ಪುರಾಣ ಪ್ರಸಿದ್ಧ ಪಾತ್ಮವ್ವದೇವಿಯ ಕಲ್ಯಾಣ ಮಹೋತ್ಸವ

ಲೋಕದರ್ಶನ ವರದಿ

ರಾಣೆಬೆನ್ನೂರ14: ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ತಾಲೂಕಿನ ಸುಕ್ಷೇತ್ರ ಮೇಡ್ಲೇರಿಯ ಕರಿಯಪ್ಪ ಸ್ವಾಮಿ ಕಾಮವ್ವದೇವಿ ಮತ್ತು ದಿಳ್ಳೆಪ್ಪಸ್ವಾಮಿ-ಪಾತ್ಮವ್ವದೇವಿಯ ಕಲ್ಯಾಣ ಮಹೋತ್ಸವ ನ. 16ರಂದು ಮಧ್ಯಾಹ್ನ 12ಕ್ಕೆ ಕ್ಷೇತ್ರದ ಹೊರಬೀರೇಶ್ವರ ಸನ್ನಿಧಿಯಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. 20 ವರ್ಷಗಳ ನಂತರ ಕಾರ್ಯಕ್ರಮ ನಡೆಯುತ್ತಿರುವುದು ಇಲ್ಲಿನ ವಿಶೇಷ. 

   ಪೌರಾಣಿಕ ಹಿನ್ನೆಲೆ..: ಸುತ್ತಲಿನ 12 ಹಳ್ಳಿಗಳ ಪ್ರಮುಖ ದೈವವಾದ ಕರಿಯಪ್ಪ ಸ್ವಾಮಿಯ ಅಪ್ಪಣೆಯಂತೆ ದಿಳ್ಳೆಪ್ಪ ಸ್ವಾಮಿ (ದಿಲ್ಲಿ ಸುಲ್ತಾನ) ಯುದ್ಧಕ್ಕೆ ತೆರಳುತ್ತಿದ್ದರಂತೆ. ಇಲ್ಲಿನ ಕುರಿಗಾಯಿಗರು ತಮ್ಮ 19 ವರ್ಷದ ಆದಾಯದ ಒಂದು ಭಾಗವನ್ನು ಕ್ರೂಢೀಕರಿಸಿ ಉಭಯ ದೇವರ ಕಲ್ಯಾಣವನ್ನು ಆಚರಿಸುತ್ತ ಬಂದಿದ್ದಾರೆ. ವಯೋಸಹಜ ಮನುಷ್ಯರು 20ನೇ ವಯಸ್ಸಿಗೆ ಬಲಶಾಲಿಯಾಗುತ್ತಾರೆ ಎಂಬ ರೂಢಿಯಂತೆ ದೇವರುಗಳಲ್ಲಿ ಶಕ್ತಿ ಹೆಚ್ಚಲಿ ಎಂಬ ಉದ್ದೆ?ಶದಿಂದ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. 

    ಸೌಹಾರ್ದತೆಗೆ ಸಾಕ್ಷಿ..: ಕಲ್ಯಾಣ ಮಹೋತ್ಸವ ನಡೆಸುವ ರೀತಿ ರಿವಾಜುಗಳು ಇಡೀ ನಾಡಿಗೆ ಮಾರ್ಗದಶರ್ಿಯಾಗಿದೆ. ಕುರುಬ, ಲಿಂಗಾಯತ, ವಿಶ್ವಕರ್ಮ, ಗಂಗಾಮತ, ಮಡಿವಾಳ, ವಾಲ್ಮೀಕಿ, ಬಂಜಾರ, ವಿವಿಧ ಸಮಾಜದವರು ಒಳಗೊಂಡಂತೆ ಮುಸ್ಲಿಂ ಸಮುದಾಯದವರು ಒಗ್ಗೂಡಿ ದೇವರ ಕಲ್ಯಾಣ ಮಹೋತ್ಸವ ಆಚರಿಸುತ್ತಾರೆ. ಕಾರ್ಯಕ್ರಮದ ಸಂದರ್ಭದಲ್ಲಿ ಗ್ರಾಮದ ವಿವಿಧ ಸಮುದಾಯದವರು ಒಂದೊಂದು ಜವಾಬ್ದಾರಿಯನ್ನು ವಹಿಸಿಕೊಂಡು ಕಲ್ಯಾಣ ಮಹೋತ್ಸವ ಆಚರಿಸುವುದು ಸೌಹಾರ್ದತೆಗೆ ಸಾಕ್ಷಿಯಾಗಿದೆ. 

   ವಧು-ವರಯರ್ಾರು..: ಕರಿಯಪ್ಪ ಸ್ವಾಮಿ ಕಾಮವ್ವದೇವಿ ವಿವಾಹದಲ್ಲಿ ಸಳ್ಯಕ್ಕಪ್ಪ ಕರಿಯಪ್ಪ ಪೂಜಾರ ಹಾಗೂ ಕನ್ನಮ್ಮ ಸಳ್ಯಕ್ಕಪ್ಪ ಪೂಜಾರ ಹಾಗೂ ದಿಳ್ಳೆಪ್ಪಸ್ವಾಮಿ-ಪಾತ್ಮವ್ವದೇವಿಯ ವಿವಾಹದಲ್ಲಿ ಮೇಟೆಪ್ಪ ಲಕ್ಮಪ್ಪ ಪೂಜಾರ-ಗಂಗಮ್ಮ ಮೇಟಪ್ಪ ಪೂಜಾರ ಪಾಲ್ಗೊಳ್ಳುತ್ತಾರೆ. ದಿಳ್ಳೆಪ್ಪ ಸ್ವಾಮಿ (ದಿಲ್ಲಿ ಸುಲ್ತಾನ) ಮತ್ತು ಪಾತ್ಮವ್ವದೇವಿ (ಫಾತೀಮ)ಯ ವಿವಾಹ ಕಾರ್ಯಕ್ರಮಗಳು ಮುಸ್ಲಿಂ ಪದ್ಧತಿಯಂತೆ ನಡೆಸುವುದು ವಿಶೇಷವಾಗಿದ್ದು, ಕುರಾನ್ ಪಠಣ, ಹೊದಿಕೆ ಹೊದಿಸುವುದು ಮಾಡಲಾಗುತ್ತದೆ. ವಧುವಿನ ಸಂಬಂಧಿಕರಾಗಿ ಗುರಿಕಾರ ವಂಶಸ್ಥರು ಪಾಲ್ಗೊಂಡರೆ, ವರನ ಸಂಬಂಧಿಕರಾಗಿ ಪೂಜಾರ ವಂಶಸ್ಥರು ಪಾಲ್ಗೊಂಡು ವಿಜೃಂಭಣೆಯಿಂದ ವಿವಾಹ ಮಹೋತ್ಸವ ಆಚರಿಸುವುದು ಕಳೆದೆರಡು ಶತಮಾನಗಳಿಂದ ರೂಢಿಯಾಗಿ ಬಂದಿದೆ. 

      ವಿವಾಹ ಕಾರ್ಯಕ್ರಮ 16ರಂದು.: ನ. 14ರಂದು ವಿವಾಹ ಕಾರ್ಯಕ್ರಮದ ಧಾಮರ್ಿಕ ಕಾರ್ಯಕ್ರಮ ಆರಂಭ (ಲಗ್ನ ಕಟ್ಟುವುದು), 15ರಂದು ಗ್ರಾಮದ ಒಳಭಾಗದ ದೇವಸ್ಥಾನದಿಂದ ಹೊರಬೀರೇಶ್ವರ ದೇಗುಲದವರೆಗೆ ವಧು-ವರರ ಮೆರವಣಿಗೆ, ನ. 16ರಂದು ವಿಜೃಂಭಣೆಯಿಂದ ವಿವಾಹ ಮಹೋತ್ಸವ ನಡೆಯುತ್ತದೆ. ಜತೆಗೆ ಸಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಲಿದೆ. 17ರಂದು ಮತ್ತೆ ಹೊರಗುಡಿಯಿಂದ ದೇವರ ಪುರಪ್ರವೇಶದೊಂದಿಗೆ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ. 

     ಸಭಾ ಕಾರ್ಯಕ್ರಮ..: ತಾಲೂಕಿನ ಮೇಡ್ಲೇರಿಯ ಉಭಯ ದೇವರುಗಳ ಕಲ್ಯಾಣ ಮಹೋತ್ಸವ ಅಂಗವಾಗಿ ನ. 16ರಂದು ಮಧ್ಯಾಹ್ನ 12ಕ್ಕೆ ಕ್ಷೇತ್ರದ ಹೊರಬೀರೇಶ್ವರ ರಂಗಮಂದಿರದಲ್ಲಿ ಹಾಲುಮತ ಸಮಾಜದ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕಾರ್ಯಕ್ರಮ ಉದ್ಘಾಟಕರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರ ಆಗಮಿಸಲಿದ್ದಾರೆ.

     ಅರಣ್ಯ ಮತ್ತು ಪರಿಸರ ಖಾತೆ ಸಚಿವ ಆರ್. ಶಂಕರ ಅಧ್ಯಕ್ಷತೆ ವಹಿಸುವರು. ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ವರ್ತರ ಪ್ರಕಾಶ, ಬಸವರಾಜ ಶಿವಣ್ಣನವರ, ಹರಿಹರ ಶಾಸಕ ಎಸ್. ರಾಮಪ್ಪ, ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಆರ್. ಶಂಕರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಬಿ. ನಾಗರಾಜ ಸೇರಿ ವಿವಿಧ ಪಕ್ಷಗಳ ಮುಖಂಡರು, ಗಣ್ಯರು ಆಗಮಿಸಲಿದ್ದಾರೆ.