ಮೂಲಭೂತ ಸೌಕರ್ಯಗಳಿಗಾಗಿ ಹಾಗೂ ಭ್ರಷ್ಟಾಚಾರ ತನಿಖೆಗಾಗಿ ಎಸ್‌ಎಫ್‌ಐ ಆಗ್ರಹ
ಹಾವೇರಿ 29 : ರಾಣೆಬೇನ್ನೂರ ತಾಲ್ಲೂಕಿನ ಸುಣ್ಣಕಲ್ಲಬಿದರಿ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಂದ ವಂಚನೆ ವಿರೋಧಿಸಿ ಮತ್ತು ಮಹಾ ಭ್ರಷ್ಟಾಚಾರದ ತನಿಖೆಗಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ಹಾಗೂ ಬಿಸಿಎಮ್ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಎನ್. ಪ್ರವೀಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ನೂರಾರು ವಿದ್ಯಾರ್ಥಿಗಳು ದೂರದ ಊರಿನಿಂದ ಬಂದು ವಸತಿ ನಿಲಯದಲ್ಲಿ ಆಶ್ರಯ ಪಡೆದ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. 2012 ರಲ್ಲಿ ಪ್ರಾರಂಭದ ವಸತಿ ನಿಲಯ 13 ವರ್ಷ ಕಳೆದರೂ ಸ್ವಂತ ಕಟ್ಟಡ ಇಲ್ಲ ಮತ್ತು ಯಾವುದೇ ಪ್ರಕ್ರಿಯೆಗಳಿಗೂ ಇಲಾಖೆಯ ಮುಂದಾಗಿಲ್ಲದಿರುವುದು ದುರಂತವೇ ಸರಿ. ಪ್ರಸ್ತುತವಾಗಿ ಬಾಡಿಗಿ ರೂಪದಲ್ಲಿ ದನಕರುಗಳ ಕೂಡಿಹಾಕುವ ತಗಡಿನ ಗೋದಾಮಿನಲ್ಲಿ ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಈವರೆಗೂ ಕನಿಷ್ಠ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲ್ಲ. 124 ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದ ಪೈಕಿ ಕೇವಲ 4 ಬೆಕೆಟ್ 2 ಚಂಬು , ಮೂರು ಶೌಚಾಲಯ, 3 ಸ್ನಾನದ ಕೊಠಡಿ ಸೇರಿದಂತೆ ವಿಪರೀತವಾದ ಸಮಸ್ಯೆಗಳ ಗೂಡಾಗಿದೆ.ಬಿಸಿಎಮ್ ಇಲಾಖೆಯಲ್ಲಿ ಭಾರಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ಮತ್ತು ಅಧಿಕಾರಗಳಿಗೆ ಬಿಲ್ ಮಾಡಲು ಲಂಚ ನಡೆದಿದೆ ಎಂಬುದಾಗಿ ಈ ಹಾಸ್ಟೆಲ್ ಅವ್ಯವಸ್ಥೆಯೇ ಸಾಕ್ಷಿಯಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪ್ರಕರಣ ದಾಖಲಿಸಿ ಈವರೆಗೂ ಹಾಸ್ಟೆಲ್ ಗೆ ಬಿಡುಗಡೆಯಾದ ಅನುದಾನ, ಸೌಲಭ್ಯಗಳನ್ನು ಬಹಿರಂಗ ಪಡಿಸಬೇಕು. ಕೂಡಲೇ ಬೇಡಿಕೆಯ ಪಟ್ಟಿಯ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಹಾಗೂ ಸ್ವಂತ ಕಟ್ಟಡ ಒದಗಿಸಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉನ್ನತ ಅಧಿಕಾರಗಳು ಭೇಟಿ ನೀಡಬೇಕು ಮನವಿಗೆ ಸ್ಪಂದಿಸಬೇಕು ಇಲ್ಲವಾದರೆ ಬೃಹತ್ ತೆರನಾದ ಹೋರಾಟ ಮಾಡಲಾಗುವುದು ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ದೂರಿದರು.ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ದೂರವಾಣಿ ಮೂಲಕ ತೆಗೆದ ಅವ್ಯವಸ್ಥೆಯ ಛಾಯಾಚಿತ್ರಗಳನ್ನು ವೀಕ್ಷಿಸಿದ ಅವರು ಚರ್ಚಿಸಿ ಕೂಡಲೇ ಸಂಪೂರ್ಣ ಮಾಹಿತಿ ಒದಗಿಸಿ ಸೂಕ್ತ ಕ್ರಮ ಕೈಗೊಳ್ಳಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಬಿಸಿಎಮ್ ಇಲಾಖೆ ಜಿಲ್ಲಾ ಅಧಿಕಾರಿ ಕೆ.ಎನ್. ಪ್ರವೀಣ್ ಮಾತನಾಡಿ, ಸಮಸ್ಯೆಗಳ ಕುರಿತು ಸಮಗ್ರ ವರದಿ ಒದಗಿಸಲು ತಾಲ್ಲೂಕಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಶೀಘ್ರವಾಗಿ ಕಟ್ಟಡವನ್ನು ಸ್ಥಳಾಂತರ ಮಾಡಲಾಗುವುದು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಹಾಸ್ಟೆಲ್ ಘಟಕ ಅಧ್ಯಕ್ಷ ರೇವಣಸಿದ್ದೇಶ ವಿ, ಮುಖಂಡ ನವೀನ ಹೆಚ್ ಎಮ್, ಅಭಿಷೇಕ್ ಎಸ್ ಎಮ್ ಉಪಸ್ಥಿತರಿದ್ದರು.