ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶಿಕ್ಷಣ ದಾಸೋಹ ಪೂರಕ : ಚಂದ್ರಕಾಂತ

Education Dasoha Supplement for Building a Healthy Society : Chandrakanta

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶಿಕ್ಷಣ ದಾಸೋಹ ಪೂರಕ : ಚಂದ್ರಕಾಂತ

ಹೂವಿನಹಡಗಲಿ: ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ದಾಸೋಹ ಪೂರಕವಾಗಿದ್ದು ಅಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮಠಮಾನ್ಯಗಳಿಗೆ, ಸಂಸ್ಥೆಗಳಿಗೆ ತಮ್ಮ ಕಂಪನಿಯು ಸದಾ ಬೆಂಬಲ ನೀಡುತ್ತದೆ ಎಂದು  ಕುಮಾರಸ್ವಾಮಿ ಮಿನರಲ್ಸ್‌ ಎಕ್ಸ್‌ ಪೋರ್ಟ್‌ ಪ್ರೈ.ಲಿ.ನ  ಜನರಲ್ ಮ್ಯಾನೇಜರ್ ಚಂದ್ರಕಾಂತ ಎಸ್‌. ಪಾಟೀಲ್ ತಿಳಿಸಿದರು.  

ಪಟ್ಟಣದ ಗವಿಸಿದ್ಧೇಶ್ವರ ಶಾಖಾ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ, ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಘಟಕದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಮ್ಮ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಹಲವು ಜನೋಪಯೋಗಿ ಕಾರ್ಯಗಳನ್ನು ಕೈಗೊಂಡಿದ್ದು,ಸ್ವಗ್ರಾಮದ ಅಭಿಮಾನದಿಂದ ಸ್ಥಳೀಯ ಗವಿಸಿದ್ದೇಶ್ವರ ಮಠ, ಮಲ್ಲನಕೇರಿ ಮಠ, ಹಾಗೂ ಶ್ರೀಕೋಟೆ ವೀರಭದ್ರೇಶ್ವರ ದೇವಸ್ಥಾನಕ್ಕೆ ತಲಾ ಐದು ಲಕ್ಷ ರೂಗಳ ನೆರವು ನೀಡಿರುವುದಾಗಿ ತಿಳಿಸಿದರು.  

ಬಳ್ಳಾರಿ ಜಿಲ್ಲೆಯಲ್ಲಿ ತಮ್ಮ ಸಹೋದರ ಸಂಸ್ಥೆಗಳೊಂದಿಗೆ ಬಿಸಿಯೂಟ ಸಿದ್ಧಪಡಿಸಿ ವಿತರಿಸುವ ಯೋಜನೆಯ ಸಿದ್ಧತೆಯಲ್ಲಿದ್ದು ಅದನ್ನು ವಿಜಯನಗರ ಜಿಲ್ಲೆಗೂ ವಿಸ್ತರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸನ್ಮಾನ್ಯ ಶಾಸಕರಾದ ಕೃಷ್ಣನಾಯಕರವರು ಭಾರತೀಯ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ರಾಷ್ಟ್ರಭಕ್ತಿ ,ಸಂಸ್ಕೃತಿ ಉದ್ಧಿಪನಗೊಳಿಸುವ ಉತ್ಸವ ಯಶಸ್ವಿಯಾಗಲೆಂದು ಶುಭ ಕೋರಿದರು.  

ಪ್ರಚಾರಕ ದಾಮೋದರ್ ಜಿ ಉತ್ಸವದ ಉದ್ದೇಶಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶರಣಮ್ಮ ಕಳಕಪ್ಪ ಸಂತರ ವಿಚಾರಧಾರೆ ಕುರಿತು ಮಾತನಾಡಿದರು. ಪ್ರಗತಿ ಗ್ರಾಮೀಣ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ಬಸವನಗೌಡ ಮಾಲಿ ಪಾಟೀಲ್ ’ಶರಣ ಸಂಸ್ಕೃತಿ ಮತ್ತು ಪ್ರಸ್ತುತ ಸಮಾಜ’ ವಿಷಯ ಕುರಿತು ದತ್ತಿ ಉಪನ್ಯಾಸ ನೀಡಿದರು. ವೀರಣ್ಣ ಅಣ್ಣಿಗೇರಿ,ಕಳಕಪ್ಪ ಅಂಗಡಿ, ಆರಿ​‍್ಪ. ರಾಜೂರ, ಕನ್ನಿಹಳ್ಳಿ ಪರಮೇಶ್ವರ​‍್ಪ, ಕುಕನೂರಿನ ಭಕ್ತರು ಉಪಸ್ಥಿತರಿದ್ದರು.ಕಸಾಪ ಅಧ್ಯಕ್ಷ ವೀರೇಂದ್ರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.  ಡಾ.ಹಿರಿಶಾಂತವೀರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ನೆರವು ನೀಡಿದ ಭಕ್ತರಿಗೆ, ಅತಿಥಿಗಳಿಗೆ ಗುರು ರಕ್ಷೆ ನೀಡಲಾಯಿತು. ಪ್ರಾರಂಭದಲ್ಲಿ ಕುಮಾರಿ ಲಕ್ಷ್ಮಿ ಸಂಗಡಿಗರು ಪ್ರಾರ್ಥಿಸಿದರು. ಹೆಚ್‌.ಬಿ. ರಾಜೇಶ್ ಸ್ವಾಗತಿಸಿದರು. ಉಪನ್ಯಾಸಕ ಚನ್ನಬಸಯ್ಯ ಕಾರ್ಯಕ್ರಮ ನಿರ್ವಹಿಸಿದರು.