ಲೋಕದರ್ಶನ ವರದಿ
ಯೋಗ ಶಿಕ್ಷಕ ಸಮಾಜ ರಕ್ಷಕ: ಯೋಗ ಗುರು ಭವರಲಾಲ್ ಆರ್ಯ
ಲೋಕದರ್ಶನ ವರದಿ
ಹುಬ್ಬಳ್ಳಿ 27: ಪ್ರತಿಯೊಬ್ಬರು ಪ್ರತಿದಿನ ಯೋಗ ಅಭ್ಯಾಸ ಮಾಡಬೇಕು. ಯೋಗ ಅಭ್ಯಾಸ ಮಾಡುವುದರಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು,ಮುಂದುವರೆದು ನಾವು ಯೋಗವನ್ನು ಆಳವಾಗಿ ಸೂಕ್ತ ಗುರುಗಳ ಮುಖಾಂತರ ಕಲಿತು ಯೋಗ ಶಿಕ್ಷಕರಾಗಿ ನಮ್ಮ ಸುತ್ತಮುತ್ತಲಿನವರಿಗೆ ಯೋಗ ತರಬೇತಿ ನೀಡಿದರೆ ಸ್ವಸ್ಥ ಸಮಾಜವನ್ನು ನಾವು ನಿರ್ಮಿಸಬಹುದು ಎಂದು ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಅವರು ಹೇಳಿದರು.
ಪತಂಜಲಿ ಯೋಗ ಸಮಿತಿ, ಖಾನಾಪುರ - ಬೆಳಗಾವಿ ವತಿಯಿಂದ ಇಂದು ಖಾನಾಪುರದ ಮಂಗೀರಿಶ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತಂಜಲಿ ಯೋಗ ಪೀಠ ಕರ್ನಾಟಕದ ರಾಜ್ಯ ಪ್ರಭಾರಿ, ಅಂತರರಾಷ್ಟ್ರೀಯ ಯೋಗ ಗುರುಗಳು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ 30 ದಿನಗಳ ಪತಂಜಲಿ ಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ
ಯೋಗ ಮಾರ್ಗದರ್ಶನ ಮತ್ತು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.
ಆರೋಗ್ಯವಂತರಾಗಿ ರೋಗ ಇಲ್ಲದೇ ನಿರೋಗಿಯಾಗಿರುವುದೇ ನಿಜವಾದ ರಾಷ್ಟ್ರ ಸೇವೆ ಎಂಬ ಮಾತನ್ನು ನಿರೂಪಿಸಬಹುದು. ಪ್ರತಿ ಕುಟುಂಬದಲ್ಲಿ ಒಬ್ಬರು ಯೋಗ ಶಿಕ್ಷಕರು ಇರಬೇಕು. ಆಗ ಸಂಪೂರ್ಣ ಕುಟುಂಬ, ಪ್ರತಿ ಮನೆಯೂ ಆರೋಗ್ಯಯುತವಾಗಿರುತ್ತದೆ. ಪ್ರತಿ ಮನೆಯ ಸದಸ್ಯರು ಆರೋಗ್ಯಯುತ ಜೀವನ ಶೈಲಿ ನಡೆಸಿದರೆ ಸಂಪೂರ್ಣ ಸಮಾಜವೇ ಆರೋಗ್ಯಮಯ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಈ ದಿಶೆಯಲ್ಲಿ ಪತಂಜಲಿ ಯೋಗ ಸಮಿತಿ, ಖಾನಾಪುರ - ಬೆಳಗಾವಿ ವತಿಯಿಂದ ಕಳೆದ ಒಂದು ತಿಂಗಳಿನಿಂದ ಶಿಬಿರಾರ್ಥಿಗಳಿಗೆ / ಸಾಧಕರಿಗೆ ಯೋಗ ಶಿಕ್ಷಕರ ತರಬೇತಿ ನೀಡಿ ಅವರನ್ನು ಪರಿಪೂರ್ಣ ಯೋಗ ಶಿಕ್ಷಕರನ್ನಾಗಿಸಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಈ ತರಬೇತಿ ಪಡೆದ ಶಿಬಿರಾರ್ಥಿಗಳು ಇಂದಿನಿಂದ ನೀವೆಲ್ಲ ಯೋಗ ಶಿಕ್ಷಕರಾಗಿದ್ದೀರಿ. ನೀವು ನಿಮ್ಮ ನಿಮ್ಮ ಮನೆಯ ಸುತ್ತಮುತ್ತ, ಅಕ್ಕಪಕ್ಕದ ಶಾಲೆ, ಕಾಲೇಜು, ಸಮುದಾಯ ಭವನ, ಪಾರ್ಕ, ದೇವಸ್ಥಾನ, ಆಸ್ಪತ್ರೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಯೋಗ ಕಲಿಸಿಕೊಡುವ ಮುಖಾಂತರ ಅವರ ಆರೋಗ್ಯವನ್ನು ಕಾಪಾಡಬಹುದು. ಯೋಗ ಕೇವಲ ಸಾಧು ಸನ್ಯಾಸಿಗಳು ಸ್ವಾಮೀಜಿಗಳು ಹಿಮಾಲಯದ ತಪಸ್ವಿಗಳು ಮಾತ್ರ ಆಚರಿಸಿ ಅಭ್ಯಾಸ ಮಾಡುವುದಲ್ಲ, ಯೋಗ ಯಾವುದೇ ಧರ್ಮ ಜಾತಿ ಮತ ಭೇದವಿಲ್ಲದೆ, ಬಡವ ಶ್ರೀಮಂತ ಎನ್ನದೆ ಎಲ್ಲರೂ ಆರೋಗ್ಯವನ್ನು ಬಯಸುವವರೆಲ್ಲರೂ ಯೋಗವನ್ನು ಅಭ್ಯಾಸ ಮಾಡಬಹುದು. ಆದ್ದರಿಂದ ಯೋಗಕ್ಕೆ ಯಾವುದೇ ಭೇದ ಭಾವವಿಲ್ಲ. ಸಮಾಜದ ಎಲ್ಲಾ ತರದ ವ್ಯಕ್ತಿಗಳಿಗೆ ನಾವು ಯೋಗವನ್ನು ಕಲಿಸಬಹುದು. ಆದ್ದರಿಂದ ಯೋಗ ಶಿಕ್ಷಕರಾದವರು ವೈಯಕ್ತಿಕವಾಗಿ ಸ್ವತಃ ತಾವು ಯೋಗಭ್ಯಾಸ ಮಾಡುವುದರ ಜೊತೆಗೆ ಇತರರಿಗೆ ಯೋಗ ಕಲಿಸಬೇಕೆಂದು, ಹೇಗೆ ಅಮೇರಿಕ (ಗಖಂ), ಬ್ರಿಟನ್ ಸ್ವದೇಶೀ ನೀತಿಯನ್ನು ಇತ್ತೀಚಿನ ದಿನಗಳಲ್ಲಿ ತಾಳುತ್ತಿದೆ. ಅದೇ ರೀತಿ ನಾವು ಭಾರತೀಯರು ನಮ್ಮ ದೇಶದಲ್ಲಿಯೇ ತಯಾರಾದ ವಸ್ತುಗಳನ್ನೂ ಪ್ರತಿದಿನ ಬಳಸೋಣ, ಆ ಮುಖಾಂತರ ಸ್ವಸ್ಥ ಸಮೃದ್ಧ ಸಧೃಡ ಭಾರತವನ್ನು ಕಟ್ಟೋಣ ಎಂದು ತಿಳಿಸಿದರು.
ಪತಂಜಲಿ ಯೋಗ ಸಮಿತಿ ಉತ್ತರ ಕರ್ನಾಟಕದ ರಾಜ್ಯ ಪ್ರಭಾರಿಗಳಾದ ಕಿರಣ್ ಮನ್ನೋಲ್ಕರ್ ಅವರು ಯೋಗ ಶಿಕ್ಷಕರಾಗಲು ಆಸಕ್ತಿಯೊಂದೇ ಅರ್ಹತೆ. ನಾವು ಕಲಿತ ಯೋಗವನ್ನು ಪ್ರಾಣಾಯಾಮವನ್ನು ಧ್ಯಾನದ ಅಭ್ಯಾಸವನ್ನು ಇತರರಿಗೆ ಕಲಿಸುತ್ತಾ ಹೋಗೋಣ. ನಾವು ಕಲಿಯುತ್ತಾ ಕಲಿಸುತ್ತಾ ನಾವು ಪರಿಪೂರ್ಣ ಯೋಗ ಶಿಕ್ಷಕರಾಗಬಹುದು. ಯೋಗಕ್ಕೆ ಯಾವುದೇ ಇತಿಮಿತಿ ಇಲ್ಲ, ಸಂಪೂರ್ಣ ಜೀವನವೇ ಯೋಗ ಕಲಿಕೆಗೆ ಇದೆ. ಆದ್ದರಿಂದ ನಾವು ನಾಳೆಯಿಂದಲೇ ನಮ್ಮ ಸುತ್ತಮುತ್ತಲಿನವರಿಗೆ, ಕುಟುಂಬದವರಿಗೆ, ಮಕ್ಕಳಿಗೆ ಯೋಗ ಕಲಿಸೋಣ. ನಾವು ಗುರುಗಳಿಂದ ಕಲಿತಿದ್ದನ್ನು ನಾಲ್ಕಾರು ಜನರಿಗೆ ಉಪಯೋಗವಾಗುವಂತೆ ಉಪಯೋಗಿಸೋಣ. ಯೋಗ ವಿದ್ಯೆಯನ್ನು ಮನೆ ಮನೆಗೆ ಮನ ಮನಕ್ಕೆ ತಲುಪಿಸೋಣ ಎಂದರು.
ಪತಂಜಲಿ ಯೋಗಪೀಠ ಕರ್ನಾಟಕದ ವತಿಯಿಂದ ನ್ಯಾಯವಾದಿ ಸುಭಾಷ್ ವಿಷ್ಣುಪಂತ್ ದೇಶಪಾಂಡೆ ಮತ್ತು ಗಾಂಧಾಲಿ ಸುಭಾಷ್ ದೇಶಪಾಂಡೆ (ದಂಪತಿಗಳಿಗೆ) ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
75 ಕ್ಕೂ ಹೆಚ್ಚು ಸಾಧಕರು ಒಂದು ತಿಂಗಳ ಕಾಲ ವಿಶೇಷ ಯೋಗ ಶಿಕ್ಷಕರ ತರಬೇತಿ ಪಡೆದು ಅವರು ತಮ್ಮ ಅನಿಸಿಕೆಗಳನ್ನು, ತಮಗಾದ ಆರೋಗ್ಯದ ಲಾಭಗಳನ್ನು, ಅನುಭವಗಳನ್ನು ಹಂಚಿಕೊಂಡರು. ತದನಂತರ ಅವರಿಗೆಲ್ಲ ಪತಂಜಲಿ ಯೋಗ ಪೀಠ, ಹರಿದ್ವಾರದ ಯೋಗ ಶಿಕ್ಷಕರ ತರಬೇತಿ ಶಿಬಿರದ ಪ್ರಮಾಣ ಪತ್ರವನ್ನು ಗಣ್ಯರೆಲ್ಲರೂ ವಿತರಿಸಿದರು.
ಪತಂಜಲಿ ಯೋಗ ಸಮಿತಿ ಬೆಳಗಾವಿಯ ಜಿಲ್ಲಾ ಪ್ರಭಾರಿಗಳಾದ ಮೋಹನ್ ಬಾಗೇವಾಡಿ, ಜಿಲ್ಲಾ ಸಮಿತಿ ಸದಸ್ಯರಾದ ಪುರುಷೋತ್ತಮ ಪಟೇಲ್, ಜ್ಯೋತಿಬಾ ಭದ್ವಾನಕರ್, ಶಂಕರ ಕುದ್ರಿ, ಅರವಿಂದ ಕುಲಕರ್ಣಿ, ನಿರ್ಮಲಾ ದೇಸಾಯಿ, ವಸಂತ ದೇಸಾಯಿ, ಉಮಾ ಘರ್ಶಿ, ಲಕ್ಷ್ಮಿ ಗುರವ್, ಸರಿತಾ ಪಾಟೀಲ್, ಅಂಜನಾ ಹಲಕರ್ಣಿ, ಆನಂದ್ ಅರಳಿಕಟ್ಟಿ, ಇಂಡಸ್ಟ್ರಿಯಲಿಸ್ಟ್ ವಿನಾಯಕ್ ವಾರ್ದೆ, ಕಾರ್ೊರೇಟರ್ ಅಪ್ಪಯ್ಯ ಕೊಡೊಲಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಜ್ಯೋತಿಬಾ ರೇಮಾನಿ, ಪೂಜಾ ವಾಗಲೆ, ರಮೇಶ್ ಮಹಡಿಕ್ ಮುಂತಾದವರು ಹಾಗೂ ಯೋಗ ಶಿಕ್ಷಕರು, ಸಾಧಕರು ಹೆಚ್ಚಿನ ಸಂಖ್ಯೆಯಲ್ಲಿ
ಉಪಸ್ಥಿತರಿದ್ದರು.