ಸೋಮಸಾಗರ ಗ್ರಾಮದಲ್ಲಿ ಜನಸ್ಪಂದನತಾಲೂಕಿನ 13 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ
-ಶಾಸಕ ಶ್ರೀನಿವಾಸ ಮಾನೆಹಾವೇರಿ 28: ಹಾನಗಲ್ ತಾಲೂಕಿನಲ್ಲಿ ಕಳೆದ 40 ವರ್ಷಗಳಿಂದ ಸರ್ಕಾರಿ ಹಾಗೂ ಖಾಸಗಿ ಜಾಗೆಯಲ್ಲಿ ಮನೆ ನಿರ್ಮಿಸಿಕೊಂಡ 13 ಸಾವಿರ ಫಲಾನುಭವಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ಅವರು ಹೇಳಿದರು.
ಹಾನಗಲ್ ತಾಲೂಕು ಸೋಮಸಾಗರ ಗ್ರಾಮದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕ ಆಡಳಿತ ಹಾಗೂ ಗ್ರಾ.ಪಂ. ಸಹಯೋಗದಲ್ಲಿ ಆಯೋಜಿಸಲಾದ ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲ್ಲಿ ಹಕ್ಕು ಪತ್ರ ವಿತರಣೆಗೆ ಎರಡು ಸಾವಿರ ಪಟ್ಟಾಗಳನ್ನು ಸಿದ್ಧಮಾಡಿಕೊಳ್ಳಲಾಗಿದೆ. 2025ರ ಅಂತ್ಯದೊಳಗಾಗಿ ಎಲ್ಲ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗುವುದು ಎಂದರು.
ಜನರ ಬಳಿಗೆ ಆಡಳಿತ ತರುವ “ಜನಸ್ಪಂದನ” ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.
ಜನರ ನಡುವೆ ಆಡಳಿತವನ್ನು ತೆಗೆದುಕೊಂಡು ಹೋಗಿ ಅವರು ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸಲಾಗುತ್ತಿದೆ. ತಾಲೂಕಿನ ತಿಳವಳ್ಳಿ, ಆಲದಕಟ್ಟಿ, ಕೊಪ್ಪರಸಿಕೊಪ್ಪ ಹಾಗೂ ಹಾನಗಲ್‌ನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಗಳಲ್ಲಿ ಸ್ವೀಕತೃವಾದ 375 ಅರ್ಜಿಗಳನ್ನು ಸಹ ವಿಲೇಮಾಡಲಾಗಿದೆ ಎಂದರು.
ಮಾನ್ಯ ಕಂದಾಯ ಸಚಿವರು ಪೌತಿಖಾತೆ ಆಂದೋಲನವನ್ನು ಕೋಲಾರ ಜಿಲ್ಲೆಯಿಂದ ಆರಂಭಿಸಿದ್ದು, ಶೀಘ್ರದಲ್ಲೇ ಜಿಲ್ಲೆಯಲ್ಲಿ ಆರಂಭವಾಗಿಲಿದ್ದು, ತಾಲೂಕಿನಲ್ಲಿ ಪೌತಿದಾರರ ಸಂಪೂರ್ಣ ಮಾಹಿತಿ ಪಡೆಯಲು ಕಂದಾಯ ಇಲಾಖೆ ಸಿಬ್ಬಂದಿಗಳು ಈಗಾಗಲೇ ತಾಲೂಕಿನ 21 ಸಾವಿರ ಕುಟುಂಬಗಳನ್ನು ಗುರುತಿಸಿದ್ದಾರೆ. ಶೀಘ್ರದಲ್ಲೇ ವಾರಸುದಾರರ ಮಾಹಿತಿಯನ್ನು ಸೇರೆ್ಡ ಮಾಡಲಾಗುವುದು. ತಾಲೂಕಿನ 152 ಗ್ರಾಮಗಳಿಂದ ಎರಡು ಸಾವಿರ ಪಹಣಿಗಳನ್ನು ಪೋಡಿಮಾಡಲಾಗಿದೆ ಹಾಗೂ ತಾಲೂಕಿನಲ್ಲಿ ಪಹಣಿ ಜೊತೆಗೆ ಆಧಾರ ಜೋಡಣೆ ಕಾರ್ಯ ಶೇ.93 ರಷ್ಟು ಆಗಿದ್ದು, ಜಿಲ್ಲೆಯಲ್ಲೇ ಹಾನಗಲ್ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.
ಬಡವರ ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿ ಸುಧಾರಣೆ ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದು, ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 62 ಸಾವಿರ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರ ಪ್ರತಿ ಮಾಹೆ ರೂ.2.60 ಕೋಟಿಯಂತೆ ಒಂದು ವರ್ಷಕ್ಕೆ ರೂ.22 ಕೋಟಿ ಆರ್ಥಿಕ ಶಕ್ತಿ ನೀಡುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ರೂ.58 ಕೋಟಿ ವೆಚ್ಚ ಮಾಡುತ್ತಿದೆ ಎಂದರು.ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ನಾಡಕಚೇರಿ, ಗ್ರಾಮ ಒನ್ ಕೇಂದ್ರಗಳ ಅಂದಾಜು ಒಂದು ಸಾವಿರ ಸೇವೆಗಳನ್ನು ಒದಗಿಸಲಾಗುತ್ತಿದೆ. ಕಂದಾಯ ಇಲಾಖೆ ಹಾಗೂ ರೈತ ಮಧ್ಯೆ ಅವಿನಾಭಾವ ಸಂಬಂಧವಿದೆ. ರೈತರ ಹಳೆ ಪಹಣಿ ಹಾಗೂ ನಕ್ಷೆಗಳು ಆನ್‌ಲೈನ್‌ಲ್ಲಿ ಸಿಗಲಿವೆ. ಜನತಾದರ್ಶನದಲ್ಲಿ ಸ್ವೀಕರಿಸುವ ಅಹವಾಲುಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರ ಅಹವಾಲು: ಉಪ್ಪಣಸಿ ಗ್ರಾಮದಲ್ಲಿ ಖಬರಸ್ತಾನಕ್ಕೆ ಎರಡು ಎಕರೆ ಜಮೀನು, ಮನೆಹಾನಿ ಪರಿಹಾರ ಹಣ, ಬ್ಯಾಗವಾದಿ, ಹೆರೂರ ಗ್ರಾಮಗಳಿಗೆ ಬಸ್ ಸೌಲಭ್ಯ, ಬ್ಯಾಗವಾದಿ ಹಾಗೂ ಉಪ್ಪಣಸಿ ಗ್ರಾಮಗಳಿಗೆ ಸ್ಮಶಾನ ಭೂಮಿ, ವೃದ್ಧಾಪ್ಯವೇತನ ಸೇರಿದಂತೆ ವಿವಿಧ ಸಾರ್ವಜನಿಕರು ಮನವಿ ಸಲ್ಲಿಸಿದರು.
ಪೋಷನ್ ಅಭಿಯಾನ್: ಇದೇ ಸಂದರ್ಭದಲ್ಲಿ ಪೋಷನ್ ಮಾಶಾಸನ ಅಭಿಯಾನ ಕಾರ್ಯಕ್ರಮಕ್ಕೆ ಹಾಗೂ ಆಯುಷ್ಮಾನ ಆರೋಗ್ಯ ಕರ್ನಾಟಕ ಶಿಬಿರಕ್ಕೆ ಶಾಸಕರು ಚಾಲನೆ ನೀಡಿ, ಪೌಷ್ಟಿಕ ಆಹಾರ ಉತ್ಪನ್ನಗಳ ಪ್ರದರ್ಶನ ವೀಕ್ಷಣೆ ಮಾಡಿದರು.
ವಿವಿಧ ಕೌಂಟರ್ : ಜನಸ್ಪಂದನ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ಅರ್ಜಿ ಸ್ವೀಕರಿಸಲು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕೌಂಟರ್‌ಗಳನ್ನು ಆರಂಭಿಸಲಾಗಿತ್ತು. ಸಾರ್ವಜನಿಕರು ತಮ್ಮ ಅರ್ಜಿಗಳನ್ನು ಸಂಬಂಧಿಸಿದ ಕೌಂಟರ್‌ಗಳಲ್ಲಿ ನೀಡುತ್ತಿದ್ದರು.
ಕಾರ್ಯಕ್ರಮದಲ್ಲಿ ಸೋಮಸಾಗರ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಪ್ರೇಮಾ ಮಾಯಕ್ಕನವರ, ಉಪ್ಪಣಸಿ ಗ್ರಾ.ಪಂ.ಅಧ್ಯಕ್ಷ ಬಂಕಾಪೂರ, ಸೋಮಸಾಗರ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ನಾಗಮ್ಮ ಕತ್ತಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮಹೇಶ ಬಣಕಾರ, ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ವಸಂತಕುಮಾರ,ಸವಣೂರ ಉಪ ವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡ್ರ, ತಹಸೀಲ್ದಾರ ರೇಣುಕ್ಕಮ್ಮ ,ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಇತರರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಾಲಿಮಠ ಸ್ವಾಗತಿಸಿದರು.