ಶರಣರ ಸಾಧನೆಗೆ ಶ್ರೀಶೈಲವೇ ಪ್ರಮುಖ ಕೇಂದ್ರ: ಡಾ.ಚನ್ನಸಿದ್ಧರಾಮಶ್ರೀ
ಬೆಳಗಾವಿ 15: ಶರಣರಿಗೆ ಮತ್ತು ಶ್ರೀಶೈಲಕ್ಕೆ ಅವಿನಾಭಾವ ಸಂಬಂಧ ಇದೆ. ಹೀಗಾಗಿ ಶ್ರೀಶೈಲವನ್ನು ಶಿವಶರಣ ಸ್ವರ್ಗ ಎಂದು ಕರೆಯುತ್ತಾರೆ. ಶರಣರು, ಸಂತರು, ಮಹಾಂತರು ಶ್ರೀಶೈಲವನ್ನೇ ಕೇಂದ್ರವಾಗಿಟ್ಟುಕೊಂಡು ಸಾಧನೆಯ ಶಿಖರ ತಲುಪಿದರು ಎಂದು ಶ್ರೀಶೈಲ್ ಪೀಠದ ಜಗದ್ಗುರು ಚನ್ನಸಿದ್ದರಾಮ ಹೇಳಿದರು.
ಲಿಂಗಾಯತ ಮಹಿಳಾ ಸಮಾಜ ಹಾಗೂ ಕನ್ನಡ ಭವನದ ಸಹಯೋಗದಲ್ಲಿ ನೆಹರುನಗರದ ಕನ್ನಡ ಭವನದಲ್ಲಿ ಸೋಮವಾರ ಆಯೋಜಿಸಿದ್ದ ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಅವರು ಅಶೀರ್ವಚನ ನೀಡಿದರು.
ದೇವರ ದಾಸಿಮಯ್ಯ, ಶಿವಯೋಗಿ ಸಿದ್ಧರಾಮೇಶ್ವರರು ಶ್ರೀಶೈಲದಿಂದ ಸಾಧನೆ ಆರಂಭಿಸಿದರೆ, ಅಲ್ಲಮಪ್ರಭು, ಅಕ್ಕಮಹಾದೇವಿ ಶ್ರೀಶೈಲವನ್ನು ಸಾಧನೆ ಶಿಖರ ಮಾಡಿಕೊಂಡು ಮಲ್ಲಿಕಾರ್ಜುನನಲ್ಲಿ ಐಕ್ಯವಾದರು. ಅಲ್ಲಮಪ್ರಭು ಶ್ರೀಶೈಲ ಬಯಲಲ್ಲೇ ಐಕ್ಯರಾದರು ಎನ್ನುವುದು ಇತಿಹಾಸ ಹೇಳುತ್ತದೆ. ಹೀಗೆ ಶರಣರ ಆದಿ, ಅಂತ್ಯದಲ್ಲಿ ಶ್ರೀಶೈಲವೇ ಕೇಂದ್ರವಾಗಿತ್ತು ಎನ್ನುವುದು ಮರೆಯುವುದಕ್ಕೆ ಆಗುವುದಿಲ್ಲ ಎಂದರು.
ನಮ್ಮ ಜೀವಾತ್ಮಗಳು ಪರಮಾತ್ಮದಿಂದ ಬಂದಿವೆ. ಕೊನೆಗೆ ಪುನಃ ಪರಮಾತ್ಮನನ್ನೇ ಸೇರಬೇಕು. ಅಲ್ಲಿಯವರಿಗೆ ಆತ್ಮಗಳಿಗೆ ಪರಿಪೂರ್ಣ ಸಮಾಧಾನ, ನೆಮ್ಮದಿ ದೊರೆಯುವುದಕ್ಕೆ ಸಾಧ್ಯವಿಲ್ಲ. 'ಭಕ್ತಿ, ಜ್ಞಾನ ಮತ್ತು ವೈರಾಗ್ಯ' ಎಂಬ ಮೂರು ಮಾರ್ಗಗಳು ಭಗವಂತನ ಸಾಕ್ಷಾತ್ಕಾರ ಸೂಕ್ತವಾದವುಗಳು ಭಗವಂತನಿಗೆ ನಮ್ಮನ್ನು ನಾವು ಸಮರ್ಿಸಿಕೊಳ್ಳುವುದು ಭಕ್ತಿ. ಜಗತ್ತೆಲ್ಲವೂ ಶಿವಮಯವಾಗಿದೆ. ಮತ್ತೇನೂ ಇಲ್ಲ. ನಾನು ಕೂಡ ಶಿವಸ್ವರೂಪನೇ ಇದ್ದೇನೆ ಎಂದು ಅರಿವು ಹೊಂದುವುದು "ಜ್ಞಾನ. ಸರ್ವಸ್ವವನ್ನೂ ತ್ಯಾಗ ಮಾಡಿ, ಭಗವಂತನ ಆರಾಧನೆ ಮಾಡುವುದು ವೈರಾಗ್ಯ, ಈ ಮೂರು ಮಾರ್ಗಗಳಿಂದ ಭಗವಂತನ ಸಾಕ್ಷಾತ್ಕಾರ ಪಡೆಯಬಹುದು ಎಂದು ಹೇಳಿದರು.
ಮನುಷ್ಯ ಎಲ್ಲರಿಗಿಂತ ಹೆಚ್ಚು ತನ್ನನ್ನೇ ತಾನು ಪ್ರೀತಿ ಮಾಡುತ್ತಾನೆ. ಹುಟ್ಟಿನಿಂದ ಹಿಡಿದು ಸಾಯುವ ತನಕ ತನ್ನ ಮೇಲೆ ಪ್ರೀತಿ ಇದ್ದೇ ಇರುತ್ತದೆ. ಅದು ಮನುಷ್ಯನ ಸಹಜ ಗುಣ. ತನ್ನ ಮೇಲಿನ ಪ್ರೀತಿ ತೆಗೆದು ದೇವರಿಗೆ ಕೊಡುವುದು ಭಕ್ತಿ, ಇಂತಹ ಭಕ್ತಿ ಇದ್ದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯ. ಇಂತಹ ಭಕ್ತಿ ಅಕ್ಕಮಹಾದೇವಿಗೆ ಮಲ್ಲಿಕಾರ್ಜುನನ ಮೇಲಿತ್ತು. ಮಲ್ಲಿಕಾರ್ಜುನನ್ನು ಸೇರುವವರೆಗೂ ಎಲ್ಲಿಯೂ ನಿಲ್ಲಲಿಲ್ಲ. ಯಾರಿಂದಲೂ ತಡೆಯಲಾಗಲಿಲ್ಲ ಎಂದು ಹೇಳಿದರು.
ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸುನೀತಾ ಪಾಟೀಲ, ಶಾರದ ಪಾಟೀಲ, ವಿದ್ಯಾ ಗೌಡರ ಇತರರಿದ್ದರು.
ಎಲ್ಲರೂ ಒಂದು ಮಾರ್ಗದಲ್ಲಿ ಭಗವಂತನ ಸಾಕ್ಷಾತ್ಕಾರ ಪಡೆದರೆ, ಅಕ್ಕಮಹಾದೇವಿಯು 'ಭಕ್ತಿ, ಜ್ಞಾನ, ವೈರಾಗ್ಯ' ಮೂರೂ ಮಾರ್ಗ ಅನುಸರಿಕೊಂಡು ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡಳು. ಚಿಕ್ಕವಳಿದ್ದಾಗ ವೈರಾಗ್ಯ, ಕಲ್ಯಾಣದಲ್ಲಿದ್ದಾಗ ಜ್ಞಾನ ಮಾರ್ಗ, ಬಳಿಕ ಭಕ್ತಿ ಮಾರ್ಗ ಅನುಸರಿಸಿ ಮಲ್ಲಿಕಾರ್ಜುನನನ್ನು ಸೇರಿದ್ದಾಳೆ. ಅವಳಲ್ಲಿ ಪ್ರಖರ ಭಕ್ತಿ, ಜ್ಞಾನ, ವೈರಾಗ್ಯ ಇತ್ತು. ಅವಳು ಬರೆದ ವಚನಗಳು ಎಲ್ಲ ಶರಣರ ವಚನಗಳಿಗಿಂತ ಶ್ರೇಷ್ಠವಾಗಿದ್ದವು ಎಂದು ಅನುಭವ ಮಂಟಪವೇ ತಿಳಿಸಿತ್ತು ಎಂದರು. ಇದಕ್ಕೂ ಮೊದಲು ಶ್ರೀಶೈಲ ಜಗದ್ಗುಗಳ ಪಾದಪೂಜೆ ಕಾರ್ಯಕ್ರಮ ನಡೆಯಿತು. ಶ್ರೀಗಳು ಆಶೀರ್ವದಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ,ಲಿಂಗಾಯತ ಮಹಿಳಾ ಸಮಾಜ ಅಧ್ಯಕ್ಷರು ಸುನಿತಾ ಪಾಟೀಲ್ ಸ್ವಾಗತಿಸಿದರು ಕಾರ್ಯದರ್ಶಿ ಶಾರದಾ ಪಾಟೀಲ್ ನಿರೂಪಿಸಿದರು ವಿದ್ಯಾ ಗೌಡರ್ ಸಹ ಕಾರ್ಯದರ್ಶಿ ವಂದಿಸಿದರು.
ಗೌರವ ಸಮಿತಿಯ ಎಲ್ಲಾ ಸದಸ್ಯರ ಉಪಸ್ಥಿತರಿದ್ದರು. ಸುನೀತಾ ಡಾ. ರವಿ ಪಾಟೀಲ್ ಭಾರತಿ ಮಠದ ಫೂಲಾವತಿ ಮಾವನೂರೇ ವೀಣಾ ಗಡಿನವರ್ ಇತರರು ಉಪಸ್ಥಿತರಿದ್ದರು.