ದೇಶದ ಸರ್ವಶ್ರೇಷ್ಠ ಗ್ರಂಥ ಸಂವಿಧಾನ: ಶಾಸಕ ರಾಜುಗೌಡ
ದೇವರಹಿಪ್ಪರಗಿ 26: ಸಂವಿಧಾನವು ದೇಶದ ಸರ್ವ ಧರ್ಮಗ್ರಂಥಗಳಿಗಿಂತಲೂ ಶ್ರೇಷ್ಠ ಹಾಗೂ ಪವಿತ್ರ ಗ್ರಂಥವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನ ಪಾಲಿಗೆ ರಕ್ಷಾ ಕವಚವಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.ಪಟ್ಟಣದ ಶಾಸಕರ ಮಾದರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾಗಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಪಂಚದ ಹಲವಾರು ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ, ಭಾರತೀಯ ಸಮಾಜಕ್ಕೆ ಪೂರಕವಾಗುವ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿ ದೇಶಕ್ಕೆ ಅರೆ್ಣ ಮಾಡಿದ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಕಾರ್ಯ ಚಿರಸ್ಮರಣೀಯ. ವಿವಿಧೆತೆಯಲ್ಲಿ ಏಕತೆ ಇರುವುದು ಭಾರತ ದೇಶದ ವಿಶೇಷತೆಯಾಗಿದೆ. ಅಂತೆಯೇ ಭಾರತದ ಎಲ್ಲ ನಾಗರಿಕರಿಗೆ ಸಮಾನವಾದ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಹಾಗೂ ಹಕ್ಕು ಒದಗಿಸಲಾಗಿದೆ’ ಸಂವಿಧಾನದಿಂದ ನಾನು ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವಾರು ಜನರು ತ್ಯಾಗ, ಬಲಿದಾನ, ಸಂಗೋಳ್ಳಿ ರಾಯಣ್ಣನವರ ಶೌರ್ಯ, ಆದರ್ಶ ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಬರುವಂತ ದಿನಗಳಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಹತ್ತಿರ ಸಭಾ ಭವನ ಹಾಗೂ ಸುಮಾರು 1ಕೋಟಿ ರೂ ವೆಚ್ಚದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು, ನೂತನ ತಾಲೂಕಿಗೆ ಬೇಕಾದ ಮಿನಿವಿಧಾನಸೌಧ, ಸರ್ಕಾರಿ ಕಚೇರಿಗಳನ್ನು, ರಸ್ತೆ, ಸಿ.ಸಿ.ರಸ್ತೆ ಹಾಗೂ ಶಾಲಾ ಕೊಠಡಿ, ಶೌಚಾಲಯ, ಕಾಂಪೌಂಡ್ ಸೇರಿದಂತೆ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ಬೇಕಾಗುವ ಮೂಲಭೂತ ಸೌಕರ್ಯಗಳು ಒದಗಿಸುವ ಹಾಗೂ ಪಟ್ಟಣ ಸೇರಿದಂತೆ ಮತಕ್ಷೇತ್ರದ ಅಭಿವೃದ್ಧಿ ಪಥದತ್ತ ಸಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದ ಅವರು, ಭಾರತದ ಸಂವಿಧಾನದಡಿಯಲ್ಲಿ ಬಡವ ಬಲ್ಲಿದನೆಂಬ ಬೇಧ ಭಾವವಿಲ್ಲದೆ ನ್ಯಾಯವನ್ನು ಎತ್ತಿ ಹಿಡಿದಿರುವ ಬೃಹತ್ ಲಿಖಿತ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು ಎಂದರು.
ನಂತರ ಹಲವಾರು ಶಾಲೆಯ ವಿದ್ಯಾರ್ಥಿಗಳು ಹಾಡು, ದೇಶಭಕ್ತಿ ಗೀತೆಗಳ ನೃತ್ಯ ಮಾಡುವ ಮೂಲಕ ರಂಜಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪ.ಪಂ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಿಬಿನಾಳ, ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಪಿ.ಎಸ್.ಐ ಬಸವರಾಜ ತಿಪ್ಪರಡ್ಡಿ, ತಾ.ಪಂ ಇಒ ಭಾರತಿ ಚೆಲುವಯ್ಯ, ಕಸಾಪ ತಾಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಸ್ಥಳೀಯ ಶಾಲೆಯ ಎಸ್.ಡಿ. ಎಂ.ಸಿ ಅಧ್ಯಕ್ಷ ಸಂಪತ್ ಜಮಾದಾರ, ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು, ಪ್ರಮುಖರು, ಗಣ್ಯರು, ವಿವಿಧ ಶಾಲಾ, ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು, ಕಂದಾಯ, ಪ.ಪಂ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.