ಪುದುಚೆರಿಯಲ್ಲಿ ಎರಡನೇ ದಿನವೂ ಕುಂಭದ್ರೋಣ ಮಳೆ ಮುಂದುವರಿಕೆ

ಪುದುಚೆರಿ, ಡಿ 1-ಪುದುಚೆರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡನೇ ದಿನವೂ ಧಾರಾಕಾರ ಮಳೆ ಮುಂದುವರೆದಿದ್ದು, ಭಾನುವಾರ ಕೇಂದ್ರಾಡಳಿತ ಪ್ರದೇಶದಲ್ಲಿ ಜನ-ಜೀವನ ಅಸ್ತವ್ಯಸ್ತಗೊಂಡಿದೆ.

ಪುದುಚೆರಿಯಲ್ಲಿ ಕಳೆದ ಒಂದು ವಾರದಿಂದ ಮಳೆ ಬೀಳುತ್ತಿದೆ. ಈಶಾನ್ಯ ಮುಂಗಾರು ತೀವ್ರಗೊಂಡಿದ್ದರಿಂದ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅನೇಕ ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರು ಪಂಪ್ ಮಾಡುವಲ್ಲಿ ಆಡಳಿತ ಯಂತ್ರ ನಿರತವಾಗಿದೆ. ಅನೇಕ ರಸ್ತೆಗಳು ನೀರಿನಲ್ಲಿ ಮುಳುಗಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ರಸ್ತೆಗಳೂ ಹಾನಿಗೊಂಡಿವೆ. ಭಾನುವಾರವಾದ್ದರಿಂದ ವಾಹನ ಸಂಚಾರ ಕಡಿಮೆ ಇತ್ತು. ಪುದುಚೆರಿಯ ಅನೇಕ ಕೆರೆ ಕುಂಟೆಗಳು ಭಾರೀ ಮಳೆಯಿಂದ ಬೇಗನೆ ತುಂಬುತ್ತಿವೆ. 

  ಭಾನುವಾರ ಬೆಳಿಗ್ಗೆ 8.30ರ ವೇಳೆಗೆ ಕಳೆದ 24 ತಾಸಿನಲ್ಲಿ ಪುದುಚೆರಿಯಲ್ಲಿ 11.4 ಸೆಂ.ಮೀ ಮಳೆಯಾಗಿದೆ. ಈ ಮಧ್ಯೆ, ವಿಳ್ಳುಪುರಂನ ವೀಡುರ್ ಅಣೆಕಟ್ಟೆಯ ಗೇಟ್‍ಗಳನ್ನು ಯಾವುದೇ ವೇಳೆ ತೆಗೆಯಬಹುದಾಗಿದ್ದರಿಂದ ಶಂಕರಾಭರಣಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನ್ನಾಡಿಪೇಟ್ ಪಂಚಾಯಿತಿ ಆಡಳಿತ ತಿಳಿಸಿದೆ.