ಬಸವ ಜಯಂತಿ: ಕೇಂದ್ರ ಕಾರಾಗೃಹದಲ್ಲಿ ಮನಃ ಪರಿವರ್ತನಾ ಕಾರ್ಯಕ್ರಮ

Basava Jayanti: Mind conversion program at Central Jail

ಬಸವ ಜಯಂತಿ: ಕೇಂದ್ರ ಕಾರಾಗೃಹದಲ್ಲಿ ಮನಃ ಪರಿವರ್ತನಾ ಕಾರ್ಯಕ್ರಮ  

ಬೆಳಗಾವಿ 03: ಗತಿಸಿಹೋದ ಕಾಲದ ಬಗ್ಗೆ ತಾವು ಚಿಂತಿಸಬಾರದು. ಭಾವಿ ಜೀವನದ ಬಗ್ಗೆ ಉತ್ತಮ ರೂಪು-ರೇಷೆಗಳನ್ನು ಅಳವಡಿಸಿಕೊಳ್ಳಬೇಕು. ದ್ವೇಷ, ಅಸೂಯೆ, ಸಿಟ್ಟು ಇವುಗಳಿಂದ ದೂರವಿರಿ. ತಮ್ಮೆಲ್ಲಿ ಶಾಂತಿ, ತಾಳ್ಮೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಡಾ. ಮಹಾಂತಪ್ರಭು ಸ್ವಾಮಿಜೀಯವರು ಕರೆ ನೀಡಿದರು. ಬಸವಜಯಂತಿ ನಿಮಿತ್ಯ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಬೆಳಗಾವಿ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ದಿ. 30ರಂದು ಆಯೋಜಿಸಲಾಗಿದ್ದ ಮನಃಪರಿವರ್ತನಾ ಕಾರ್ಯಕ್ರಮ ಸಾನಿದ್ಯ ವಹಿಸಿ ಅವರು ಆಶೀರ್ವಚನ ನೀಡಿದರು.  ಕಾರಾಗೃಹ ವಾಸ ಟೆಸ್ಟ ಕ್ರಿಕೆಟ್ ಇದ್ದಂತೆ, ಟೆಸ್ಟ ಕ್ರಿಕೆಟದಲ್ಲಿ ಮೊದಲನೇ ಇನಿಂಗ್ಸನಲ್ಲಿ ಸರಿಯಾಗಿ ಆಡದೇ ಅಥವಾ ಸೊನ್ನೆಗೆ ಓಟ ಆದರೆ ಎರಡನೇ ಇನಿಂಗ್ಸನೇ ಚೆನ್ನಾಗಿ ಆಟವಾಡಲು ಅವಕಾಶವಿದೆ. ಹಾಗೇಯೇ ತಮ್ಮ ಕಾರಾಗೃಹ ವಾಸವನ್ನು ಮೊದನೆ ಇನಿಂಗ್ಸ ಅಂತಾ ತಿಳಿದುಕೊಳ್ಳಿ, ಇದರಲ್ಲಿ ತಾನು ತಿಳಿದೋ ಅಥವಾ ತಿಳಿಯದೇಯೋ ತಪ್ಪು ಮಾಡಿರಬಹುದು ಆದರೆ ತಮ್ಮ ಎರಡನೇ ಇನಿಂಗ್ಸ ಅಂದರೆ ಬಿಡುಗಡೆಯ ನಂತರ ಮಾಡಿದ ತಪ್ಪನ್ನು ಮತ್ತೇ ಮಾಡದೇ ಜೀವನವನ್ನು ಅತ್ಯುತ್ತಮ ರೀತಿಯಲ್ಲಿ ಬಾಳುವ ಅವಕಾಶವಿದೆ. ಕಾರಣ ತಾವೆಲ್ಲ ಧನಾತ್ಮಕ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇಲ್ಲಿಯೂ ಸಹ ತಾವು ಯೋಗ, ಧ್ಯಾನ, ಪ್ರಾರ್ಥನೆ, ಜೊತೆಗೆ ಉತ್ತಮ ಕಾರ್ಯಗಳನ್ನು ಮಾಡಿ, ಬಿಡುಗಡೆಯಾಗಿ ಸಮಾಜದ ಮುಖ್ಯ ವಾಹಿನಿಗೆ ಮರಳಿದ ನಂತರ ಸತ್ಪ್ರಜೆಗಳಾಗಿ ಬಾಳಬೇಕು ಎಂದು ಹೇಳಿದರು.  ಅಧ್ಯಕ್ಷತೆಯನ್ನು ವಹಿಸಿದ್ದ ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕ ವಿ. ಕೃಷ್ಣಮೂರ್ತಿ ಮಾತನಾಡಿ, ನಿವಾಸಿಗಳ ಮನಃಪರಿವರ್ತನೆಗಾಗಿ ಇಲಾಖೆಯು ಅನೇಕ ಕಾರ್ಯಕ್ರಮಗಳ ತರಬೇತಿ, ಯೋಗದಂತಹ ಹಾಗೂ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಆಯೋಜಿಸಲಾಗುತ್ತಿದ್ದು, ಅದರಲ್ಲಿ ಮನಃಪರಿವರ್ತನೆ ಕಾರ್ಯಕ್ರಮವೂ ಒಂದು ಇಂತಹ ಕಾರ್ಯಕ್ರಮಗಳಿಂದ ನಿವಾಸಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಸ್ವಾಮೀಜಿಯವರ ಪ್ರವಚನದಲ್ಲಿ ಅಂತಹ ಶಕ್ತಿ ಇರುತ್ತದೆ ಎಂದು ಹೇಳಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಸೋಮಲಿಂಗ ಮಾವಿನಕಟ್ಟಿ ಮಾತನಾಡಿ, ಕಳೆದ 15 ವರ್ಷಗಳಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿಯು ಮನಃಪರಿವರ್ತನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು, ಇಂತಹ ಪ್ರವಚನ ಕಾರ್ಯಕ್ರಮಗಳನ್ನು ನಮ್ಮ ವತಿಯಿಂದ ಆಯೋಜಿಸಲಾಗುವುದು ಎಂದು ಹೇಳಿದರು.  ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರತ್ನಪ್ರಭಾ ಬೆಲ್ಲದ, ಬಾಲಚಂದ್ರ ಬಾಗಿ ಹಾಗೂ ಕಾರ್ಯದರ್ಶಿ ಸೋಮಲಿಂಗ ಮಾವಿನಕಟ್ಟಿ ಆಗಮಿಸಿದ್ದರು. ಕಾರಾಗೃಹದಲ್ಲಿ ನಿವಾಸಿಗಳಿಗೆ ಹಣ್ಣು-ಹಂಪಲ ವಿತರಿಸಲಾಯಿತು. ವೇದಿಕೆಯಲ್ಲಿ ಬಸನಗೌಡ ಪಾಟೀಲ, ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು, ಜೈಲರ್‌ಗಳಾದ ರಾಜೇಶ ಧರ್ಮಟ್ಟಿ, ಬಸವರಾಜ ಭಜಂತ್ರಿ, ಆರ್‌.ಬಿ. ಕಾಂಬಳೆ ಉಪತ್ಥಿತರಿದ್ದರು. ಕಾರಾಗೃಹದ ಉಪಾಧ್ಯಾಯ ಶಶಿಕಾಂತ ಯಾದಗೂಡೆ ನಿರೂಪಿಸಿ ವಂದಿಸಿದರು.