ಯವನ್ನು ಹಾಳು ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನುತ್ತಿಲ್ಲ. ಅಧಿಕೃತವಾಗಿ ಪುರಸಭೆಗೆ ಆಡಳಿತ ಮಂಡಳಿ ಪ್ರವೇಶಿಸದ ಕಾರಣ ಪಟ್ಟಣದ ನೈರ್ಮಲ್ಯ ಹದಗೆಟ್ಟಿದೆ ಎಂದು ಇನ್ನೂ ಕೆಲವರು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

   ರಸ್ತೆಗಳು ಹದಗೆಟ್ಟಿವೆ: ಪಟ್ಟಣದಲ್ಲಿ ಪ್ರಮುಖ ರಸ್ತೆಗಳು ಹದಗೆಟ್ಟು ತಗ್ಗು ಬಿದ್ದವೆ. ಅಧಿಕಾರಿಗಳು ಅವುಗಳ ದುರಸ್ತಿಗೆ ಮುಂದಾಗುತ್ತಿಲ್ಲ. ಪಾದಚಾರಿಗಳು, ದ್ವಿಚಕ್ರ, ತ್ರಿಚಕ್ರ ಚಾಲಕರು ರಸ್ತೆಗಳ ಮೇಲೆ ಸಂಚಾರ ಮಾಡುವುದೆಂದರೆ ಹಿಡಿ ಶಾಪ ಹಾಕುವಂತಾಗಿದೆ. ನೀರು ನಿಂತ ರಸ್ತೆಗಳು ಹಾಳಾಗುವುದಷ್ಟೇ ಅಲ್ಲದೇ ಸೊಳ್ಳೆಗಳ ಉತ್ಪತ್ತಿ ಸ್ಥಳಗಳಾಗಿ ಪರಿಣಮಿಸುತ್ತಿವೆ. 

  ಸಾರ್ವಜನಿಕರ ಒತ್ತಾಯ: ಪಟ್ಟಣದಲ್ಲಿ ಕೆಲ ಪ್ರಮುಖ ರಸ್ತೆ ಪಕ್ಕದಲ್ಲಿ ನಿತ್ಯ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ.  ಸಾರ್ವಜನಿಕರು ನಿತ್ಯ ಗಬ್ಬು ವಾಸನೆಯಿಂದ ರೋಗ ಪೀಡಿತರಾಗುತ್ತಿದ್ದಾರೆ. ಇದರ ಪರಿಹಾರಕ್ಕೆ  ನಿತ್ಯ ಪುರಸಭೆ ಅಗತ್ಯ ಕ್ರಮಕ್ಕೆ ಮುಂದಾಗಬೇಕು. ರಸ್ತೆ ಮೇಲೆ ಸದಾ ನೀರು ಹರಿಯುವುದನ್ನು ನಿಯಂತ್ರಿಸಬೇಕು. ಪುರಸಭೆ ಮುಖ್ಯಾಧಿಕಾರಿಗಳು ನಿತ್ಯ ಪಟ್ಟಣ ವೀಕ್ಷಣೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.