ಸ್ಮಶಾನ ಭೂಮಿ ವಿವಾದ: ಸಚಿವರಿಗೆ ಎಸ್‌ಸಿ ಸಮುದಾಯ ಮನವಿ
ಕಾಗವಾಡ 23: ತಾಲೂಕಿನ ಜುಗೂಳದಲ್ಲಿ ಎಸ್‌ಸಿ ಸ್ಮಶಾನ ಭೂಮಿ ಬಿಕ್ಕಟ್ಟಿನ ಕುರಿತು, ಗ್ರಾಮದ ಎಸ್‌ಸಿ ಸಮುದಾಯದವರು ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ, ಜಿ.ಪಂ. ಸಿಇಓ, ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದು, ಇಂದು ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ, ಸ್ಮಶಾನ ಭೂಮಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಗ್ರಾಮದಲ್ಲಿ ಎಸ್‌ಸಿ ಸಮುದಾಯದ ಸ್ಮಶಾನ ಭೂಮಿ ಕುರಿತು ವಿವಾದ ಉಂಟಾಗಿದ್ದು, ಕಳೆದ ಅನೇಕ ದಿನಗಳಿಂದ ಸಮುದಾಯದವರು ಸಾಕಷ್ಟು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಮುದಾಯ ಮುಖಂಡರು ನಿನ್ನೆ ದಿ. 22 ರಂದು ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಜಿಲ್ಲಾಧಿಕಾರಿಗಳಿಗೆ, ಜಿ.ಪಂ. ಸಿಇಓ ಅವರಿಗೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ, ತಮಗೆ ಸ್ಮಶಾನ ಭೂಮಿ ನೀಡುವಂತೆ ಆಗ್ರಹಿಸಿದ್ದರು. ಸಚಿವ ಸತೀಶ ಜಾರಕಿಹೊಳಿಯವರು ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿ, ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೇ ಅಧಿಕಾರಿಗಳು ಕೂಡಾ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದ್ದು, ಇಂದು ಬುಧವಾರ ದಿ. 23 ರಂದು ಅಥಣಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಯಾದವಾಡ ಮತ್ತು ಪ್ರಥಮ ದರ್ಜೆ ಸಹಾಯಕ ಚಂದ್ರಕಾಂತ ಕಾಂಬಳೆ ಸ್ಥಳಕ್ಕೆ ಭೇಟ್ಟಿ ನೀಡಿ, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಎಸ್‌ಸಿ ಸಮುದಾಯದ ಮುಖಂಡರು ಮಾತನಾಡಿ, ಜಗೂಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಾಪೂರ ಹದ್ದಿಯಲ್ಲಿನ ಸರ್ವೆ ನಂ. 1 ಸರ್ಕಾರಿ ಮಸನವಾಟಿ ಸ್ಥಳದಲ್ಲಿ ಅಕ್ರಮವಾಗಿ ತಂತಿ ಬೇಲಿ ಅಳವಡಿಸಿರುವುದನ್ನು ತೆಗೆದು ಹಾಕಿ, ಪರಿಶಿಷ್ಟ ಜಾತಿ ಜನರ ಸ್ಮಶಾನದ ವ್ಯಾಜ್ಯವನ್ನು ಬಗೆ ಹರಿಸಬೇಕು ಎಂದು ತಿಳಿಸಿದ್ದಾರೆ. ಅಲ್ಲದೇ ಇದಕ್ಕೆ ಅಥಣಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಮಶಾನಭೂಮಿಗಾಗಿ ನಿವೇಶನ ಕಲ್ಪಿಸುವುದಾಗಿ ಭರವಸೆಯನ್ನು ನೀಡಿದ್ದಾರೆಂದು ತಿಳಿಸಿದ್ದಾರೆ. ಜುಗೂಳ ಗ್ರಾಮದ ಎಸ್‌ಸಿ ಸಮುದಾಯದವರು ಉಪಸ್ಥಿತರಿದ್ದರು.