ಯತ್ನಾಳ ಬೆಂಬಲಿಸಿ ಅಥಣಿಯಲ್ಲಿ ಹಿಂದೂ ಕಾರ್ಯಕರ್ತರ ಬೃಹತ್ ಪ್ರತಿಭಟನೆ
ಅಥಣಿ, 01; ಸನಾತನ ಮತ್ತು ಹಿಂದು ಧರ್ಮದ ಉಳಿವಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿರುವ ವಿಜಯಪುರ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಯತ್ನಾಳ ಇವರನ್ನು ಉಚ್ಚಾಟನೆ ಮಾಡಿರುವುದು ಖಂಡನೀಯವಾಗಿದ್ದು, ಬಿಜೆಪಿಯ ಹಿಂದುತ್ವ ಉಳಿಯಲು ಉಚ್ಚಾಟನೆ ಆದೇಶ ಹಿಂಪಡೆಯಬೇಕು ಎಂದು ಅಥಣಿ ತಾಲೂಕಾ ಪಂಚಮಸಾಲಿ ವಕೀಲರ ಪರಿಷತ್ ಅಧ್ಯಕ್ಷ ಎಸ್.ಎಸ್.ಪಾಟೀಲ(ಬೊಮ್ಮನಾಳ) ಆಗ್ರಹಿಸಿದರು.
ಅವರು ಬಸನಗೌಡ ಪಾಟೀಲ ಉಚ್ಚಾಟನೆ ಖಂಡಿಸಿ ಮತ್ತು ಯತ್ನಾಳ ಬೆಂಬಲಿಸಿ ಅಥಣಿಯಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಹಿಂದುತ್ವದ ಪರವಾಗಿ ಧ್ವನಿ ಎತ್ತಿದ್ದ ಕೆ.ಎಸ್.ಈಶ್ಚರ್ಪ ನವರನ್ನು ಬಿಜೆಪಿ ಉಚ್ಚಾಟನೆ ಮಾಡಿತು ಜೊತೆಗೆ ಬಿಜೆಪಿಗಾಗಿ ಅನೇಕ ವರ್ಷಗಳ ಕಾಲ ಶ್ರಮಿಸಿದ್ದ ರಾಮದುರ್ಗದ ಮಹಾದೇವಪ್ಪಾ ಯಾದವಾಡರಿಗೂ ಟಿಕೇಟ್ ನೀಡಲಿಲ್ಲ ಹೀಗೆ ಬಿಜೆಪಿ ಮುಖಂಡರು ಹಿಂದುತ್ವಕ್ಕಾಗಿ ಶ್ರಮಿಸುತ್ತಿರುವವರನ್ನೇ ಗುರಿಯಾಗಿಸಿಕೊಂಡು ಮೂಲೆ ಗುಂಪು ಮಾಡುತ್ತಿದೆ ಎಂದು ಆರೋಪಿಸಿದರು. ಬಸನಗೌಡ ಪಾಟೀಲ ಯತ್ನಾಳರು ಕೇವಲ ಶಾಸಕರು ಅಥವಾ ಒಂದು ಪಕ್ಷದ ಮುಖಂಡರಾಗಿರಲಿಲ್ಲ ಅವರೊಬ್ಬ ಹಿಂದುತ್ವದ ಶಕ್ತಿಯಾಗಿದ್ದರು. ಅವರ ನಿಲುವನ್ನು ಪಕ್ಷ ಗೌರವಿಸಬೇಕಿತ್ತು ಆದರೆ ಉದ್ದೇಶಪೂರ್ವಕವಾಗಿ ಅವರನ್ನು ಮೂಲೆಗುಂಪು ಮಾಡಲೆಂದು ಉಚ್ಚಾಟಿಸಿದ್ದಾರೆ ಎಂದರು. ಹಿಂದು ಮತ್ತು ಸನಾತನ ಧರ್ಮದ ಪರವಾಗಿ ಧ್ವನಿ ಎತ್ತುತ್ತಿರುವ ಏಕೈಕ ವ್ಯಕ್ತಿ ಬಸನಗೌಡ ಯತ್ನಾಳರು ಬಿಜೆಪಿಯ ಶಕ್ತಿಯಾಗಿದ್ದರು, ಹಿಂದು ಧರ್ಮದಲ್ಲಿಯ ಅನೇಕ ಸಮಾಜಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲೂ ಕೂಡ ಸದನದಲ್ಲಿ ಹೋರಾಟ ಮಾಡಿದ್ದಾರೆ ಇಂತಹ ಒಬ್ಬ ಶಕ್ತಿಶಾಲಿ ವ್ಯಕ್ತಿಯನ್ನು ಬಿಜೆಪಿ ಉಚ್ಚಾಟಿಸಿರುವುದು ತನ್ನ ಖೆಡ್ಡಾ ತಾನೇ ತೊಡಿಕೊಂಡಂತಾಗಿದೆ ಎಂದ ಅವರು ಮಹಾರಾಷ್ಟ್ರ ಸಿಎಮ್ ದೇವೇಂದ್ರ ಫಡ್ನವೀಸ್ ಕೂಡ ಬಸನಗೌಡ ಯತ್ನಾಳರನ್ನು ಬೆಂಬಲಿಸಿ ಅವರ ಉಚ್ಚಾಟನೆ ಹಿಂಪಡೆಯಬೇಕು ಎಂದು ಈಗಾಗಲೇ ಕೇಂದ್ರದ ನಾಯಕರನ್ನು ಕೂಡ ಆಗ್ರಹಿಸಿರುವುದು ನೋಡಿದರೆ ಯತ್ನಾಳರು ಕೇವಲ ರಾಜ್ಯದ ಮಟ್ಟದ ನಾಯಕರಲ್ಲ ಅವರೊಬ್ಬ ರಾಷ್ಟ್ರೀಯ ನಾಯಕರು ಎಂದು ಹೇಳಿದರು.
ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಖಂಡಿಸಿ ಸ್ಥಳೀಯ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಿಂದ ಪ್ರಾರಂಭಗೊಂಡ ಹಿಂದು ಕಾರ್ಯಕರ್ತರ ಮೆರವಣಿಗೆ ಬಸವೇಶ್ವರ ವೃತ್ತ, ಶಿವಯೋಗಿ ವೃತ್ತದ ಮೂಲಕ ಅಂಬೇಡ್ಕರ್ ವೃತ್ತ ತಲುಪಿ ಸಮಾವೇಶಗೊಂಡಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದವರೆಲ್ಲ ಬಿಜೆಪಿ ವಿರುದ್ಧ ಮತ್ತು ಯತ್ನಾಳ ಗೌಡರ ಪರವಾಗಿ ಘೋಷಣೆ ಕೂಗಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಶಶಿಕಾಂತ ಪಡಸಲಗಿ ಗುರುಜೀ, ಸತ್ಯಪ್ಪಾ ಬಾಗೆಣ್ಣವರ, ಧರೆಪ್ಪ ಠಕ್ಕಣ್ಣವರ, ಬಸನಗೌಡ ನಾಗರಾಳ, ಡಿ.ಸಿ.ನಾಯಿಕ, ನಾನಾಸಾಬ ಅವತಾಡೆ, ಸತ್ಯಪ್ಪ ಬಾಗೇನ್ನವರ, ಮಲ್ಲಿಕಾರ್ಜುನ ಅಂದಾನಿ, ಪುಟ್ಟು ಹಿರೇಮಠ, ಕುಮಾರ ಪಡಸಲಗಿ, ಶಿವು ಸಿಂದೂರ, ಪ್ರಕಾಶ ಚಣ್ಣನ್ನವರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಹಿಂದು ಕಾರ್ಯಕರ್ತರು ಪಾಲ್ಗೊಂಡಿದ್ದರು.