ವಿವಿಧ ಯೋಜನೆಗಳಲ್ಲಿ ವಿಕಲಚೇತನರಿಗೆ ಆದ್ಯತೆ ನೀಡಿ -ಆಯುಕ್ತರಾದ ದಾಸ್ ಸೂರ್ಯವಂಶಿ
ಹಾವೇರಿ 19: ಸರ್ಕಾರದ ಯೋಜನೆಗಳಲ್ಲಿ ವಿಕಲಚೇತನರಿಗೆ ಶೇ.5ರಷ್ಟು ಮೀಸಲಾತಿ ನೀಡಲಾಗಿದೆ. ವಿವಿಧ ಯೋಜನೆಗಳ ಆಯ್ಕೆಯಲ್ಲಿ ವಿಕಲಚೇತನರಿಗೆ ಆದ್ಯತೆ ನೀಡಬೇಕು. ವಿಕಲಚೇತನರ ಅಭಿವೃದ್ಧಿಗೆ ಮೀಸಲಾದ ಅನುದಾನ ಸದ್ಬಳಕೆಯಾಗಬೇಕು ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತರಾದ ದಾಸ್ ಸೂರ್ಯವಂಶಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಕಲಚೇತನರ ಅಭಿವೃದ್ಧಿ ಕಾರ್ಯಕ್ರಮದಡಿ ಶೇ.5ರಷ್ಟು ಮೀಸಲಿರುವ ಅನುದಾನದ ಪ್ರಗತಿ ಪರೀಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಕಚೇತನರಿಗೆ ಮೀಸಲಿಸುವ ಅನುದಾನವನ್ನು ಕಾಲಮಿತಿಯೊಳಗೆ ವೆಚ್ಚಮಾಡಬೇಕು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ದೇಶದಲ್ಲಿ ಅಂದಾಜು 23 ಕೋಟಿ ಹಾಗೂ ರಾಜ್ಯದಲ್ಲಿ ಒಂದು ಕೋಟಿ ವಿಕಲಚೇತನರಿದ್ದಾರೆ. 21 ಬಗೆಯ ವಿಕಲತೆಯನ್ನು ಗುರುತಿಸಲಾಗಿದೆ. ವಿಕಲಚೇತನರಿಗೆ ಶಿಕ್ಷಣ, ಉದ್ಯೋಗ ಹಾಗೂ ಸ್ವಯಂ ಉದ್ಯೋಗಕ್ಕೆ ಸಾಲ ಹಾಗೂ ಸಹಾಯಧನ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಕಚೇರಿಗೆ ವಿಕಲಚೇತನರು ಬಂದಾಗ ಅವರ ಸಮಸ್ಯೆಗಳನ್ನು ಸೌಜನ್ಯದಿಂದ ಆಲಿಸುವ ಮೂಲಕ ಅವರ ಸಮಸ್ಯೆ ಬಗೆಹರಿಸುವ ಕೆಲಸಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸೈನ್‌ಲಾಂಗವೇಜ್ ಹಾಗೂ ಬ್ರೈಲ್‌ಲಿಪಿ ಪರಿಣಿತರಿಂದ ಶಿಕ್ಷಣ ನೀಡಿ: ವಿಕಲಚೇತನರಿಗೆ ಸಾಧನ-ಸಲಕರಣೆ ನೀಡುವ ಜೊತೆಗೆ ಅವರ ಶಿಕ್ಷಣಕ್ಕೆ ಒತ್ತು ನೀಡಬೇಕು. ಸರ್ವ ಶಿಕ್ಷಣ ಅಭಿಯಾನದಡಿ ಶಾಲೆಗಳಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು. ಶ್ರವಣದೋಷ ಮಕ್ಕಳಿಗೆ ಸೈನ್ ಲಾಂಗವೇಜ್ ಹಾಗೂ ಅಂಧ ಮಕ್ಕಳಿಗೆ ಬ್ರೈಲ್ ಲಿಪಿ ಪರಿಣಿತರಿಂದ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ವಿಕಲಚೇತನರು ವಿವಿಧ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಕಲಚೇತನರ ಸ್ನೇಹಿಯಾಗಿರಲಿ: ಸರ್ಕಾರಿ ಕಚೇರಿಗಳು, ಪ್ರವಾಸಿ ತಾಣಗಳು, ಬಸ್ ನಿಲ್ದಾಣ, ಶಾಲಾ-ಕಾಲೇಜುಗಳು ವಿಕಚೇತನ ಸ್ನೇಹಿಯಾಗಿರಬೇಕು. ರಾ್ಯಂಪ್, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಹೊಂದಿರಬೇಕು. ಶ್ರವಣದೋಷ ಅಥವಾ ಅಂಧ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ಕೊಡಲು ಬಂದರೆ ಅಲ್ಲಿ ಬ್ರೈಲ್‌ಲಿಪಿ ಹಾಗೂ ಸೈನ್ ಲಾಂಗವೆಜ್ ಪರಿಣಿತರು ಇರಬೇಕು. ಇಲ್ಲವಾದರೆ ಶ್ರವಣದೋಷ ವ್ಯಕ್ತಿ ಹಾಗೂ ಅಂಧ ವ್ಯಕ್ತಿ ಹೇಗೆ ದೂರು ನೀಡಲು ಸಾಧ್ಯ. ಹಾಗಾಗಿ ಪೊಲೀಸ್ ಠಾಣೆಗಳಲ್ಲಿ ಬ್ರೈಲ್‌ಲಿಪಿ ಹಾಗೂ ಸೈನ್ ಲಾಂಗವೆಜ್ ಪರಿಣಿತರು ಇರುವಂತೆ ನೋಡಿಕೊಳ್ಳಬೇಕು ಎಂದರು.
ಪ್ರಾಥಮಿಕ ಹಂತದಲ್ಲೆ ಪತ್ತೆ ಹಚ್ಚಿ: ರಾಷ್ಟ್ರೀಯ ಬಾಲ್ಯ ವಾಸ್ಥ್ಯ ಕಾರ್ಯಕ್ರಮದಡಿ ಎಲ್ಲ ಮಕ್ಕಳ ಸ್ಕ್ರೀನಿಂಗ್ ಮಾಡಬೇಕು, ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿರುವ ವಿಕಲತೆಯನ್ನು ಕಂಡುಹಿಡಿದು ಅಗತ್ಯವಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ನೀಡುವ ಮಾದರಿ ಜಿಲ್ಲೆಯಾಗಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಸತಿ ಶಾಲೆ-ವಿದ್ಯಾರ್ಥಿ ನಿಲಯಗಳಲ್ಲಿ ನೇರ ಪ್ರವೇಶ: ವಿವಿಧ ವಸತಿ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ ಇಲ್ಲದೆ ಶೇ.10 ರಷ್ಟು ವಿಕಲಚೇತನ ಮಕ್ಕಳಿಗೆ ನೇರ ಪ್ರವೇಶಕ್ಕೆ ಅವಕಾಶವಿದೆ. ಅದೇ ರೀತಿ ವಿದ್ಯಾರ್ಥಿಗಳಲ್ಲಿ ಸಹ ಪ್ರವೇಶ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಪ್ಪದೇ ವರದಿ ನೀಡಿ: ವಿಕಲಚೇತನರ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ನಿಗದಿ ನಮೂನೆಯಲ್ಲಿ ತಪ್ಪದೇ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಎರಡು ತಿಂಗಳಿಗೊಮ್ಮೆ ಸಭೆ: ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಪ್ಪದೇ ವಿಕಲಚೇತನರ ಕುಂದುಕೊರತೆ ಸಭೆ ನಡೆಸಬೇಕು. ಅಧಿಕಾರಿಗಳ ಹಂತದಲ್ಲಿ ಬಗೆಹರಿಯುವ ಸಮಸ್ಯೆಗಳನ್ನು ಅಲ್ಲಿಯೇ ಇತ್ಯರ್ಥಪಡಿಸಬೇಕು. ಸರ್ಕಾರದ ಹಂತದ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ವಸತಿ ಯೋಜನೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಆಹಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಶೇ.5 ರಷ್ಟು ವಿಕಲಚೇತನರಿಗೆ ಆದ್ಯತೆ ನೀಡಬೇಕು. ಯೋಜನೆಗಳಲ್ಲಿ ವಿಕಲಚೇತನರಿಗೆ ಇರುವ ಮೀಸಲಾತಿ ಕುರಿತು ಪ್ರಚಾರಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಅವರು ಮಾತನಾಡಿ, ಈಗಾಗಲೇ ಲಿಂಗತ್ವ ಅಲ್ಪಸಂಖ್ಯಾತರಿಗೆ ತರಬೇತಿ ನೀಡಿ, ಅಕ್ಕ ಕೆಫೆ ಆರಂಭಿಸಲಾಗಿದೆ. ಅದೇ ರೀತಿ ವಿಕಲಚೇತನರು ಮುಂದೆ ಬಂದರೆ ಅವರಿಗೆ ತರಬೇತಿ ನೀಡಿ, ಕೆಫೆ ಆರಂಭಿಸಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಆಶು ನದಾಫ್ ಮಾತನಾಡಿ, ಜಿಲ್ಲೆಯಲ್ಲಿ 24,898 ಪುರುಷ, 13,293 ಮಹಿಳೆಯರು ಹಾಗೂ ಆರು ಜನರು ತೃತೀಯ ಲಿಂಗಿಗಳು ಸೇರಿ 38,197 ವಿಕಲಚೇತನರಿದ್ದಾರೆ. ಎಲ್ಲರಿಗೂ ಯುಡಿಐಡಿ ಕಾರ್ಡ್ ವಿತರಣೆ ಮಾಡಲಾಗಿದೆ. ಸೊನ್ನೆಯಿಂದ 6 ವರ್ಷದೊಳಗಿನ 260 ಗಂಡು ಹಾಗೂ 163 ಹೆಣ್ಣು ಮಕ್ಕಳು, ಏಳರಿಂದ 18 ವರ್ಷದೊಳಗಿನ 3,633 ಗಂಡು ಹಾಗೂ 2339 ಹೆಣ್ಣು ಮಕ್ಕಳು, 19 ರಿಂದ 60 ವರ್ಷದೊಳಗಿನ 17,245 ಪುರುಷ ಹಾಗೂ 9,622 ಮಹಿಳೆಯರು ಮತ್ತು ಐದು ಜನ ತೃತೀಯ ಲಿಂಗಿಗಳು, 60 ವರ್ಷ ಮೇಲ್ಪಟ್ಟ 3,759 ಪುರುಷ ಹಾಗೂ 1165 ಮಹಿಳೆಯರು ಹಾಗೂ ಓರ್ವ ತೃತೀಯ ಲಿಂಗಿ ಇರುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರು.
6,450 ವಿಕಲಚೇತನರಿಗೆ ಸಾಧನ ಸಲಕರಣೆ, 17 ವಿಕಲಚೇತನರಿಗೆ ಬ್ಯಾಟರಿ ಚಾಲಿತ ವಿಲ್‌ಚೇರ್, ದೃಷ್ಟಿದೋಷವುಳ್ಳ 70 ಜನರಿಗೆ ಬ್ರೈಲ್ ಕಿಟ್, 1400 ಜನ ದೈಹಿಕ ಅಂಗವಿಕಲರಿಗೆ ಮೋಟಾರೀಕೃತ ದ್ವಿಚಕ್ರವಾಹನ, ಶ್ರವಣದೋಷವುಳ್ಳ 62 ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕೆ ಹೊಲಿಗೆ ಯಂತ್ರ, ಎಸ್.ಎಸ್.ಎಲ್.ಸಿ. ಮತ್ತು ಅದಕ್ಕಿಂತ ಹೆಚ್ಚಿನ ವ್ಯಾಸಂಗ ಮಾಡುತ್ತಿರುವ 117 ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಮಾತನಾಡುವ ಲ್ಯಾಪಟಾಪ್ ವಿತರಣೆ ಮಾಡಲಾಗಿದೆ. ಏಳು ಜನ ವಿವಿಧ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು, 14 ಜನ ನಗರ ಪುನರ್ವಸತಿ ಕಾರ್ಯಕರ್ತರು ಹಾಗೂ 223 ಗ್ರಾಮೀಣ ಪುನರ್ವಸತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಉಪ ವಿಭಾಗಾಧಿಕಾರಿ ಚೆನ್ನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಉಪಸ್ಥಿತರಿದ್ದರು.