ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಅತ್ತತ್ತ ನಿಮ್ಮ ಚರಣ
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ
ಕೂಡಲ ಸಂಗಮದೇವಯ್ಯ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ
ಬಸವೇಶ್ವರರು ಹನ್ನೆರಡನೇ ಶತಮಾನದಲ್ಲಿ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಶಿವಕೇಂದ್ರಿಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ‘ಕೂಡಲಸಂಗಮದೇವ’ ಎಂಬ ಅಂಕಿತನಾಮದ ಮೂಲಕ ವಚನಗಳನ್ನು ರಚಿಸಿದ ಇವರು ಸಾಮಾಜಿಕ ಸಮಾನತೆಯನ್ನು ತರಲು ಪ್ರಯತ್ನಿಸಿದರು.
ದೇವರ ಇರುವಿಕೆಯನ್ನು ಅಲ್ಲಗಳೆಯುವುದು ಮೂರ್ಖತನವಾದೀತು. ದೇವರು ಸಕಲ ಚರಾಚರ ವಸ್ತುಗಳಲ್ಲಿ ಅಡಗಿದ್ದಾನೆ ಎನ್ನುವುದು ಬಲ್ಲವರ ಅನಿಸಿಕೆ. ದೇವರು ಎಂಬ ಅಸ್ತಿತ್ವದ ಇರುವಿಕೆ ಮಾನವನ ತಾಮಸಿ ಗುಣಗಳಿಗೆ ಕಡಿವಾಣ ಹಾಕಿರುವುದಂತೂ ಸತ್ಯದ ಸಂಗತಿ. ಜಗತ್ತಿನಲ್ಲಿ ದೇವರ ಇರುವಿಕೆಯನ್ನು ಒಪ್ಪುವ ಆಸ್ತಿಕ ಸಮೂಹ, ಇಲ್ಲವೇ ಇಲ್ಲ ಎಂದು ವಾದಿಸುವ ನಾಸ್ತಿಕ ಸಮೂಹ ಉಂಟು. ದೇವರು ಇರುವುದೇ ನಿಜವಾದರೆ ಅವನು ನಮ್ಮ ಕಣ್ಣೆದುರು ಏಕೆ ಬರುತ್ತಿಲ್ಲ ಎಂಬ ವಾದವನ್ನು ನಾಸ್ತಿಕರು ಆಸ್ತಿಕರ ಮುಂದಿಡುತ್ತಾರೆ. ನಿಜವಾದ ಭಕ್ತಿಯಿಂದಲ್ಲದೆ ಪರಮಾತ್ಮನನ್ನು ಒಲಿಸಿಕೊಳ್ಳುವ, ಕಾಣುವ ಬಗೆಯೆಂತು? ಎನ್ನುವುದು ಆಸ್ತಿಕರ ನಿಲುವಾಗಿದೆ. ಪುರಾಣಗಳಲ್ಲಿ ಕೇಳಿ ಬರುವಂತೆ ದೇವರು ನಾನಾ ರೂಪಗಳಲ್ಲಿ ಕಾಣಿಸಿಕೊಂಡು ಭಕ್ತನ ಸಂಕಷ್ಟಗಳನ್ನು ಪರಿಹರಿಸಿದ ಉದಾಹರಣೆಗಳು ಸಾಕಷ್ಟುಂಟು. ಆಗಿನ ಮಂದಿ ಅಷ್ಟು ಸಾತ್ವಿಕ ಪುರುಷರಾಗಿದ್ದರು. ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವಷ್ಟರ ಮಟ್ಟಿಗೆ ಅವರಲ್ಲಿ ಭಕ್ತಿಯ ಪರಾಕಾಷ್ಠತೆ ಇತ್ತು. ಇಂದು ದೇವರೆಲ್ಲಿದ್ದಾನೆ ತೋರಿಸು ಎನ್ನುವ ಜನಕ್ಕೆ ನಾವು ಅರ್ಥ ಮಾಡಿಸಬೇಕಾದುದಿಷ್ಟೇ; ನೀವು ಮಾಡುವ ಕರ್ತವ್ಯಗಳಲ್ಲಿ, ದೀನ-ದುರ್ಬಲರ ಸೇವೆಯಲ್ಲಿ, ಹೆತ್ತವಳ ಸಾವಿಲ್ಲದ ಪ್ರೀತಿಯೊಳಗೆ, ಪುಟ್ಟ ಕಂದನ ಕಪಟವಿಲ್ಲದ ನಗೆಯಲ್ಲಿ, ನೊಂದವರ ಕಣ್ಣೊರೆಸುವ ಕೈಗಳಲ್ಲಿ ದೇವರನ್ನು ಕಂಡುಕೊಳ್ಳಿ ಎಂದು.
ಕುರುಕ್ಷೇತ್ರ ಯುದ್ಧ ನಡೆದಂತಹ ಸಂದರ್ಭದಲ್ಲಿ ಹತಾಶನಾಗಿದ್ದ ಅರ್ಜುನನಿಗೆ ಶ್ರೀಕೃಷ್ಣ ತನ್ನ ವಿಶ್ವರೂಪವನ್ನು ತೋರಿಸಿದ್ದು ನಮಗೆಲ್ಲ ತಿಳಿದೇ ಇದೆ. ಭಗವಂತನ ಅಂತಹ ವಿಶ್ವರೂಪದ ಬಗ್ಗೆ ಬಸವಣ್ಣನವರು ತಮ್ಮ ವಚನದಲ್ಲಿ ಬಣ್ಣಿಸುತ್ತಾರೆ. ಇಡೀ ಭೂಮಂಡಲದ ಸೃಷ್ಟಿಕರ್ತ ದೇವರು. ಸಕಲ ಚರಾಚರ ವಸ್ತುಗಳಲ್ಲಿಯೂ ದೇವರ ಅಸ್ತಿತ್ವ ಇದೆ. ಇಡೀ ವಿಶ್ವವನ್ನೇ ವ್ಯಾಪಿಸಿದ ಪರಮಾತ್ಮನ ದೈವಿಸ್ವರೂಪವನ್ನು ಹೃದಯದಾಳದಿಂದ ಕಟ್ಟಿಕೊಡುವ ಪರಿ ಅನನ್ಯವೆನಿಸಿದೆ. ವಿಶಾಲವಾದ ಈ ಬ್ರಹ್ಮಾಂಡದಲ್ಲಿ ನಾವೆಷ್ಟು ಚಿಕ್ಕವರು ಎಂಬ ಅರಿವು ಇಟ್ಟುಕೊಂಡೇ ಭಗವಂತನ ವಿಶ್ವರೂಪದ ದರ್ಶನ ಮಾಡಿಸಲಾಗಿದೆ. ಮಾನವನ ಬುದ್ಧಿಮಟ್ಟಕ್ಕೆ ನಿಲುಕದಷ್ಟು ವಿಸ್ತಾರವಾಗಿರುವ ಬ್ರಹ್ಮಾಂಡವನ್ನೇ ವ್ಯಾಪಿಸಿರುವ ಆರಾಧ್ಯದೈವ ಕೂಡಲಸಂಗಮದೇವ ಬಸವಣ್ಣನವರ ಭಕ್ತಿಗೆ ಮೆಚ್ಚಿ ಅವರ ಕರಗಳಲ್ಲಿ ಇಷ್ಟಲಿಂಗವಾಗಿರುವ ಕುರಿತು ಮನೋಜ್ಞವಾಗಿ ಈ ವಚನದಲ್ಲಿ ಬಣ್ಣಿಸಲಾಗಿದೆ. ಅಗಮ್ಯ, ಅಗೋಚರ, ಅಪ್ರತಿಮನಾಗಿರುವ ಭಗವಂತನನ್ನು ಕೇವಲ ಭಕ್ತಿ ಎಂಬ ಪ್ರೀತಿಯ ಮೂಲಕವೇ ಸಾಕ್ಷಾತ್ಕಾರಗೊಳಿಸಿಕೊಳ್ಳಬಹುದು ಎಂಬುದಕ್ಕೆ ಈ ವಚನ ಸಾಕ್ಷಿಭೂತವಾಗುತ್ತದೆ.
ಭಕ್ತ ಪ್ರಹ್ಲಾದನ ರಕ್ಷಣೆಗೆ ಕಂಬದ ಮೂಲಕ ದರ್ಶನ ಕೊಟ್ಟ ಭಗವಂತ, ಭಕ್ತ ಕುಂಬಾರನ ಮನೆಯಲ್ಲಿ ಸೇವೆ ಮಾಡಿದ ಪರಮಾತ್ಮ, ಸಕ್ಕೂಬಾಯಿಯ ಮನೆಯಲ್ಲಿ ಕೆಲಸದವನಾಗಿ ದುಡಿದ ದೇವರು, ಮಹಾಸತಿ ಅನುಸೂಯಾಳ ಮಾತಿಗೆ ಕಟ್ಟುಬಿದ್ದು ಗಂಡನ ಜೀವ ಕರುಣಿಸಿದ ಸ್ವಾಮಿ ನಮ್ಮ-ನಿಮ್ಮೆಲ್ಲರಿಗೆ ಏಕೆ ಕಾಣಿಸಲಾರ ಎನ್ನುವ ಪ್ರಶ್ನೆಗೆ ನಮ್ಮಲ್ಲಿಯೇ ಉತ್ತರ ಕಂಡು ಹಿಡಿಯುವ ಪ್ರಯತ್ನ ಮಾಡಬೇಕಿದೆ. ಮೊಟ್ಟ ಮೊದಲನೆಯದು ನಮ್ಮಲ್ಲಿ ಡಾಂಭಿಕ ಭಕ್ತಿ ತುಂಬಿಕೊಂಡಿದೆ. ಏನೇ ಮಾಡುವುದಾದರೂ ನಾವು ಪ್ರತಿಫಲ ಇಲ್ಲದೆ ಮಾಡಲಾರೆವು. ಎರಡನೆಯದು ನಮ್ಮಲ್ಲಿ ಸಮರಾ್ಣ ಭಾವನೆ ಇಲ್ಲದಿರುವುದು. ಮೊದಲಿನವರೆಲ್ಲಾ ತನು-ಮನ-ಧನ ಎಲ್ಲವನ್ನೂ ಭಗವಂತನಿಗೆ ಅರ್ಿಸಿಕೊಳ್ಳುವುದರ ಮೂಲಕ ಅವನ ಪ್ರೀತಿಗೆ ಪಾತ್ರರಾದರು. ಅರಿಷಡ್ವರ್ಗಗಳು ನಮ್ಮ ಮನೆ-ಮನದಲ್ಲಿ ತುಂಬಿಕೊಂಡಿವೆ. ರಾಮನಾಥ ತನ್ನ ವಚನದಲ್ಲಿ “ಹೆಣ್ಣಿಗಾಗಿ ಸತ್ತವರು ಕೋಟಿ, ಹೊನ್ನಿಗಾಗಿ ಸತ್ತವರು ಕೋಟಿ, ಮಣ್ಣಿಗಾಗಿ ಸತ್ತವರು ಕೋಟಿ, ನಿಮಗಾಗಿ ಸತ್ತವರ ಒಬ್ಬರನು ಕಾಣೆ“ ಎಂದು ಹೇಳುವ ಹಾಗೆ ನಾವು ಪ್ರಾಪಂಚಿಕ ವಿಷಯಗಳ ಬೆನ್ನು ಹತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಜನಸಾಮಾನ್ಯನ ರೂಪದಲ್ಲಿ, ದೀನ-ದಲಿತರ ವೇಷದಲ್ಲಿ, ಸಂಕಷ್ಟದಲ್ಲಿ ಸಹಾಯ ಮಾಡುವ ಸ್ನೇಹಿತನ ರೂಪದಲಿ ಬರುವ ದೇವರು ಕಾಣುವುದೇ ಇಲ್ಲ.
ಬಸವಣ್ಣನವರ ಅಗಾಧರೂಪದ, ಎಲ್ಲ ಕಡೆಗಳಲ್ಲೂ ಅಡಗಿರುವ ವಿಶ್ವಾತ್ಮನನ್ನು ಇನ್ನಾದರೂ ನಮ್ಮ ಕೆಲಸದಲಿ, ನಿಸ್ಸಹಾಯಕರ ಸೇವೆಯಲಿ, ಅನಾಥರ ನೆರವಿನಲಿ ಕಾಣುವ ಪ್ರಯತ್ನವನ್ನು ಮಾಡೋಣ. ಮನದಲ್ಲಿ ಅಡಗಿರುವ ತಾಮಸಗುಣಗಳನ್ನು ದೂರ ತಳ್ಳೋಣ.
* * *