ಬೇಡಿದ ಭಕ್ತರಿಗೆ ದಯಪಾಲಿಸುವ ಶಾಂತೇಶ್ವರ ದೇವರುಸಚೀನ ಇಂಡಿ
ಇಂಡಿ 07: ನಿಂಬೆನಾಡು ಎಂದು ಖ್ಯಾತಿ ಪಡೆದಿರುವ ಇಂಡಿ ಪಟ್ಟಣದ ಆರಾಧ್ಯ ದೈವ ಅಂದರೆ ಶ್ರೀ ಸದ್ಗುರು ಶಾಂತೇಶ್ವರ ದೇವರು ಅಂದರೆ ತಪ್ಪಾಗಲಾರದು. ಪ್ರಾಚೀನ ಕಾಲದಿಂದಲೂ ಇಂಡಿ ಎಂಬ ಗ್ರಾಮ ಇತ್ತು.ಅದೇ ಹೀರೆಇಂಡಿ ಅಂತ ಕರೆಯುತ್ತಿದ್ದರು. ಈಗಿನ ಇಂಡಿ ಭಯಾನಕ ಕಾಡುಬನ ಪ್ರದೇಶವಾಗಿತ್ತು. ಶ್ರೀ ಸದ್ಗುರು ಶಾಂತೇಶ್ವರ ದೇವಸ್ಥಾನದ ಪ್ರದೇಶದಲ್ಲಿ ಸ್ವಯಂ ಭೂಲಿಂಗವಿತ್ತು.ಈ ಕಾಡುಬನ ಪ್ರದೇಶಕ್ಕೆ ಲೋಕೋದ್ದಾರಕ್ಕೆ ಬಂದ ಶ್ರೀ ಶಾಂತೇಶನೆಂಬ ಶಿವನ ಅಂಶದ ಮಹಾ ತಪಸ್ವಿ ಈ ಪ್ರದೇಶದಲ್ಲಿ ನೆಲೆ ನಿಂತು ತಪ್ಪಸನ್ನು ಆಚರಿಸುತ್ತಾನೆ.ತಪ್ಪಸ್ಸಿಗೆ ಕುಳಿತ ಪವಾಡ ಪುರುಷನ ಸುತ್ತ ದಿನಗಳೆಂದಂತೆ ಹುತ್ತ ಬೆಳೆದು ನಿಲ್ಲುತ್ತದೆ.ಹುತ್ತದಲ್ಲಿ ಬಂಧಿಯಾಗಿದ್ದ ಶ್ರೀ ಸದ್ಗುರು ಶಾಂತೇಶ್ವರನಿಗೆ ಕಿರಿಯಿಂಡಿ ಆಕಳು ಮೇಯುತ್ತಾ ಬಂದು ದಿನಾಲೂ ಹುತ್ತಿಗೆ ಹಾಲು ಹಿಂಡಿ ಹೋಗುತ್ತಿರುತ್ತದೆ. ಇದನ್ನು ದನಗಾಯಿಯೊಬ್ಬ ಒಮ್ಮೆ ಕಾದು ನೋಡಿ ಊರಿನ ಪ್ರಮುಖರಿಗೆ ವಿಷಯ ತಿಳಿಸುತ್ತಾನೆ.ಆಗ ಎಲ್ಲರೂ ಬಂದು ನೋಡಲು ಹುತ್ತಿನಿಂದ ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರ ಕೇಳುತ್ತಿರುತ್ತದೆ... ಕುತೂಹಲ ತಡೆಯದೆ ಜನ ಹುತ್ತನ್ನು ಕೆಡವಿ ನೋಡಿದಾಗ ಅದರಲ್ಲಿನ ಮಹಾ ತಪಸ್ವಿ ಅವತಾರವಾಗಿ ಹೊರ ಹೊಮ್ಮುತ್ತಾನೆ ಆ ಮಹಾಮಹಿಮನ ಕಾಲಿಗೆ ಬಿದ್ದ ಜನ ಆತನ ಭಕ್ತರಾಗುತ್ತಾರೆ. ಈ ಭಾಗದಲ್ಲಿ ನೆಲೆನಿಂತು ರೋಗಿಗಳಿಗೆ ಗಾಳಿಯಾದವರಿಗೆ ಬೆತ್ತ ಪವಾಡದಿಂದ ಕಾಯಿಲೆಗಳನ್ನು ವಾಸಿ ಮಾಡುತ್ತಾನೆ ಒಮ್ಮೆ ಶಾಂತೇಶ್ವರ ದಿಬ್ಬದ ಮೇಲೆ ಕಾರ್ಯ ನಿರತನಾಗಿರುವಾಗ ಸತ್ತ ಕಂದನ ಹೊತ್ತು ತಂದ ಒಬ್ಬ ತಾಯಿಯ ಮಗುವನ್ನು ಪುನಃ ಜೀವಂತ ಗೊಳಿಸುತ್ತಾನೆ.
ಅಂದಿನಿಂದ ಇವರಿಗೂ ವಾಡಿಕೆಯಂತೆ ಕೂಸೂ ಹಾರಿಸುವ ಪದ್ದತಿಯು ಇಂದಿಗೂ ಸಹ ಆಚರಣೆಯಲ್ಲಿ ಇದೆ.ಅನೇಕ ಭಕ್ತರನ್ನು ಉದ್ದರಿಸಿ ಕೊನೆಗೊಮ್ಮೆ ಕಾಲನ ಕರೆಗೆ ಓಗೊಡುತ್ತಾನೆ.ಒಮ್ಮೆ ಲಿಂಗದ ಸೇವೆಯಲ್ಲಿದ್ದಾಗ ಆತನ ಹೆಗಲ ಮೇಲಿನ ಸಿತಾಳ (ನೀರಿನ) ಬಿಂದಿಗೆ ಕೈ ಜಾರಿ ಬೀಳುತ್ತದೆ ಕೈಯಲ್ಲಿದ್ದ ಬೆತ್ತ ಕಳಚುತ್ತದೆ ಕಾಲಜ್ಞಾನಿ ಶಾಂತೇಶ್ವರನಿಗೆ ಎಲ್ಲವೂ ಅರ್ಥವಾಗುತ್ತದೆ ಇನ್ನೂ ಬಂದ ಕೆಲಸ ಮುಗಿಯಿತು ನಾನಿನ್ನು ಹೊರಬೇಕು ಎಂದು ಸಂಕಲ್ಪಿತನಾಗುತ್ತಾನೆ ಆಗ ಪರಮಾತ್ಮ ಧರೆಗಿಳಿದ ಪಾಶ ಕೈಯಲ್ಲಿ ಹಿಡಿದು ಬಂದು ಆತನಿಗೆ ಒಯ್ಯಲು ಬರುತ್ತಾನೆ. ಆಗ ಶ್ರೀ ಶಾಂತೇಶ್ವರನ ಕಂಡು ಆತನ ಭಕ್ತಿಗೆ ಮೆಚ್ಚಿ ಬಾವ ಪರವಶನಾಗಿ ಕೈಯಲ್ಲಿನ ಪಾಶ/ ಹಗ್ಗ ಕೈ ಚೆಲ್ಲುತ್ತಾನೆ ಆತನನ್ನು ಭಾವಪರವಶನಾಗಿ ಅಪ್ಪಿಕೊಂಡು ಈಗೀರುವ ಲಿಂಗದಲ್ಲಿ ಲೀನ ಗೊಳಸಿಕೊಳ್ಳುತ್ತಾನೆ. ಆಗ ಊರ ಜನ ಶ್ರೀ ಶಾಂತೇಶ್ವರ ಪವಾಡದ ಕುರುಹುಗಳನ್ನು ನೆನಪಿಸಿಕೊಂಡು ಜಾತ್ರೆ ಮಾಡುತ್ತಾರೆ.ಹಗಲು ದೀವಟಿಗೆ,ಪತಾಕೆ,ಪುರವಂತರು,ನಂದಿಕೋಲು,ಚತ್ರಿ,ಚಾಮರ,ಚೌರ,ಈಗೀನ ಜಂಗಿ ನಿಕಾಲಿ ಗದಾ ಕುಸ್ತಿ ಕೂಸು ಹಾರಿಸುವದು, ಉಗ್ಗಾಳಿಸುವದು (ಉಘೇ ಉಘೇ)ಶಾಂತೇಶ್ವರರ ಉತ್ಸವ ಮೂರುತಿಯೊಂದಿಗೆ ಪಲ್ಲಕಿ ಮೆರವಣಿಗೆ ಭಾಜಾ ಭಜಂತ್ರಿ ಸಕಲ ವಾಧ್ಯ ವೈಭವಗಳೊಂದಿಗೆ ಜಾತ್ರೆ ನೆರವೇರುತ್ತದೆ.