ಸಂಗೀತ ಮನಸ್ಸನ್ನು ಅರಳಿಸುತ್ತದೆ: ಡಾ.ಗಂಗಾನೆ ಅಭಿಮತ

Music opens the mind: Dr. Gangane

ಕೆಎಲ್‌ಇ ಸಂಗೀತ ಶಾಲೆಯಿಂದ ಮಕ್ಕಳಿಗೆ ‘ಬೇಸಿಗೆ ಸಂಗೀತ ಶಿಬಿರ’ ಮುಕ್ತಾಯ ಸಮಾರಂಭ 

ಬೆಳಗಾವಿ ಎ.17: ಸಂಗೀತ ಮನಸ್ಸನ್ನು ಅರಳಿಸುತ್ತದೆ. ಭಾವನೆಗಳಿಗೆ ಶಕ್ತಿತುಂಬುತ್ತದೆ. ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಭಾರತೀಯ ದರ್ಶನವಿರುವುದು ಸಂಗೀತದಲ್ಲಿ. ಅದನ್ನು ಮಕ್ಕಳಿಗೆ ಉಣಬಡಿಸುವುದು ಪ್ರಸ್ತುತ ಅಗತ್ಯವಾಗಿದೆ ಎಂದು ಕೆಎಲ್‌ಇ ವಿಶ್ವವಿದ್ಯಾಲಯದ ಕಾಹೆರ್ ಉಪಕುಲಪತಿ ಡಾ.ನಿತಿನ್ ಗಂಗಾನೆ ಹೇಳಿದರು. ಅವರು ಜೆಎನ್‌ಎಂಸಿ ಕನ್ವೇಷನ್ ಸೆಂಟರ್ ಡಾ.ಎಚ್‌.ಬಿ.ರಾಜಶೇಖರ ಸಭಾಂಗಣದಲ್ಲಿ ಆಯೋಜಿಸಿದ್ದ  ಕಾಹೆರ್ ವಿವಿಯದ ಸಂಗೀತ ಶಾಲೆಯು ಮಕ್ಕಳಿಗಾಗಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳಿಗೆ ಸಂಗೀತ, ನೃತ್ಯ, ವಾದ್ಯ ಸಂಗೀತದಂತಹ ಲಲಿತ ಕಲೆಗಳ ಅಭಿರುಚಿಯನ್ನು ಮೂಡಿಸುವುದು ಅಗತ್ಯವಾಗಿದೆ. ಸೂಕ್ಷ್ಮವಾದ ಮನಸ್ಸು ಅವುಗಳನ್ನು ಬಹುಬೇಗನೆ ಪಡೆಯುವುದು. ಸಂಗೀತ ಸಂಸ್ಕಾರದಿಂದ ಅವರ ಬದುಕು ಕೂಡ ಸುಂದರಗೊಳ್ಳುವುದು. ಈ ನಿಟ್ಟಿನಲ್ಲಿ ಕೆಎಲ್‌ಇ ಸಂಗೀತ ಶಾಲೆ ಪ್ರತಿವರ್ಷ ಮಕ್ಕಳಿಗೆ ಸಂಗೀತ ಶಿಬಿರಗಳನ್ನು ಆಯೋಜಿಸಿ ಉತ್ತೇಜಿಸುತ್ತಿದೆ ಎಂದು ಹೇಳಿದರು. 

ಕಣ್ಮನ ಸೆಳೆದ ಸಂಗೀತ: ಈ ಸಂಗೀತ ಶಿಬಿರವನ್ನು 1 ರಿಂದ 17 ಎಪ್ರಿಲ್ ವರೆಗೆ ಆಯೋಜಿಸಲಾಗಿತ್ತು. 168 ಪುಟ್ಟಮಕ್ಕಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಶಾಸ್ತ್ರಿಯ ಹಾಗೂ ಭಾವಗೀತೆ ಹಾಡುಗಳು, ಭರತನಾಟ್ಯ, ಹಾರ್ಮೋನಿಯಂ, ತಬಲಾ ವಾದ್ಯ ಸಂಗೀತಗಳ ತರಬೇತಿಯನ್ನು ಪುಟ್ಟ ಮಕ್ಕಳಿಗೆ ನೀಡಲಾಯಿತು. ಅತ್ಯಂತ ಸುಶ್ರಾವ್ಯವಾಗಿ ಮಕ್ಕಳು ಸಂಗೀತವನ್ನು ನಾಡುವ ಮೂಲಕ ಸಭಾಂಗಣವನ್ನು ಮಧುರಗೊಳಿಸಿದರು, ನಾಟ್ಯಮಯೂರರಾಗಿ ಸಭಾಂಗಣವನ್ನು ಮಂತ್ರಮುಗ್ಧಗೊಳಿಸಿದರು, ಪುಟ್ಟ ಕೈಗಳು ತಬಲಾ, ಹಾರ್ಮೋನಿಯಂ ವಾದ್ಯಗಳಲ್ಲಿ ಅನೇಕ ರಾಗಗೀತೆಗಳನ್ನು, ದೇಶಭಕ್ತಿ ಹಾಡುಗಳನ್ನು ನುಡಿಸಿ ಪ್ರೇಕ್ಷಕರ ಹೃದಯಸೂರೆಗೊಳಿಸಿದರು. ಸಂಗೀತ ಶಾಲೆಯು ಮಕ್ಕಳ ಹೃದಯದಲ್ಲಿ ನಾದಲೋಕದ ಕಲಾಬೀಜವನ್ನು ಬಿತ್ತಿ, ಸಸಿಯಾಗಿ ರೂಪಿಸಿದ್ದು ಸಾರ್ಥಕವಾಗಿತ್ತು. ಮಕ್ಕಳ ಸೂಪ್ತ ಪ್ರತಿಭೆಗೆ ಕೆಎಲ್‌ಇ ಸಂಗೀತಶಾಲೆ ವಿಶೇಷವಾದ ವೇದಿಕೆಯನ್ನು ಕಲ್ಪಿಸಿ ಅನಾವರಣಗೊಳಿಸಿದ್ದು ಅಸಂಖ್ಯ ಪಾಲಕರ ಹೃದಯವನ್ನು ಗೆದ್ದಿತ್ತು. ಪಾಲಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಕೆಎಲ್‌ಇ ಸಂಗೀತ ಶಾಲೆಯ ಶ್ರಮದ ಸಾರ್ಥಕತೆಯನ್ನು ಕೊಂಡಾಡಿದರು. 

ಸಂಗೀತ ಶಾಲೆಯ ಸಂಯೋಜಕರಾದ ಡಾ.ರಾಜೇಂದ್ರ ಭಂಡಾನಕರ, ಜೆಎನ್‌ಎಂಸಿ ಉಪಪಾಚಾರ್ಯ ಡಾ.ರಾಜೇಶ ಪವಾರ, ಸಂಗೀತ ಶಾಲೆ ಪ್ರಾಚಾರ್ಯ ಪಂಡಿತ ರಾಜಾರಾಮ ಅಂಬೆಡೇಕರ್, ಸಂಗೀತ ಶಿಕ್ಷಕಿ ಡಾ.ಸುನೀತಾ ಪಾಟೀಲ, ಡಾ.ದುರ್ಗಾ ನಾಡಕರ್ಣಿ, ಸಂಗೀತಾ ಕುಲಕರ್ಣಿ, ಹಾರ್ಮೋನಿಯಂ ಶಿಕ್ಷಕರಾದ ಯಾದವೇಂದ್ರ ಪೂಜಾರಿ, ನೀತೀನ್ ಸುತಾರ, ತಬಲಾ ಶಿಕ್ಷಕ ಜೀತೇಂದ್ರ ಸಾಬಣ್ಣವರ, ರಾಹುಲ್ ಮೊದಲ್ಕರ, ನೃತ್ಯ ಶಿಕ್ಷಕಿ ದಿಶಾ ಹರಿಕಾಂತ ಉಪಸ್ಥಿತರಿದ್ದರು. ಡಾ.ಸುಜಾತಾ ನಿರೂಪಿಸಿದರು.