ಯುವನಿಧಿ ಅನುಷ್ಠಾನ: ಕೌಶಲ್ಯಾಭಿವೃದ್ಧಿ ಸಚಿವರ ಭೇಟಿ ಮಾಡಿದ ಎಸ್.ಆರ್.ಪಾಟೀಲ
ಹಾವೇರಿ 12: ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್. ಪಾಟೀಲ ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲೊಂದಾದ “ಯುವನಿಧಿ” ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕುರಿತು ರಾಜ್ಯದ ಕೌಶಲ್ಯಾಭಿವೃದ್ಧಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಅವರನ್ನು ವಿಧಾನಸೌಧದ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚಿಸಿದರು.
ವಿದ್ಯಾವಂತ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೋಮಾ ಅಭ್ಯರ್ಥಿಗಳು ಯುವನಿಧಿಗೆ ಸುಲಭವಾಗಿ ನೊಂದಣಿ ಮಾಡಲು ಅನುವಾಗುವಂತೆ ಪ್ರಕ್ರಿಯೆ ಸರಳೀಕರಣಗೊಳಿಸುವುದು ಸೇರಿದಂತೆ ಯೋಜನೆಯ ಸಾಧಕ ಬಾಧಕಗಳ ಕುರಿತು ಚರ್ಚಿಸಿದರು.
ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯಾದ್ಯಂತ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ನೊಂದಣಿ ಅಭಿಯಾನವನ್ನು ಕೈಗೊಂಡಿರುವ ಕುರಿತು ಎಸ್.ಆರ್. ಪಾಟೀಲ ಅವರು ಸಚಿವರನ್ನು ಅಭಿನಂದಿಸಿದರು.
ಯೋಜನೆ ಅನುಷ್ಠಾನಕ್ಕೆ ಯಾವುದೇ ಆರ್ಥಿಕ ತೊಂದರೆ ಇಲ್ಲ. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಅಭ್ಯರ್ಥಿಗಳು ನೊಂದಣಿಯಾಗುಂತೆ ಪ್ರೇರೆಪಿಸಲು ತಾಲೂಕು ಹಾಗೂ ಜಿಲ್ಲಾ ಘಟಕಗಳ ಸದಸ್ಯರು ಶ್ರಮ ವಹಿಸುತ್ತಿದ್ದಾರೆಂದು ಎಸ್.ಆರ್. ಪಾಟೀಲ ತಿಳಿಸಿದರು.
ರಾಣೇಬೆನ್ನೂರು ತಾಲೂಕಿನ ಮಹಿಳೆಯೊಬ್ಬರು ತಮ್ಮ ಒಂದು ವರ್ಷದ ಗೃಹಲಕ್ಷ್ಮೀ ಹಣ 24,000/- ರೂ.ಗಳನ್ನು ತಮ್ಮ ಗ್ರಾಮದ ಶಾಲೆಯ ಅಭಿವೃದ್ಧಿಗೆ ನೀಡಿ ಉದಾರತೆ ಮೆರೆದಿದ್ದನ್ನು ಸಚಿವರು ಶ್ಲಾಘಿಸಿದರು.