ಶಿವಾನಂದ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

Blood donation camp at Sivananda College

ಶಿವಾನಂದ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ 

ಕಾಗವಾಡ, 07 : ಯುವ ಜನತೆಯಲ್ಲಿ ರಕ್ತದಾನದ ಪ್ರಜ್ಞೆ ಬೆಳೆಸುವುದು ಇಂದಿನ ದಿನಮಾನದಲ್ಲಿ ಅಗತ್ಯವಾಗಿದೆಯೆಂದು ಪ್ರಾಚಾರ್ಯ ಡಾ.ಎಸ್‌.ಎ. ಕರ್ಕಿ ಹೇಳಿದರು. 

ಅವರು, ಸೋಮವಾರ ದಿ. 07 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಎನ್‌ಎಸ್‌ಎಸ್, ಎನ್‌ಸಿಸಿ, ಯೂಥ ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ಮಿರಜನ ಶಾಶ್ವತ ರಕ್ತ ಭಂಡಾರ ಇವುಗಳ ಸಯೋಗದಲ್ಲಿ ಏರಿ​‍್ಡಸಿದ ರಕ್ತದಾನ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. 

ರಕ್ತ ಎಂದರೆ ಜೀವ. ರಕ್ತದಾನ ಮಾಡುವದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ. ಯುವ ಜನತೆಯಲ್ಲಿ ರಕ್ತದಾನದ ಮಹತ್ವವನ್ನು ತಿಳಿಸಿ, ಅವರಲ್ಲಿ ರಕ್ತದಾನದ ಪ್ರಜ್ಞೆಯನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಮಹಾವಿದ್ಯಾಲಯದ ವಿವಿಧ ಘಟಕಗಳು ಆಯೋಜಿಸಿದ ರಕ್ತದಾನ ಶಿಬಿರ ಯಶಸ್ವಿಯಾಗಲಿ ಎಂದು ಶುಭ ಕೋರಿದರು. 

ಮಹಾವಿದ್ಯಾಲಯದ ಕಾರ್ಯದರ್ಶಿ ಪ್ರೊ. ಬಿ.ಎ. ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿ, ರಕ್ತದಾನ ಎಂಬುದು ಪುಣ್ಯದ ಕೆಲಸ. ರಕ್ತದಾನ ಮಾಡುವದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನವಿದೆ. ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು. 

ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಎ.ಎಂ. ಜಕ್ಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಈ ವೇಳೆ ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಡಿ. ಧಾಮಣ್ಣವರ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು. ಯೂಥ ರೆಡ್ ಕ್ರಾಸ್‌ನ ಅಧಿಕಾರಿ ಡಾ. ಎ.ಟಿ. ಪಾಟೀಲ ಸ್ವಾಗತಿಸಿದರು. ಎನ್‌ಸಿಸಿ ಅಧಿಕಾರಿ ಪ್ರೊ. ಎ.ಆರ್‌. ಅಳಗೊಂಡಿ ನಿರೂಪಿಸಿದರು. ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಧಿಕಾರಿ ಪ್ರೊ. ಆರ್‌.ಎಸ್‌. ನಾಗರಡ್ಡಿ ವಂದಿಸಿದರು. ಶಿಬಿರದಲ್ಲಿ ಒಟ್ಟು 60 ಕ್ಕೂ ಹೆಚ್ಚು ಯೂನಿಟ್ ರಕ್ತನ್ನು ಸಂಗ್ರಹಿಸಲಾಯಿತು.