ಸರಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ: ಶ್ರೀನಿವಾಸ ಮಾನೆ

Steps have been taken to start a computer lab in a government high school: Srinivasa Mane

ಸರಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ: ಶ್ರೀನಿವಾಸ ಮಾನೆ 

ಹಾನಗಲ್ 30: ತಾಲೂಕಿನ ಬೆಳಗಾಲಪೇಟೆ ಮತ್ತು ಹಿರೇಹುಲ್ಲಾಳ ಸರಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಲ್ಯಾಬ್ ಹಾಗೂ ಮಕರವಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. 

     ಸೋಮಸಾಗರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜಿಪಂ ಅನುದಾನದಲ್ಲಿ 24 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಎರಡು ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸರಕಾರಿ ಶಾಲೆಗಳು ಅವಶ್ಯ ಮೂಲಭೂತ ಸೌಲಭ್ಯಗಳನ್ನು ಹೊಂದುವವರೆಗೆ ಶಾಲು, ಮಾಲೆ, ಸನ್ಮಾನ ಸ್ವೀಕರಿಸದೇ ಇರಲು ನಿರ್ಧರಿಸಿದ್ದೇನೆ. ಸನ್ಮಾನಕ್ಕೆ ಅನವಶ್ಯಕವಾಗಿ ಹಣ ವ್ಯಯ ಮಾಡುವುದನ್ನು ನಿಲ್ಲಿಸಿ, ಆ ಹಣವನ್ನೇ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಬಳಸಿದರೆ ಅನುಕೂಲವಾಗಲಿದೆ. ಸರಕಾರದ ಅನುದಾನಕ್ಕೆ ಕಾಯದೇ ಇದುವರೆಗೂ ತಾಲೂಕಿನಲ್ಲಿ 90 ಶಾಲೆಗಳಿಗೆ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ಹಣದಲ್ಲಿ ಅರ್ಧ ಗ್ರಾಮಸ್ಥರು ಸಂಗ್ರಹಿಸಿ ನೀಡಿದರೆ, ಉಳಿದರ್ಧ ಹಣವನ್ನು ವೈಯಕ್ತಿಕವಾಗಿ ಭರಿಸಿದ್ದೇನೆ ಎಂದರು. 

  ಜಾತ್ರೆ, ಹಬ್ಬ,ಹರಿದಿನ, ಉರುಸ್ ಮುಂತಾದ ಕಾರ್ಯಕ್ರಮಗಳಿಗೆ ತಿಳಿದಷ್ಟು ಹಣ ಕೊಡುತ್ತೇನೆ. ಆದರೆ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಗ್ರಾಮಸ್ಥರು ಎಷ್ಟು ಸಂಗ್ರಹಿಸುತ್ತಾರೋ, ಅಷ್ಟೇ ಹಣವನ್ನು ವೈಯಕ್ತಿಕವಾಗಿ ಕೊಡುತ್ತಿದ್ದೇನೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಸುಧಾರಣೆ ತರುವ ಹೊಸದೊಂದು ಪ್ರಯೋಗ ನಮ್ಮ ತಾಲೂಕಿನಿಂದ ಆರಂಭವಾಗಿ, ಯಶಸ್ವಿಯಾಗಿದೆ. ಅದೇ ಈಗ ಹಳೆ ಬೇರು, ಹೊಸ ಚಿಗುರು ಕಾರ್ಯಕ್ರಮವಾಗಿ ರಾಜ್ಯದಲ್ಲಿಯೂ ಅನುಷ್ಠಾನಕ್ಕೆ ಬಂದಿದೆ ಎಂದು ಹೇಳಿದರು. 

  ಬಿಇಒ ವಿ.ವಿ.ಸಾಲಿಮಠ ಮಾತನಾಡಿದರು.ಎಸ್‌ಡಿಎಂಸಿ ಅಧ್ಯಕ್ಷ ಅಜ್ಜಪ್ಪ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪ್ರೇಮಾ ಮಾಯಕ್ಕನವರ, ಉಪಾಧ್ಯಕ್ಷೆ ನಾಗವ್ವ ಕತ್ತಿ, ಸದಸ್ಯ ದಾವಲಸಾಬ ನಾಗನೂರ, ನಿವೃತ್ತ ಪ್ರಾಚಾರ್ಯ ಸಿ.ಎಸ್‌.ಬಡಿಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ ಇದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.