14.25 ಕೋಟಿ ರೂ. ವೆಚ್ಚದ ನಾಲ್ಕು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಚಿಕ್ಕೋಡಿ 09: ಚಿಕ್ಕೋಡಿ-ಸದಲಗಾ ಕ್ಷೇತ್ರದ ಸದಲಗಾ ಪಟ್ಟಣದಲ್ಲಿ ಸುಮಾರು 60 ಕೋಟಿ ರೂ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಮತ್ತು ಶಾಸಕ ಗಣೇಶ ಹುಕ್ಕೇರಿ ನಿರಂತರ ಪ್ರಯತ್ನ ಮಾಡುತ್ತೇವೆ. ಜನತೆಯ ಆಶೀರ್ವಾದ ಸದಾ ಇರುವಾಗ ಅಭಿವೃದ್ಧಿಯ ಕೆಲಸ ನಿರಂತರವಾಗಿ ನಡೆಯುತ್ತವೆ ಎಂದು ದೆಹಲಿ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.
ತಾಲೂಕಿನ ಸದಲಗಾ ಪಟ್ಟಣದಲ್ಲಿ ಸುಮಾರು 14.25 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು. ಸದಲಗಾ ಪಟ್ಟಣದ ಬಸ್ ನಿಲ್ದಾಣದಿಂದ ಬೈನಾಕವಾಡಿ ಗ್ರಾಮದವರಿಗೆ ರಸ್ತೆ ಸುಧಾರಣೆಗೆ 6 ಕೋಟಿ ರೂ, ಸದಲಗಾ ಪಟ್ಟನದ ರತ್ನಪ್ಪಣ್ಣಾ ಕುಂಬಾರ ಸರ್ಕಲದಿಂದ ಬೋರಗಾಂವವರೆಗೆ ರಸ್ತೆ ಸುಧಾರಣೆಗೆ 5.25 ಕೋಟಿ ರೂ, ಸದಲಗಾ ಪೊಲೀಸ್ ಠಾಣೆಯಿಂದ ಮುತ್ತಲಕೋಡಿ ಬೀರ್ಪನ ಕಮಾನವರೆಗೆ ರಸ್ತೆ ಸುಧಾರಣೆಗೆ 2 ಕೋಟಿ ರೂ, ಜನವಾಡ ಗ್ರಾಮದ ಪ.ಜಾ.ಕಾಲೋನಿಯಿಂದ ಧರ್ಮರ ಮಠದ ಮುಖಾಂತರ ಬೋರಗಾಂವ ರಸ್ತೆಗೆ ಕೂಡುವ ರಸ್ತೆಗೆ 1 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದರು.
ಸದಲಗಾ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಗೆ ನಾಂದಿಯಾಗಲಿದೆ. ಉತ್ತಮ ರಸ್ತೆ ಸಂಪರ್ಕದಿಂದ ಸ್ಥಳೀಯರ ಸಂಚಾರ ಸುಲಭವಾಗಲಿದೆ. ವ್ಯಾಪಾರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೂ ಮತ್ತಷ್ಟು ಬಲ ನೀಡಲಿದ್ದು, ಸದಲಗಾ ಪಟ್ಟಣದ ಸಮಗ್ರ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.
ಸದಲಗಾ ಮತ್ತು ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಕಲ್ಲೋಳ-ಯಡೂರ ಬ್ಯಾರೇಜ ಕಾಮಗಾರಿ ಶೀಘ್ರದಲ್ಲಿ ಮುಕ್ತಾಯ ಆಗಲಿದೆ. ಇದರಿಂದ ನೀರಿನ ಅನುಕೂಲವಾಗಲಿದೆ. ಚೆಂದೂರ-ಟಾಕಳಿ ಸೇತುವೆ ಕಾಮಗಾರಿಯನ್ನು ಮೇ ಅಂತ್ಯದಲ್ಲಿ ಮುಕ್ತಾಯ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಗುತ್ತದೆ ಎಂದರು.
ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ 156 ಕೋಟಿ ರೂ ವೆಚ್ಚದಲ್ಲಿ 205 ಗುಂಪು ಏತ ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಕ್ಷೇತ್ರದ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ರಾಜ್ಯ ಸರ್ಕಾರ 211 ಕೋಟಿ ರೂ ಮೀಸಲಿಟ್ಟಿದೆ. ಹಂತ ಹಂತವಾಗಿ ಕಾಲುವೆಗೆ ನೀರು ಬಿಡಿಸಿ ರೈತರ ಹಿತ ಕಾಪಾಡಲಾಗಿದೆ ಎಂದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಸಹಿಸದ ವಿರೋಧಿಗಳ ಟೀಕೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ, ಅಭಿವೃದ್ಧಿ ಮೂಲಕವೇ ಅವರಿಗೆ ತಕ್ಕ ಉತ್ತರ ಕೊಡುತ್ತಿದ್ದೇನೆ. ಕಾಂಗ್ರೆಸ್ ಸರ್ಕಾರ ಜನರ ಜೊತೆ ಇದೆ. ಕ್ಷೇತ್ರದ ಅಭಿವೃದ್ಧಿಗೆ ಕೇಳಿದಷ್ಟು ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಡುತ್ತಿದ್ದಾರೆ ಎಂದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಕಳೆದ 45 ವರ್ಷಗಳಿಂದ ಹುಕ್ಕೇರಿ ಕುಟುಂಬ ಜನರ ಜೊತೆ ಇದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಬಡವರಿಗೆ ಅನುಕೂಲವಾಗಿವೆ. ಸದಲಗಾ ಪಟ್ಟಣ ಸಮಗ್ರ ಅಭಿವೃದ್ಧಿ ಮಾಡುವ ಸಂಕಲ್ಪ ನಮ್ಮದಾಗಿದೆ. ಮುಂಬರುವ ದಿನಗಳಲ್ಲಿ ಸದಲಗಾ ತಾಲೂಕಾ ಕೇಂದ್ರವಾಗಲಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ ಕ್ಷೇತ್ರದ ಜನರಿಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳಿಗೆ ಬೇಕಾದಷ್ಟು ಅನುದಾನ ಶಾಸಕರು ತರುತ್ತಿದ್ದಾರೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ರೈತರು ಭೂಮಿಯಲ್ಲಿ ಶ್ರೇದ್ಧೆಯಿಂದ ದುಡಿದರೆ ಲಾಭವಾಗುತ್ತದೆ ಎಂದರು.
ವೇದಿಕೆ ಮೇಲೆ ಸದಲಗಾ ಪುರಸಭೆ ಅಧ್ಯಕ್ಷ ಬಸವರಾಜ ಗುಂಡಕಲ್ಲೆ, ಸದಸ್ಯರಾದ ಸಂತೋಷ ನವಲೆ, ಮುಖಂಡರಾದ ಅರುಣ ದೇಸಾಯಿ, ಬಾಬಣ್ಣ ಖೋತ, ರಾಜು ಡಂಗಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತ ಗೀರೀಶ ದೇಸಾಯಿ ಸೇರಿದಂತೆ ಮುಂತಾದವರು ಇದ್ದರು.