ಮಹಿಳೆಯರು ಸಶಕ್ತರಾದಲ್ಲಿ ಸಮಾಜ, ದೇಶದ ಉನ್ನತಿ ಸಾಧ್ಯ: ಡಾ. ಧಾರವಾಡ
ಬೆಳಗಾವಿ 08: ಮಹಿಳೆಯರು ಎಲ್ಲ ವಿಧದಿಂದ ಸಶಕ್ತರಾಗಬೇಕು ಅಂದಾಗಲೇ ಸಮಾಜ ಹಾಗೂ ದೇಶದ ಉನ್ನತಿ ಸಾಧ್ಯ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕಡಾ. ಎಸ್ ಸಿ ಧಾರವಾಡ ಹೇಳಿದರು.
ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ ಮಹಿಳಾ ದಿನಾಚರಣೆಯ ಅಂಗವಾಗಿ ಮಾತನಾಡುತ್ತಿದ್ದರು. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಲೇ ಇದ್ದಾರೆ. ಮಹಿಳೆಯರು ಅಬಲೆಯಲ್ಲ ಸಬಲ ತನ್ನೊಟ್ಟಿಗೆ ತನ್ನ ಕುಟುಂಬವನ್ನು ತನ್ನ ಸಮಾಜವನ್ನು ಉನ್ನತಿಯ ಹಾದಿಗೆ ಕರೆದೊಯ್ಯುವ ಶಕ್ತಿಯನ್ನು ಹೊಂದಿದ್ದಾರೆ. ಅದರಲ್ಲಿಯೂ ಆರೋಗ್ಯ ಕ್ಷೇತ್ರದಲ್ಲಿ ವೈದ್ಯೆಯಾಗಿ ಶುಶ್ರೂಷಕಿಯಾಗಿ ತಂತ್ರಜ್ಞೆಯಾಗಿ ಹಾಗೂ ಇನ್ನಿತರ ಪಾತ್ರಗಳಲ್ಲಿ ಕಾರ್ಯನಿರ್ವಹಿಸುತ್ತ ಇಂದು ತನ್ನ ಸೇವೆಯ ಪರಾಕಾಷ್ಠೆಯನ್ನು ಮೆರೆದಿದ್ದಾರೆ ಎಂದು ಹೇಳಲು ನಿಜಕ್ಕೂ ಹೆಮ್ಮೆಯನ್ನಿಸುತ್ತದೆ ಎಂದು ಅಭಿಮಾನದಿಂದ ಹೇಳಿದರು.
ಅತಿಥಿಗಳಾಗಿ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ಚರ್ಮರೋಗ ತಜ್ಞೆ ಡಾ. ನಿರ್ಮಲಾ ಶೆಟ್ಟರ ಮಾತನಾಡುತ್ತ ಮಹಿಳೆಯರನ್ನು ನಮ್ಮ ಹಿಂದೂ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನಮಾನಗಳಿಂದ ಗೌರವಿಸಲಾಗುತ್ತದೆ. ಇಂದು ಮಹಿಳೆಯರು ಎಲ್ಲ ವಿಭಾಗಗಳಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ತಮ್ಮ ಸಾಧನೆಯೊಂದಿಗೆ ತಮ್ಮ ಆರೋಗ್ಯದ ಕಡೆಗೆ ಲಕ್ಷ್ಯ ವಹಿಸಿದಲ್ಲಿ ಇನ್ನಷ್ಟು ಗುಣಮಟ್ಟದ ಸೇವೆಯನ್ನು ನೀಡಬಹುದು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಯುಎಸ್‌ಎಮ್ ಕೆಎಲ್‌ಇಯ ಫೇಸ್ 2ನ ಮುಖ್ಯಸ್ಥ ಡಾ. ಅಶೋಕ ಪಾಂಗಿ ಸೇರಿದಂತೆ, ಆಸ್ಪತ್ರೆಯ ಅರವಳಿಕೆ ವಿಬಾಗದ ಮುಖ್ಯಸ್ಥ ಡಾ. ಆರ್ ಜಿ ನೆಲವಿಗಿ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಮ್ ಎಸ್ ಕಡ್ಡಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ನೆನೆದರು. ಹೆಸರಾಂತ ಮಕ್ಕಳ ತಜ್ಞೆ ಡಾ. ಸೌಮ್ಯಾ ವೇರ್ಣೇಕರ, ಕಣ್ಣು ವಿಭಾಗದ ವೈದ್ಯೆ ಡಾ. ಸ್ಪೂರ್ತಿ ಮೊರ್ಪನವರ, ಹಿರಿಯ ಕಿವಿ ಗಂಟಲು ಹಾಗೂ ಮೂಗಿನ ತಜ್ಞ ಡಾ. ವಿವೇಕಾನಂದ ಕೊಳ್ವೇಕರ ಮುಂತಾದವರು ಉಪಸ್ಥಿತರಿದ್ದರು. ಆಸ್ಪತ್ರೆಯ ಜನಸಂಪರ್ಕಾಧಿಕಾರಿ ಸಂತೋಷ ಇತಾಪೆ ನಿರೂಪಿಸಿ ವಂದಿಸಿದರು.