ಸಂಯುಕ್ತ ಆಶ್ರಯದಲ್ಲಿ ನಡೆದ ಶರಣ ಚಿಂತನ ಮಾಲಿಕೆ 7ರ ಉಪೇಕ್ಷಿತ ವಚನಕಾರರ ಕಾರ್ಯಕ್ರಮ
ಮುಂಡರಗಿ 14 : ನುಡಿದಂತೆ ನಡೆದ ಶರಣರು ಗೃಹಸ್ಥಾಶ್ರಮದಲ್ಲಿ ಕೂಡ ವೈಚಾರಿಕ ಬದುಕನ್ನು ನಡೆಸಿದರು. ಅವರ ನಡೆ-ನುಡಿಗಳಲ್ಲಿ ಯಾವುದೇ ರೀತಿಯ ಬೇಧ ಇರಲಿಲ್ಲ. ಅಂದಿನ ಶರಣರು ಹಾಸ್ಯ ಪ್ರಜ್ಞೆಯಿಂದ ಪ್ರಸಿದ್ಧಿಯನ್ನು ಪಡೆದು, ಚುಚ್ಚು ಮಾತುಗಳನ್ನಾಡದೆ, ಮೆಚ್ಚು ಮಾತುಗಳನ್ನಾಡುವ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಎ.ವೈ.ನವಲಗುಂದ ಹೇಳಿದರು.
ಪಟ್ಟಣದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮುಂಡರಗಿ, ಶರಣ ಸಾಹಿತ್ಯ ಪರಿಷತ್ತು ಮುಂಡರಗಿ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆ 'ಸೌರಭ' ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶರಣ ಚಿಂತನ ಮಾಲಿಕೆ- 7ರ ಉಪೇಕ್ಷಿತ ವಚನಕಾರರು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶರಣರು ತಾತ್ವಿಕ ತಳಹದಿಯ ಮೇಲೆ ಸಮಾಜವನ್ನು ಕಟ್ಟಿದರು. ಶರಣರಲ್ಲಿ ಹಾಸ್ಯ ಪ್ರಜ್ಞೆಯೂ ಇತ್ತು ಎಂಬುದಕ್ಕೆ ಸಾಕ್ಷಿಯಾಗಿ ಅವರಲ್ಲಿ 61ಕ್ಕೂ ಹೆಚ್ಚು ಜನ ನಗೆ ಮಾರಿಗಳು ಇದ್ದರು. ಅಂದಿನ ಕಲ್ಯಾಣದ ಏಳುನೂರ ಎಪ್ಪತ್ತು ಗಣಂಗಳಲ್ಲಿ ನಗಿಸುವ ಕಾಯಕವನ್ನು ಮಾಡುತ್ತಿದ್ದ. ಅತಿ ಹೆಚ್ಚು ಜನಪ್ರಿಯರಾಗಿದ್ದ ಒಟ್ಟು ನಾಲ್ಕು ಜನ ನಗೆಮಾರಿಗಳಲ್ಲಿ ಮೊದಲನೆಯಾತ ಅರಿವಿನ ಮಾರಿ ತಂದೆ, ಎರಡನೆಯವರು ಮನಸೊಂದ ಮಾರಿ ತಂದೆ, ಮೂರನೆಯವರು ನಗೆ ಮಾರಿ ತಂದೆ ಮತ್ತು ನಾಲ್ಕನೆಯವರು ಕಂಬದ ಮಾರಿತಂದೆ. ಇವರನ್ನು ತಂದೆ ಎಂದು ಕರೆಯಲು ಕಾರಣ ಇವರು ಅರಿವಿನ ಗುರುಗಳಾಗಿದ್ದರು. ಜಾನಪದ ಮೂಲದ ಸೊಗಡಿನಲ್ಲಿ ನಗೆಯ ಸೆಲೆಯನ್ನು ಉಕ್ಕಿಸುವ ನೈಪುಣ್ಯತೆಯನ್ನು ಹೊಂದಿದ್ದು, ತಮ್ಮ ಕೆಲಸವನ್ನು ದುಡಿಮೆ ಎಂದು ನೋಡದೇ ಕಾಯಕ ಎಂದು ಭಾವಿಸಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಆತನ ಕಾಯಕ ಪ್ರಜ್ಞೆಯನ್ನು ಮೆಚ್ಚಿದ ಪಾರ್ವತಿ ಪರಮೇಶ್ವರರು ಆತನನ್ನು ತಮ್ಮೊಂದಿಗೆ ಕೈಲಾಸಕ್ಕೆ ಬರಲು ಆಹ್ವಾನಿಸಿದಾಗ ಕೈಲಾಸದಲ್ಲಿರುವ ಎಲ್ಲರೂ ಕೆಲಸ ಮಾಡದ ಮೈಗಳ್ಳರು, ಅವರೊಂದಿಗೆ ತನಗೆ ಸರಿ ಹೊಂದದು ಎಂದು ನಿರಾಕರಿಸಿದ ಅಪ್ಪಟ ಕಾಯಕ ನಿಷ್ಠ ಜೀವಿ ನಗೆ ಮಾರಿ ತಂದೆ ಎಂದು ಅವರ ಜೀವನ ದೃಷ್ಟಾಂತಗಳನ್ನು ತಮ್ಮ ಉಪನ್ಯಾಸದಲ್ಲಿ ಕಣ್ಣಿಗೆ ಕಟ್ಟುವಂತೆ ಅಳವಂಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ನೀಲಪ್ಪ ಹಕ್ಕಂಡಿಯವರು ಬಣ್ಣಿಸಿ ಹೇಳಿದರು.
ಪಂಡಿತನಿಗೂ ಕೂಡ ಸಾಧ್ಯವಾಗದ ಒಗ್ಗಟಿನ ಭಾಷೆಯನ್ನು ಬಳಸಿದ ಜನಪದರ ಜಾಣ್ಮೆಯನ್ನು ಕೊಂಡಾಡಿದ ಅವರು ಅನುಭವ ಮಂಟಪದ ಮೂಲಕ ತಮ್ಮ ಅರಿವಿನ ಪ್ರಜ್ಞೆಯನ್ನು ಜಾಗೃತಿಗೊಳಿಸಿಕೊಂಡ ಶರಣ ಕುಲವು ಕನ್ನಡ ಸಾಹಿತ್ಯದ ಗುಡಿ ಗೋಪುರಕ್ಕೆ ವಚನ ಸಾಹಿತ್ಯ ರಚನೆಯ ಮೂಲಕ ಚಿನ್ನದ ಕಳಶವನ್ನು ಬಸವಾದಿ ಶಿವ ಶರಣರ ತೊಡಿಸಿದರು ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೋ.ಆರ್.ಎಲ್.ಪೊಲೀಸ್ ಪಾಟೀಲ್, ಕಸಾಪ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ವೀಣಾ ಹೇಮಂತ್‌ಗೌಡ ಪಾಟೀಲರು ಸರ್ವರನ್ನು ಸ್ವಾಗತಿಸಿದರು.ಈ ವೇಳೆ ಮಕ್ಕಳ ಸಾಹಿತಿ ಡಾ.ನಿಂಗೂ ಸೊಲಗಿ,ಅಕ್ಕಮ್ಮ ಕೊಟ್ಟೂರ್ ಶೆಟ್ಟರ್, ಜಯಶ್ರೀ ಅಳವಂಡಿ, ರತ್ನಾ ಕಾಗನೂರ್‌ಮಠ, ಕಾವೇರಿ ಬೋಲಾ, ಮಂಗಳಾ ಇಟಗಿ, ಮಾನಸಾ ಅಳವಂಡಿ, ವಾಸಂತಿ ಯಾಳಗಿ, ಮಧುಮತಿ ಇಳಕಲ್, ಎಮ್.ಎಸ್.ಹೊಟ್ಟಿನ್, ವಿ.ಎಫ್.ಅಂಗಡಿ, ವಿ.ಜೆ.ಹಿರೇಮಠ, ಲಿಂಗರಾಜ್ ದಾವಣಗೆರೆ, ಎಂ.ಐ.ಮುಲ್ಲಾ, ಕೃಷ್ಣ ಸಾಹುಕಾರ, ಮಹೇಶ್.ಎಚ್.ಎಸ್, ಗುಬ್ಬಿಯವರು ಹಾಜರಿದ್ದರು.